ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಪದ್ಮನಾಭನಗರ ಪ್ರತಿಷ್ಠಿತ ಕ್ಷೇತ್ರವಾಗಿದೆ. ಮೊದಲು ಪದ್ಮನಾಭನಗರ ರಾಜ್ಯದ ಅತೀ ದೊಡ್ಡ ವಿಧಾನಸಭಾ ಕ್ಷೇತ್ರ ಎಂಬ ಹೆಗ್ಗಳಿಕೆ ಪಡೆದಿದ್ದ ಉತ್ತರಹಳ್ಳಿ ಎಂಬ ಕ್ಷೇತ್ರದ ಭಾಗವಾಗಿತ್ತು. ಆದರೆ, ಈ ಕ್ಷೇತ್ರವು 2008ರಲ್ಲಿ ವಿಧಾನಸಭಾ ಕ್ಷೇತ್ರಗಳ ವಿಂಗಡಣೆ ಜಾರಿಗೆ ಬಂದ ನಂತರ ಹೊಸದಾಗಿ ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದಿತು. ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ರಚನೆಯಾದ ಮೇಲೆ ಮೂರು ಬಾರಿಯೂ ಆರ್. ಅಶೋಕ ‘ಹ್ಯಾಟ್ರಿಕ್’ ಶಾಸಕರಾಗಿದ್ದರು. ಉತ್ತರಹಳ್ಳಿ ಕ್ಷೇತ್ರವಾಗಿದ್ದಗಲೂ ಸತತ ಗೆಲುವು ಸಾಧಿಸಿದ್ದರು. ಇದೀಗ ಏಳನೇ ಬಾರಿ ಪದ್ಮನಾಭನಗರದಿಂದಲೇ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಬಿಜೆಪಿಯ ಪ್ರಭಾವಿ ನಾಯಕ, ಹಿರಿಯ ಸಚಿವರಾಗಿರುವ ಆರ್. ಅಶೋಕ್ ಅವರಿಗೆ ಈ ಬಾರಿ ರಣಕಣದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರಬಲ ಪೈಪೋಟಿ ನೀಡಲು ಮುಂದಾಗಿವೆ. ಕಾಂಗ್ರೆಸ್ ಹಾಗೂ ಜೆಡಿಎಸ್ನಿಂದ ಅಭ್ಯರ್ಥಿ ಘೋಷಿಸಿದ ಬಳಿಕ ಕ್ಷೇತ್ರದ ಚುನಾವಣಾ ಚಿತ್ರಣ ಸಿಗಲಿದೆ. ಆದರೆ, ಬಿಜೆಪಿ ಭದ್ರಕೋಟೆಯಾಗಿರುವ ಪದ್ಮನಾಭನಗರದಲ್ಲಿ ವಿಜಯ ಪತಾಕೆ ಹಾರಿಸುವುದು ಸದ್ಯಕ್ಕೆ ಇತರ ಪಕ್ಷಗಳಿಗೆ ಅಷ್ಟು ಸುಲಭದ ಮಾತಲ್ಲ. ಬಿಜೆಪಿ ಭದ್ರಕೋಟೆ ಮುರಿಯಲು ಕಾಂಗ್ರೆಸ್, ಜೆಡಿಎಸ್ ಕೂಡ ತಮ್ಮದೇ ರಣತಂತ್ರ ರೂಪಿಸುತ್ತಿವೆ.
ಬಿಜೆಪಿ ರಣಕಣದಲ್ಲಿ ತ್ರಿಕೋನ ಸ್ಪರ್ಧೆ:ಬಿಜೆಪಿಯಿಂದ ಈ ಬಾರಿಯೂ ಆರ್. ಅಶೋಕ ಅವರೇ ಅಭ್ಯರ್ಥಿಯಾಗುವ ಸಾಧ್ಯತೆ ನಿಚ್ಚಳವಾಗಿದೆ. ಬಿಜೆಪಿಯಲ್ಲಿ ಕೆಲ ಮಾಜಿ ಕಾರ್ಪೊರೇಟರ್ಗಳು ಕ್ಷೇತ್ರದ ಮೇಲೆ ಕಣ್ಣಿದ್ದರೂ, ಹೈಕಮಾಂಡ್ ಗೆಲುವಿನ ಹುರಿಯಾಳು ಆರ್.ಅಶೋಕ್ ಗೆ ಮಣೆ ಹಾಕುವುದು ಖಚಿತ. ಬಿಜೆಪಿಯ ಭದ್ರಕೋಟೆಯಲ್ಲಿ ತ್ರಿಕೋನ ಸ್ಪರ್ಧೆ ಇದೆ.
ಪದ್ಮನಾಭನಗರ ಕ್ಷೇತ್ರದ ಮಾಹಿತಿ ಕಾಂಗ್ರೆಸ್‌ನಲ್ಲಿ ಗುತ್ತಿಗೆದಾರ ರಘುನಾಥ ನಾಯ್ಡು ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಕಳೆದ ಎರಡು ಮೂರು ವರ್ಷದಿಂದ ಕ್ಷೇತ್ರದಲ್ಲಿ ಸಕ್ರಿಯರಾಗಿ ಓಡಾಡುತ್ತಿದ್ದಾರೆ. ಈ ಬಾರಿ ಟಿಕೆಟ್ ಪಡೆದು, ನಾಯ್ಡು ಸಮುದಾಯ ಸೇರಿ ಕಾಂಗ್ರೆಸ್‌ನ ಮೂಲ ಮತಗಳನ್ನು ಸೆಳೆಯುವ ಲೆಕ್ಕಾಚಾರ ಹಾಕಿದ್ದಾರೆ. ಜೊತೆಗೆ ಮಾಜಿ ಮೇಯರ್ ವೆಂಕಟೇಶ ಮೂರ್ತಿ, ಕಳೆದ ಬಾರಿ ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿದ್ದ ಗುರಪ್ಪ ನಾಯ್ಡು, ಸಂಜಯ್ ಗೌಡ ಕಾಂಗ್ರೆಸ್ ಟಿಕೆಟ್ ರೇಸ್ನಲ್ಲಿದ್ದಾರೆ.
ಇತ್ತ ಜೆಡಿಎಸ್ ಕೂಡ ಈ ಬಾರಿ ಬಿಜೆಪಿಗೆ ಟಕ್ಕರ್ ಕೊಡಲು ಮುಂದಾಗಿದೆ. ತನ್ನದೇ ಆದ ಮತ ಬ್ಯಾಂಕ್ ಹೊಂದಿರುವ ಜೆಡಿಎಸ್ ಯಾರನ್ನು ಕಣಕ್ಕೆ ಇಳಿಸಲಿದೆ ಎಂಬುದು ಇನ್ನೂ ನಿಗೂಢವಾಗಿದೆ. ಕಳೆದ ಬಾರಿ ವಿ.ಕೆ.ಗೋಪಾಲ್ ತೀವ್ರ ಪೈಪೋಟಿ ನೀಡಿದ್ದರು. ಕಾಂಗ್ರೆಸ್ಗಿಂತ ಕ್ಷೇತ್ರದಲ್ಲಿ ಜೆಡಿಎಸ್ ಬಲ ಹೆಚ್ಚಿದೆ. ಕ್ಷೇತ್ರದಲ್ಲಿ ಮೂರು ಪಕ್ಷಗಳ ಅಭ್ಯರ್ಥಿಗಳ ಹೆಸರು ಅಂತಿಮವಾದ ಬಳಿಕ ಕ್ಷೇತ್ರದ ರಣಕಣ ಇನ್ನೂ ರಂಗೇರಲಿದೆ.
2018ರ ಚುನಾವಣೆ ಫಲಿತಾಂಶ: ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮಧ್ಯೆ ಜಿದ್ದಾಜಿದ್ದಿ ಇರುತ್ತದೆ. ಆದರೆ, ಕಳೆದ ಆರು ಬಾರಿ ಸತತವಾಗಿ ಆರ್.ಅಶೋಕ್ ಕ್ಷೇತ್ರದಲ್ಲಿ ಗೆಲುವಿನ ನಾಗಾಲೋಟ ಇದೆ. ಕಳೆದ ಬಾರಿಯ ಚುನಾವಣೆಯಲ್ಲಿ ಆರ್.ಅಶೋಕ್ 77,868 ಮತಗಳನ್ನು ಗಳಿಸಿ ಭರ್ಜರಿ ಗೆಲುವು ಸಾಧಿಸಿದ್ದರು. ಜೆಡಿಎಸ್ ಅಭ್ಯರ್ಥಿಯಾಗಿದ್ದ ವಿ.ಕೆ.ಗೋಪಾಲ್ 45,702 ಮತಗಳಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ 33,400 ಮತ ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಬಿಜೆಪಿಯ ಆರ್.ಅಶೋಕ್ ಬರೋಬ್ಬರಿ 32,166 ಅಂತರದಿಂದ ಗೆಲುವು ಸಾಧಿಸಿದ್ದರು. ಆ ಮೂಲಕ ಆರ್.ಅಶೋಕ್ ಕ್ಷೇತ್ರದಲ್ಲಿ ಒಟ್ಟು ಮತಗಳ ಪೈಕಿ ಶೇ.48ರಷ್ಟು ಮತ ಪ್ರಮಾಣ ಗಳಿಸಿದ್ದರೆ, ಜೆಡಿಎಸ್ ಅಭ್ಯರ್ಥಿ ಶೇ.28ರಷ್ಟು ಮತ ಪ್ರಮಾಣ ಗಳಿಸಿದ್ದರು. ಇನ್ನು, ಕಾಂಗ್ರೆಸ್ ಮತಗಳಿಕೆ ಪ್ರಮಾಣ ಶೇ.20ರಷ್ಟು ಇತ್ತು.
ಸಮಸ್ಯೆಗಳಿಂದ ಹೊರತಲ್ಲ ಪದ್ಮನಾಭನಗರ: ಪದ್ಮನಾಭನಗರ ಕ್ಷೇತ್ರವೂ ಸಮಸ್ಯೆಗಳಿಂದ ಹೊರತಾಗಿಲ್ಲ. ದೊಡ್ಡ ಪ್ರಮಾಣದ ಸಮಸ್ಯೆಗಳಿಲ್ಲವಾದರೂ, ಸ್ಮಶಾನ, ಆಟದ ಮೈದಾನ, ಶಾಲೆ ಕಾಲೇಜುಗಳು ಪದ್ಮನಾಭನಗರ ಕ್ಷೇತ್ರದಲ್ಲಿ ಅಗತ್ಯಕ್ಕನುಸಾರವಾಗಿಲ್ಲ. ಶುದ್ಧ ಕುಡಿಯುವ ನೀರಿನ ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಸ್ಥಳೀಯರ ಪ್ರಮುಖ ಆರೋಪವಾಗಿದೆ.
ಕ್ಷೇತ್ರದಲ್ಲಿ ಕೊಳೆಗೇರಿ ಹಾಗೂ ಬಡವರ್ಗದ ಜನರು ಅತಿ ಹೆಚ್ಚಿರುವ ಕ್ಷೇತ್ರದಲ್ಲಿ ಬಿಬಿಎಂಪಿಯ ಒಂದು ಶಾಲೆ ಮಾತ್ರ ಇದೆ. ಶಾಲಾಕಾಲೇಜುಗಳ ಸ್ಥಾಪನೆ ಹಲವು ಬೇಡಿಕೆಗಳು ಶಾಸಕರ ಮಟ್ಟದಲ್ಲಿ ಈಡೇರಿಲ್ಲ. ಏಕೈಕ ಹೆರಿಗೆ ಆಸ್ಪತ್ರೆ ಹೊರತುಪಡಿಸಿದರೆ ಬೇರೆ ಸರ್ಕಾರಿ ಆಸ್ಪತ್ರೆಗಳಿಲ್ಲ ಎಂಬುದು ಮತ್ತೊಂದು ಪ್ರಮುಖ ಕೊರತೆಯಾಗಿದೆ. ಪದ್ಮನಾಭನಗರ ಹಲವು ಸಮಸ್ಯೆಗಳನ್ನು ಹೊಂದಿದ್ದರೂ ದೊಡ್ಡ ಮಟ್ಟಿನ ಸಮಸ್ಯೆಗಳು ಇಲ್ಲ ಎಂಬುದು ಕೆಲವರ ಅಭಿಪ್ರಾಯವಾಗಿದೆ. ಪದ್ಮನಾಭನಗರ ಕ್ಷೇತ್ರದಲ್ಲಿ ಒಕ್ಕಲಿಗರು, ಬ್ರಾಹ್ಮಣರು, ನಾಯ್ಡು ಸಮುದಾಯದವರು ಅಭ್ಯರ್ಥಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ.
ಇದನ್ನೂ ಓದಿ:ಗಾಂಧಿನಗರದಲ್ಲಿ ದಿನೇಶ್ ಗುಂಡೂರಾವ್ ಸತತ ನಾಲ್ಕನೇ ಗೆಲುವಿಗೆ ತೊಡಕಾಗಲಿದೆಯಾ ಕೇಸರಿ ಪಡೆ?