ಕರ್ನಾಟಕ

karnataka

ETV Bharat / state

ರಾಜ್ಯದ 15ನೇ ವಿಧಾನಸಭೆ ಕಾರ್ಯ ನಿರ್ವಹಣೆಯ ಸಮಗ್ರ ನೋಟ

ಕರ್ನಾಟಕ ವಿಧಾನಸಭಾ ಚುನಾವಣೆಯು ಬರುವ ಮೇ 10 ರಂದು ನಡೆಯಲಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಬೆನ್ನಲ್ಲೇ 2018 ರಿಂದ 2023ರ ವರೆಗೆ ರಾಜ್ಯದಲ್ಲಿ ನಡೆದ ಮಹತ್ವದ ಬೆಳವಣಿಗೆಗಳ ಮಾಹಿತಿ ಇಲ್ಲಿದೆ.

assembly
15ನೇ ವಿಧಾನಸಭೆ

By

Published : Mar 29, 2023, 12:57 PM IST

Updated : Mar 29, 2023, 4:23 PM IST

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಈ ಸಂದರ್ಭದಲ್ಲಿ 2018 ರಿಂದ 2023ರ ನಡುವೆ ರಾಜ್ಯ ರಾಜಕಾರಣದಲ್ಲಿ ನಡೆದ ಕೆಲವು ಕುತೂಹಲಕಾರಿ ವಿದ್ಯಮಾನಗಳು ಸೋಜಿಗದ ರೀತಿ ಗೋಚರಿಸಿವೆ.

ಕರ್ನಾಟಕ ವಿಧಾನಸಭೆಯು 224 ಸದಸ್ಯ ಬಲ ಹೊಂದಿದೆ. 15ನೇ ವಿಧಾನಸಭಾ ಚುನಾವಣೆಯು 2018ರ ಮೇ 12 ರಂದು 222 ವಿಧಾನಸಭಾ ಕ್ಷೇತ್ರಗಳಿಗೆ ನಡೆದಿತ್ತು. ಜಯನಗರ ಬಿಜೆಪಿ ಶಾಸಕ ವಿಜಯ್ ಕುಮಾರ್ 2018ರ ಮೇ 2 ರಂದು ನಿಧನರಾಗಿದ್ದರಿಂದ ಮತ್ತು ರಾಜರಾಜೇಶ್ವರಿ ನಗರದಲ್ಲಿ ಮತದಾರರ ವಂಚನೆ ಹಗರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಈ ಎರಡು ಕ್ಷೇತ್ರಗಳ ಚುನಾವಣೆ ಮುಂದೂಡಲ್ಪಟ್ಟಿತು. ನಂತರ ಚುನಾವಣೆ ನಡೆದು 2018ರ ಜೂ.13ಕ್ಕೆ ಬಂದ ಫಲಿತಾಂಶದಲ್ಲಿ ಜಯನಗರದಿಂದ ಕಾಂಗ್ರೆಸ್​ ಅಭ್ಯರ್ಥಿ ಸೌಮ್ಯ ರೆಡ್ಡಿ ಹಾಗೂ ರಾಜರಾಜೇಶ್ವರಿನಗರದಿಂದ ಕಾಂಗ್ರೆಸ್​ ಅಭ್ಯರ್ಥಿ ಮುನಿರತ್ನ ಗೆಲುವು ಸಾಧಿಸಿದ್ದರು.

2018ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಶೇ. 70 ಮತದಾನ ಆಗಿತ್ತು. ಅಂತಿಮವಾಗಿ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ರಚನೆಯಾಯಿತು. ಆದರೆ ಯಾರಿಗೂ ಬಹುಮತ ಸಿಗಲಿಲ್ಲ. ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿತು. ಫಲಿತಾಂಶ ಹೊರಬಿದ್ದಾಗ ಬಿಜೆಪಿ 104, ಕಾಂಗ್ರೆಸ್ 78, ಜೆಡಿಎಸ್​ 36 ಹಾಗೂ ಇತರರು 4 ಸ್ಥಾನ ಗೆದ್ದಿದ್ದರು. ಜೆಡಿಎಸ್​ನ ಹೆಚ್.ಡಿ.ಕುಮಾರಸ್ವಾಮಿ ರಾಮನಗರ ಹಾಗೂ ಚನ್ನಪಟ್ಟಣ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಇದರಲ್ಲಿ ಚನ್ನಪಟ್ಟಣ ಕ್ಷೇತ್ರ ಉಳಿಸಿಕೊಂಡು ರಾಮನಗರದಿಂದ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡರು.

ಚುನಾವಣಾ ಫಲಿತಾಂಶ ಬಂದ ಕೆಲ ದಿನದ ಒಳಗೆ ಅಂದರೆ 2018ರ ಮೇ 28 ರಂದು ಕಾರು ಅಪಘಾತದಲ್ಲಿ ಜಮಖಂಡಿಯ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ಮೃತಪಟ್ಟರು. ನಂತರ ನಡೆದ ಉಪ ಚುನಾವಣೆಯಲ್ಲಿ ಅವರ ಪುತ್ರ ಆನಂದ ನ್ಯಾಮಗೌಡ ಗೆಲುವು ಸಾಧಿಸಿದರು.

ಯಡಿಯೂರಪ್ಪ ಸಿಎಂ: ಪೂರ್ಣ ಬಹುಮತ ಬಿಜೆಪಿಗೆ ಇಲ್ಲದಿದ್ದರೂ, ಜೆಡಿಎಸ್ ಇಲ್ಲವೇ ಇತರರ ಬೆಂಬಲ ಸಿಗಬಹುದು ಎಂಬ ನಿರೀಕ್ಷೆಯೊಂದಿಗೆ ಬಿಜೆಪಿ ಹಿರಿಯ ನಾಯಕ ಹಾಗೂ ಅಂದು ಪಕ್ಷದ ರಾಜ್ಯಾಧ್ಯಕ್ಷರೂ ಅಗಿದ್ದ ಬಿ.ಎಸ್​ ಯಡಿಯೂರಪ್ಪ ತರಾತುರಿಯಲ್ಲಿ 2018ರ ಮೇ 17 ರಂದು ಸರ್ಕಾರ ರಚನೆಗೆ ಮುಂದಾದರು. ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು. 23ನೇ ಮುಖ್ಯಮಂತ್ರಿಯಾಗಿ ಹಾಗೂ ಮೂರನೇ ಬಾರಿಗೆ ಸಿಎಂ ಆಗಿ ನಿಯೋಜಿತರಾದರು. ಆದರೆ, ಬಹುಮತ ಸಿಗುವುದು ಅಸಾಧ್ಯ ಅಂತ ಅರಿವಾದಾಗ ಅದೇ ತಿಂಗಳ 19 ರಂದು ರಾಜೀನಾಮೆ ನೀಡಿದರು. ರಾಜ್ಯದಲ್ಲಿ ಮತ್ತೆ ಅತಂತ್ರ ಸ್ಥಿತಿ ನಿರ್ಮಾಣವಾಯಿತು.

ಇದನ್ನೂ ಓದಿ:ಕರ್ನಾಟಕ ವಿಧಾನಸಭೆ ಚುನಾವಣೆ: ಮೇ 10ಕ್ಕೆ ಮತದಾನ, 13ಕ್ಕೆ ಫಲಿತಾಂಶ

ಕುಮಾರಸ್ವಾಮಿ ಪರ್ವ: ರಾಜ್ಯದಲ್ಲಿ ಬಿಜೆಪಿ ಸರ್ಕಾರಕ್ಕೆ ಬಹುಮತ ಸಿಗದ ಹಿನ್ನೆಲೆಯಲ್ಲಿ ನಂತರ ಸರ್ಕಾರ ರಚನೆ ಕಸರತ್ತನ್ನು ಕಾಂಗ್ರೆಸ್ ಆರಂಭಿಸಿತು. ಜೆಡಿಎಸ್​ ಬೆಂಬಲ ಕೋರಿತು. ಕಾಂಗ್ರೆಸ್ ಕುಮಾರಸ್ವಾಮಿ ಅವರನ್ನು ಸಿಎಂ ಆಗಿ ಬೆಂಬಲಿಸಿತು. 2018ರ ಮೇ 23 ರಂದು ರಾಜ್ಯದ ಮುಖ್ಯಮಂತ್ರಿಯಾಗಿ ಎರಡನೇ ಬಾರಿ ಕುಮಾರಸ್ವಾಮಿ ಅವರು ಅಧಿಕಾರ ಸ್ವೀಕರಿಸಿದರು.

ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ

ಕಾಂಗ್ರೆಸ್​ನಿಂದ ಡಿಸಿಎಂ ಆಗಿ ಡಾ.ಜಿ.ಪರಮೇಶ್ವರ್ ನಿಯೋಜಿತರಾದರು. ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್​ನ ಮೂವರು ಹಾಗೂ ಜೆಡಿಎಸ್​ನ ಇಬ್ಬರು ಸದಸ್ಯರನ್ನು ಒಳಗೊಂಡ ಸಮನ್ವಯ ಸಮಿತಿ ಸಹ ರಚನೆಯಾಯಿತು. ಕಾಂಗ್ರೆಸ್‌–ಜೆಡಿಎಸ್‌ ಪಕ್ಷದ 117 ಶಾಸಕರ ಸಹಿಯನ್ನು ಒಳಗೊಂಡ ಪಟ್ಟಿಯನ್ನು ರಾಜ್ಯಪಾಲರಿಗೆ ಹೆಚ್.ಡಿ. ಕುಮಾರಸ್ವಾಮಿ ಸಲ್ಲಿಸಿ ಅಧಿಕಾರ ವಹಿಸಿಕೊಂಡರು. ಕಾಂಗ್ರೆಸ್ ಪಕ್ಷದ 15 ಶಾಸಕರು ಮತ್ತು ಜೆಡಿಎಸ್‌ ಪಕ್ಷದ 10 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಒಟ್ಟು 27 ಜನರ ಮಂತ್ರಿಮಂಡಲ ರಚನೆಯಾಯಿತು.

ಕಾಂಗ್ರೆಸ್–ಜೆಡಿಎಸ್ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂತು. ಕಾರ್ಯಕ್ರಮದಲ್ಲಿ ಅಂದಿನ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಹಿರಿಯ ನಾಯಕಿ ಸೋನಿಯಾ ಗಾಂಧಿ, ಕೇರಳ ಸಿಎಂ ಪಿಣರಾಯಿ ವಿಜಯನ್‌, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌, ಬಿಎಸ್‌ಪಿ ನಾಯಕಿ ಮಾಯಾವತಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಶರದ್‌ ಯಾದವ್‌, ಗುಲಾಬ್‌ ನಬಿ ಅಜಾದ್‌, ಚಂದ್ರಬಾಬು ನಾಯ್ಡು, ಸೀತಾರಾಂ ಯೆಚೂರಿ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಪಾಲ್ಗೊಂಡಿದ್ದರು. ಸಾಕಷ್ಟು ಏರಿಳಿತದೊಂದಿಗೆ ಸಾಗಿದ ಮೈತ್ರಿ ಸರ್ಕಾರ ಕಡೆಯದಾಗಿ 2019ರ ಜು.26ಕ್ಕೆ ಪತನಗೊಂಡಿತು. ಬಹುಮತದ ಕೊರತೆ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಇದಕ್ಕೆ ಮುಖ್ಯ ಕಾರಣ ಕಾಂಗ್ರೆಸ್​ನ 12 ಮತ್ತು ಬೆಂಬಲಿತ ಓರ್ವ ಶಾಸಕ ಸೇರಿ ಜೆಡಿಎಸ್​ನ ಮೂವರು ಶಾಸಕರು ರಾಜೀನಾಮೆ ನೀಡಿದ ಹಿನ್ನೆಲೆ ಸರ್ಕಾರ ಪತನಗೊಂಡಿತು. ಎಲ್ಲಾ ಶಾಸಕರು ಆಪರೇಷನ್​ ಕಮಲಕ್ಕೆ ಒಳಗಾದರು.

ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ

ಯಡಿಯೂರಪ್ಪ ಮತ್ತೆ ಸಿಎಂ: ಕಾಂಗ್ರೆಸ್ ಶಾಸಕರಾಗಿದ್ದ ರಮೇಶ್ ಜಾರಕಿಹೊಳಿ, ಪ್ರತಾಪಗೌಡ ಪಾಟೀಲ್, ಶಿವರಾಮ ಹೆಬ್ಬಾರ್, ಬಿ.ಸಿ.ಪಾಟೀಲ್, ಮಹೇಶ್ ಕುಮಠಳ್ಳಿ, ಆನಂದ್ ಸಿಂಗ್, ಸುಧಾಕರ್, ಭೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್, ಮುನಿರತ್ನ, ಶ್ರೀಮಂತ್ ಪಾಟೀಲ್, ಎಂಟಿಬಿ ನಾಗರಾಜ್, ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಶಾಸಕ ಆರ್.ಶಂಕರ್ ಹಾಗೂ ಜೆಡಿಎಸ್​ ಶಾಸಕರಾದ ಎ.ಎಚ್.ವಿಶ್ವನಾಥ್, ಗೋಪಾಲಯ್ಯ, ನಾರಾಯಣಗೌಡ ರಾಜೀನಾಮೆ ನೀಡಿ ಬಿಜೆಪಿಗೆ ಬೆಂಬಲವಾಗಿ ನಿಂತರು. ನಂತರ ನಡೆದ ಉಪಚುನಾವಣೆಯಲ್ಲಿ ಹೆಚ್​.ವಿಶ್ವನಾಥ್, ಎಂಟಿಬಿ ನಾಗರಾಜ್ ಸೋಲನುಭವಿಸಿದರು. ಉಪಚುನಾವಣೆಯಲ್ಲಿ ಬಿಜೆಪಿಗೆ ಉತ್ತಮ ಬೆಂಬಲ ಸಿಕ್ಕು ಸರ್ಕಾರ ರಚನೆಯಾಯಿತು. ಗೆದ್ದ ಶಾಸಕರಿಗೆಲ್ಲ ಸಚಿವ ಸ್ಥಾನ ಸಿಕ್ಕಿತು.

2019ರ ಜು.26 ರಂದು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಆಯ್ಕೆಯಾದರು. ದಾಖಲೆ ರೀತಿ ರಾಜ್ಯದಲ್ಲಿ ನಾಲ್ಕನೇ ಬಾರಿ ಸಿಎಂ ಆಗಿ ಪದಗ್ರಹಣ ಮಾಡಿದರು. ಮೂವರು ಡಿಸಿಎಂ ಗಳ ಜತೆ ಪೂರ್ಣ ಪ್ರಮಾಣದ ಸರ್ಕಾರ ರಚಿಸಿದರು. 17 ಶಾಸಕರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅದಾದ ಬಳಿಕ ರಚನೆಯಾದ ಬಿಜೆಪಿ ಸರ್ಕಾರದಲ್ಲಿ ಈ ಮಿತ್ರಮಂಡಳಿ ಕ್ಯಾಂಪ್‌ನ 12 ಮಂದಿ ಸಚಿವರಾಗಿ ಕಾರ್ಯ ನಿರ್ವಹಿಸಿದರು. ಮಹೇಶ್​ ಕುಮಠಳ್ಳಿ, ಶ್ರೀಮಂತ್ ಪಾಟೀಲ್​ಗೆ ಸಚಿವ ಸ್ಥಾನ ಸಿಗಲಿಲ್ಲ. ರಮೇಶ್​ ಜಾರಕಿಹೊಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂತು. ಇನ್ನೊಂದೆಡೆ, ವಿಧಾನ ಪರಿಷತ್ ಮೂಲಕ ಆಯ್ಕೆಯಾದ ಎಂಟಿಬಿ ನಾಗರಾಜ್ ಸಚಿವರಾದರು. ಇನ್ನು ಆರ್. ಶಂಕರ್​ಗೆ 2021ರ ಜನವರಿಯಲ್ಲಿ ಸಚಿವ ಸ್ಥಾನ ಸಿಕ್ಕಿತು. ಆದರೆ ಜುಲೈನಲ್ಲಿ ರಾಜೀನಾಮೆ ಪಡೆಯಲಾಯಿತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೊಮ್ಮಾಯಿ ಪರ್ವ:ವಿಶೇಷ ಸಂದರ್ಭದಲ್ಲಿ ವಯಸ್ಸಿನ ಕಾರಣದಿಂದ ಬಿ.ಎಸ್. ಯಡಿಯೂರಪ್ಪ 2021ರ ಜು.28ರಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ರಾಜ್ಯದ 23ನೇ ಸಿಎಂ ಆಗಿ ನಿಯೋಜಿತರಾಗುವ ಅವಕಾಶ ಬಿಎಸ್​ವೈ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಹಾಗೂ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ಲಭಿಸಿತು. 2021ರ ಜು.28 ರಂದು ಸಿಎಂ ಆಗಿ ನಿಯೋಜಿತರಾದ ಬೊಮ್ಮಾಯಿ, ಸುಗಮವಾಗಿ ಸರ್ಕಾರ ನಡೆಸಿಕೊಂಡು ಬಂದಿದ್ದಾರೆ. ಅಕ್ರಮ, ಭ್ರಷ್ಟಾಚಾರದ ಆರೋಪಗಳು ಸೇರಿದಂತೆ ಹಲವು ಹಗರಣಗಳು ಬೆಳಕಿಗೆ ಬಂದವು. ಆದರೆ, ಸಿಎಂ ಸ್ಥಾನ ಸಾಕಷ್ಟು ಅಲ್ಲಾಡಿದರೂ, ಬೊಮ್ಮಾಯಿ ತಮ್ಮ ಅಧಿಕಾರ ಅವಧಿಯನ್ನು ಮುಂದುವರೆಸಿದ್ದಾರೆ. ಇಂದು ಚುನಾವಣಾ ದಿನಾಂಕ ಘೋಷಣೆಯಾಗಿದ್ದು, ಅಲ್ಲಿಯವರೆಗೂ ಇವರು ಹಂಗಾಮಿಯಾಗಿ ಮುಂದುವರಿಯಲಿದ್ದಾರೆ. 1 ವರ್ಷ 10 ತಿಂಗಳು ಸಿಎಂ ಆಗಿ ಕಾರ್ಯನಿರ್ವಹಿಸಿದ ಕೀರ್ತಿಗೆ ಪಾತ್ರರಾಗಲಿದ್ದಾರೆ.

Last Updated : Mar 29, 2023, 4:23 PM IST

ABOUT THE AUTHOR

...view details