ಬೆಂಗಳೂರು:ನಗರದ ಹೊರವಲಯದ ರೆಸಾರ್ಟ್ನಲ್ಲಿ ಶನಿವಾರ ನಡೆದ ಮೊದಲ ದಿನದ ಅಭ್ಯರ್ಥಿಗಳ ಆಯ್ಕೆ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಪ್ರಮುಖವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ ಹಾವೇರಿ ಹಾಗೂ ರಮೇಶ್ ಜಾರಕಿಹೊಳಿ ತವರು ಜಿಲ್ಲೆ ಬೆಳಗಾವಿ ಕ್ಷೇತ್ರಗಳ ಬಗ್ಗೆ ಸಮಾಲೋಚನೆ ನಡೆಯಿತು. ಸಿಎಂ ಕ್ಷೇತ್ರ ಇರುವ ಹಾವೇರಿ ಜಿಲ್ಲೆಯ ಆರು ಕ್ಷೇತ್ರಗಳ ಬಗ್ಗೆ ಜಿಲ್ಲಾ ಕೋರ್ ಕಮಿಟಿ ಸದಸ್ಯರು ತಮ್ಮ ಅಭಿಪ್ರಾಯ ತಿಳಿಸಿದರು. ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಅವರನ್ನೇ ಕಣಕ್ಕಿಳಿಸುವಂತೆ ಅವರು ಹೇಳಿದ್ದಾರೆ. ಹಿರೇಕೆರೂರು ಕ್ಷೇತ್ರದಲ್ಲಿ ಬಿ.ಸಿ.ಪಾಟೀಲ್, ಬ್ಯಾಡಗಿ ಕ್ಷೇತ್ರದಲ್ಲಿ ವಿರೂಪಾಕ್ಷಪ್ಪ ಪರ ಒಲವು ವ್ಯಕ್ತವಾಯಿತು.
ಹಾವೇರಿ ಕ್ಷೇತ್ರದ ಶಾಸಕ ನೆಹರು ಓಲೇಕಾರ್ಗೆ ಟಿಕೆಟ್ ಕೊಡದಂತೆ ಅಭಿಪ್ರಾಯ ವ್ಯಕ್ತವಾಗಿದೆ. ಓಲೇಕಾರ್ ಅವರು ನಕಲಿ ಬಿಲ್ ಸೃಷ್ಟಿ ಪ್ರಕರಣದಲ್ಲಿ ಅಪರಾಧಿ. ಎರಡು ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದಾರೆ. ಬೇರೆ ಸಮರ್ಥ ಅಭ್ಯರ್ಥಿಗೆ ಟಿಕೆಟ್ ಕೊಡುವಂತೆ ಒತ್ತಾಯಿಸಲಾಗಿದೆ.
ರಾಣೆಬೆನ್ನೂರಿನಲ್ಲಿ ಪರಿಷತ್ ಸದಸ್ಯ ಆರ್.ಶಂಕರ್ ಪರ ಒಲವಿಲ್ಲ ಎನ್ನಲಾಗಿದೆ. ಜಿಲ್ಲಾ ಕೋರ್ ಕಮಿಟಿ ಸದಸ್ಯರು ಆರ್.ಶಂಕರ್ ಗೆಲುವಿನ ಬಗ್ಗೆ ಅನುಮಾನಿಸಿದ್ದಾರೆ. ರಾಣೆಬೆನ್ನೂರು ಕ್ಷೇತ್ರದಲ್ಲಿ ಹಾಲಿ ಶಾಸಕ ಅರುಣ್ ಕುಮಾರ್ ಪೂಜಾರ್ ಪರ 50:50 ಒಮ್ಮತವಿದೆ. ಹಾನಗಲ್ ಕ್ಷೇತ್ರದಲ್ಲಿ ದಿವಂಗತ ಸಿ.ಎಂ.ಉದಾಸಿ ಕುಟುಂಬದವರಿಗೆ ಟಿಕೆಟ್ ಕೊಡುವಂತೆ ಹಲವು ಕೋರ್ ಕಮಿಟಿ ಸದಸ್ಯರು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.