ಬೆಂಗಳೂರು:ರಾಜ್ಯದ ಮೂರು ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮತದಾರರ ಮನಗೆಲ್ಲಲು ಇಂದು ಅಂತಿಮ ಕಸರತ್ತು ನಡೆಸಲಿದ್ದಾರೆ. ಮೇ 10ರ (ನಾಳೆ) ಚುನಾವಣಾ ಜಿದ್ದಾಜಿದ್ದಿನ ಬಹಿರಂಗ ಪ್ರಚಾರ ನಿನ್ನೆ (ಸೋಮವಾರ) ಸಂಜೆ 6 ಗಂಟೆಗೆ ಕೊನೆಗೊಂಡಿದೆ. ಆ ಮೂಲಕ 40 ದಿನಗಳ ಅಬ್ಬರದ ಪ್ರಚಾರ ಮುಕ್ತಾಯ ಕಂಡಿದೆ. ಇಂದು ಅಭ್ಯರ್ಥಿಗಳಿಗೆ ಮನೆ ಮನೆ ಪ್ರಚಾರಕ್ಕೆ ಮಾತ್ರ ಅವಕಾಶವಿದೆ.
ನಾಳೆ ಮತದಾನ:ನಾಳೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ರ ವರೆಗೆ ರಾಜ್ಯದ 224 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮತದಾನವಾಗಿ 2 ದಿನಗಳ ಬಳಿಕ ಅಂದ್ರೆ ಮೇ 13 ರಂದು ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಹೊರಬೀಳಲಿದೆ.
48 ತಾಸು ಶೂನ್ಯ ವೇಳೆ: ಮತದಾನ ಮುಕ್ತಾಯಕ್ಕೆ ನಿಗದಿಪಡಿಸಿದ ಸಮಯದೊಂದಿಗೆ ಕೊನೆಗೊಳ್ಳುವ 48 ಗಂಟೆಗಳ ಅವಧಿಯಲ್ಲಿ ಸಾರ್ವಜನಿಕ ಸಭೆ, ಬಹಿರಂಗ ಪ್ರಚಾರ ನಡೆಸುವುದನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ನಿಷೇಧಿಸಿದೆ. ಈ ಅವಧಿಯಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಮಾಧ್ಯಮಗಳಿಗೆ ನಿರ್ಬಂಧವಿದೆ.
144 ಸೆಕ್ಷನ್ ಜಾರಿ:ಚುನಾವಣೆ ಒಳಪಡುವ ಕ್ಷೇತ್ರಗಳಲ್ಲಿ ಕ್ರಿಮಿನಲ್ ಪ್ರೊಸೀಜರ್ ಕೋಡ್(ಸಿಆರ್‌ಪಿಸಿ) 1973 ಸೆಕ್ಷನ್ 144 ರ ಅಡಿಯಲ್ಲಿ ಮತದಾನ ಮುಕ್ತಾಯಕ್ಕೆ ಕೊನೆಗೊಳ್ಳುವ 48 ಗಂಟೆಗಳ ಕಾಲವಧಿಯಲ್ಲಿ ಕಾನೂನುಬಾಹಿರ ಸಭೆಗಳಿಗೆ ನಿಷೇಧವಿದೆ. ನಿಷೇಧಾಜ್ಞೆ ಆದೇಶದ ಅಡಿಯಲ್ಲಿ ನಿರ್ಬಂಧಿತ ಪ್ರದೇಶದಲ್ಲಿ 5 ಜನರಿಗಿಂತ ಹೆಚ್ಚು ವ್ಯಕ್ತಿಗಳು ಸೇರುವುದು, ಒಟ್ಟಿಗೆ ಸಂಚರಿಸಲು ಅನುಮತಿ ಇರುವುದಿಲ್ಲ. ಮನೆ-ಮನೆ ಪ್ರಚಾರಕ್ಕೆ ಸಂಬಂಧಿಸಿದ ಭೇಟಿಗೆ ನಿರ್ಬಂಧ ಇಲ್ಲ.