ಬೆಂಗಳೂರು:ರಾಜ್ಯದಲ್ಲಿ 15 ಕ್ಷೇತ್ರಗಳ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಒಂದೆಡೆ ಸರ್ಕಾರ ಉಳಿಸಿಕೊಳ್ಳಲು 8 ಕ್ಷೇತ್ರ ಗೆಲ್ಲಲೇ ಬೇಕಾದ ಅನಿವಾರ್ಯತೆ ಬಿಜೆಪಿಗೆ ಎದುರಾಗಿದ್ದರೆ, ಮತ್ತೊಂದೆಡೆ ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾದ ಅನರ್ಹ ಶಾಸಕರಿಗೆ ತಕ್ಕ ಪಾಠ ಕಲಿಸಲೇಬೇಕೆಂಬುದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಹಠವಾಗಿದೆ.
ಗೇಮ್ ಪ್ಲಾನ್ ಏನು?
ಮೈತ್ರಿ ಸರ್ಕಾರ ಬೀಳಿಸಲು ಕಾರಣರಾದ 15 ಅನರ್ಹ ಶಾಸಕರ ಪೈಕಿ ಹತ್ತು ಮಂದಿಯನ್ನು ಗುರಿಯಾಗಿರಿಸಿಕೊಂಡಿರುವ ಕುಮಾರಸ್ವಾಮಿ ಅವರು ಹೊಸ ಹೊಸ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಗೆದ್ದರೂ ತೊಂದರೆಯಿಲ್ಲ. ಬಿಜೆಪಿಯಿಂದ ಅಭ್ಯರ್ಥಿಗಳಾಗಿರುವ ಅನರ್ಹ ಶಾಸಕರು ಮಾತ್ರ ಗೆಲ್ಲಬಾರದೆಂಬುದು ಹೆಚ್ಡಿಕೆ ರಣತಂತ್ರವಾಗಿದೆ. ಹಾಗಾಗಿ, ತಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಲು ಸಾಧ್ಯವಾಗದ ಕಡೆ ವಿಭಿನ್ನ ಕಾರ್ಯಯೋಜನೆ ರೂಪಿಸುತ್ತಿದ್ದಾರೆ ಎನ್ನಲಾಗಿದೆ.
ಪ್ರಮುಖವಾಗಿ ಮಹಾಲಕ್ಷ್ಮಿಲೇಔಟ್ನ ಕೆ.ಗೋಪಾಲಯ್ಯ, ಹುಣಸೂರು ಕ್ಷೇತ್ರದ ಹೆಚ್.ವಿಶ್ವನಾಥ್, ಕೆ.ಆರ್.ಪೇಟೆ ಕ್ಷೇತ್ರದ ನಾರಾಯಣಗೌಡ, ಹೊಸಕೋಟೆ ಕ್ಷೇತ್ರದ ಎಂಟಿಬಿ ನಾಗರಾಜ್, ಚಿಕ್ಕಬಳ್ಳಾಪುರ ಕ್ಷೇತ್ರದ ಡಾ.ಕೆ. ಸುಧಾಕರ್, ಯಶವಂತಪುರ ಕ್ಷೇತ್ರದ ಎಸ್.ಟಿ.ಸೋಮಶೇಖರ್, ಕೆ.ಆರ್. ಪುರ ಕ್ಷೇತ್ರದ ಭೈರತಿ ಬಸವರಾಜ್, ಗೋಕಾಕ್ ಕ್ಷೇತ್ರದ ರಮೇಶ್ ಜಾರಕಿಹೊಳಿ ಅವರು ಕುಮಾರಸ್ವಾಮಿ ಅವರ ಟಾರ್ಗೆಟ್ ಲೀಸ್ಟ್ನಲ್ಲಿದ್ದಾರೆ. ಹೇಗಾದರೂ ಮಾಡಿ ಇವರನ್ನು ಸೋಲಿಸಬೇಕೆಂದು ತಮ್ಮ ಪಕ್ಷದ ನಾಯಕರ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮೊನ್ನೆ ನಡೆದ ಅನೌಪಚಾರಿಕೆ ಸಭೆಯಲ್ಲಿ ತಮ್ಮ ಪಕ್ಷದ ಮಾಜಿ ಸಚಿವರು ಹಾಗೂ ಶಾಸಕರಿಗೆ ಈ ಕುರಿತ ಮಾಹಿತಿ ರವಾನಿಸಿದ್ದು, ಶತಾಯಗತಾಯ ಅನರ್ಹ ಶಾಸಕರನ್ನು ಮಣಿಸಲೇಬೇಕು ಎಂದಿದ್ದಾರೆ. ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ಮೊದಲ ಆದ್ಯತೆ ನೀಡಬೇಕು. ನಂತರ ಅನರ್ಹ ಶಾಸಕರ ಸೋಲಿಗೆ ಶ್ರಮಿಸಬೇಕೆಂದು ಕುಮಾರಸ್ವಾಮಿ ಅವರು ಸೂಚನೆ ಕೊಟ್ಟಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸ್ಥಳೀಯ ಕಾರ್ಯಕರ್ತರು ಮತ್ತು ನಾಯಕರ ವಿರೋಧದ ಮಧ್ಯೆಯೂ ಕುಮಾರಸ್ವಾಮಿ ಅವರು ಎರಡು ಬಾರಿ ನಾರಾಯಣಗೌಡರಿಗೆ ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಟಿಕೆಟ್ ನೀಡಿದ್ದರು. ದೇವೇಗೌಡರ ಕುಟುಂಬದವರ ಬಗ್ಗೆ ಮಾತನಾಡಿರುವ ಕೆ.ಆರ್.ಪೇಟೆ ಅನರ್ಹ ಶಾಸಕ ನಾರಾಯಣಗೌಡ ಅವರನ್ನು ಸೋಲಿಸಲು ಕಾರ್ಯತಂತ್ರಗಳನ್ನು ರೂಪಿಸಲಾಗಿದೆ.
ಅದೇ ರೀತಿ, ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲೂ ಸಹ ಸ್ಥಳೀಯ ಜೆಡಿಎಸ್ ನಾಯಕರ ವಿರೋಧದ ಮಧ್ಯೆಯೂ ಕುಮಾರಸ್ವಾಮಿ ಅವರು ಗೋಪಾಲಯ್ಯಗೆ ಟಿಕೆಟ್ ನೀಡಿ ಗೆಲ್ಲಿಸಿದ್ದರು. ಅವರ ಪತ್ನಿ ಹೇಮಲತಾ ಅವರನ್ನು ಉಪಮೇಯರ್ ಆಗಿ ಮಾಡಲಾಗಿತ್ತು. ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ್ದರೂ ಅವರನ್ನು ಕ್ಷಮಿಸಿ ಪಕ್ಷಕ್ಕೆ ವಾಪಸ್ ಸೇರಿಸಿಕೊಳ್ಳಲಾಗಿತ್ತು. ಆದರೂ ಗೋಪಾಲಯ್ಯ ನಂಬಿಕೆಗೆ ದ್ರೋಹ ಮಾಡಿದ್ದಾರೆ ಎಂಬ ಸಿಟ್ಟು ದೇವೇಗೌಡ ಹಾಗೂ ಕುಮಾರಸ್ವಾಮಿ ಅವರಿಗಿದೆ. ಮಹಾಲಕ್ಷ್ಮೀ ಲೇಔಟ್ನಲ್ಲಿ ಪ್ರಬಲರಲ್ಲದಿದ್ದರೂ ಡಾ. ಗಿರೀಶ್ ನಾಶಿ ಎಂಬುವರಿಗೆ ಟಿಕೆಟ್ ನೀಡಿರುವುದರ ಹಿಂದೆ ಕುಮಾರಸ್ವಾಮಿ ಬೇರೆಯೇ ತಂತ್ರಗಾರಿಕೆ ಇದೆ ಎನ್ನಲಾಗಿದೆ.