ಬೆಂಗಳೂರು/ವಾಷಿಂಗ್ಟನ್:ಇಂದು ವಾಷಿಂಗ್ಟನ್ ಡಿಸಿಯಲ್ಲಿ ಏರ್ಪಡಿಸಿದ್ದ ಹೂಡಿಕೆದಾರರ ಸಭೆಯಲ್ಲಿ ಕರ್ನಾಟಕದಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಕುರಿತು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿದರು.
ಭಾರತೀಯ ಹಾಗೂ ವಿದೇಶಿ ಹೂಡಿಕೆದಾರರ ನೆಚ್ಚಿನ ತಾಣವಾಗಿ ಕರ್ನಾಟಕ: ಸಿಎಂ - CM HD kUMARASWAMI
ಇಂದು ವಾಷಿಂಗ್ಟನ್ ಡಿಸಿಯಲ್ಲಿ ಏರ್ಪಡಿಸಿದ್ದ ಹೂಡಿಕೆದಾರರ ಸಭೆಯಲ್ಲಿ ಕರ್ನಾಟಕದಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಕುರಿತು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿದರು.

ಹೂಡಿಕೆದಾರರ ಸಭೆಯಲ್ಲಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ
ಹೂಡಿಕೆದಾರರ ಸಭೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ
ಭಾಷಣದ ಮುಖ್ಯಾಂಶಗಳು :
- ನಾನು ಅಮೆರಿಕದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಆಗಮಿಸಿದ್ದರೂ ಈ ಅವಕಾಶ ಬಳಸಿಕೊಂಡು ಹೂಡಿಕೆದಾರರನ್ನು ಭೇಟಿಯಾಗಿ ಕರ್ನಾಟಕದಲ್ಲಿನ ಹೂಡಿಕೆಯ ಅವಕಾಶಗಳ ಕುರಿತು ಬೆಳಕು ಚೆಲ್ಲುವ ಉದ್ದೇಶದಿಂದ ಈ ಸಭೆಯನ್ನು ಏರ್ಪಡಿಸಲಾಗಿದೆ.
- ಕೈಗಾರಿಕಾ ವಲಯದಲ್ಲಿ ಭಾರತದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಕರ್ನಾಟಕ. ಭಾರತೀಯ ಹಾಗೂ ವಿದೇಶಿ ಹೂಡಿಕೆದಾರರ ನೆಚ್ಚಿನ ತಾಣವಾಗಿ ರೂಪುಗೊಂಡಿದ್ದು, ಸತತ ಮೂರನೇ ವರ್ಷ ಬಂಡವಾಳ ಆಕರ್ಷಿಸುವಲ್ಲಿ ಮೊದಲ ರಾಜ್ಯವೆಂದು ಮನ್ನಣೆ ಪಡೆದಿದೆ ಎಂದು ಹೇಳಿದರು.
- ರಾಜ್ಯದ ರಾಜಧಾನಿ ಬೆಂಗಳೂರನ್ನು ಇತ್ತೀಚೆಗೆ ಜಗತ್ತಿನ ಅತ್ಯಂತ ಕ್ರಿಯಾಶೀಲ ನಗರವೆಂದು ಗುರುತಿಸಲಾಗಿದೆ. ಇಲ್ಲಿನ ಕ್ರಿಯಾಶೀಲ, ಉದ್ಯಮ ಸ್ನೇಹಿ ನೀತಿಗಳು, ಅತ್ಯುತ್ತಮ ಮೂಲ ಸೌಕರ್ಯಗಳು, ಪರಿಣಿತ ಮಾನವ ಸಂಪನ್ಮೂಲ ಹಾಗೂ ನೂತನ ಆವಿಷ್ಕಾರ ಮತ್ತು ಅಭಿವೃದ್ಧಿಗೆ ಪೂರಕ ವಾತಾವರಣ ಕರ್ನಾಟಕದ ಕೈಗಾರಿಕಾ ಬೆಳವಣಿಗೆಗೆ ಕಾರಣವಾಗಿದೆ. ಈ ಕಾರಣಕ್ಕಾಗಿಯೇ ದೇಶದ ಜಿಡಿಪಿ 7.2 ರಷ್ಟಿದ್ದರೆ, ರಾಜ್ಯದ ಜಿಡಿಪಿ ಶೇ. 10ರಷ್ಟಿದೆ ಎಂದು ತಿಳಿಸಿದರು.
- ಭಾರತದ ಮಷಿನ್ ಟೂಲ್ ಉತ್ಪಾದನೆಯ ಶೇ. 50ರಷ್ಟು, ಐಟಿ ರಫ್ತಿನ ಶೇ. 39ರಷ್ಟು, ರಕ್ಷಣಾ ವಲಯಕ್ಕೆ ಶೇ. 67ರಷ್ಟು ವಿಮಾನಗಳು, ಹೆಲಿಕಾಪ್ಟರ್ಗಳ ಪೂರೈಕೆ ಹಾಗೂ ಜೈವಿಕ ತಂತ್ರಜ್ಞಾನ ರಫ್ತಿನ ಶೇ. 33ರಷ್ಟು ಕೊಡುಗೆ ಕರ್ನಾಟಕದ್ದಾಗಿದೆ.
- ಅಲ್ಲದೆ, ಬ್ಲಾಕ್ ಚೇನ್, ಅಡಿಟಿವ್ ಮ್ಯಾನ್ಯುಫಾಕ್ಚರಿಂಗ್, 3ಡಿ ಪ್ರಿಂಟಿಂಗ್, ರೊಬೋಟಿಕ್ಸ್, ನ್ಯಾನೊ-ಟೆಕ್ನಾಲಜಿ, ಮೆಡಿಕಲ್ ಟೆಕ್ನಾಲಜಿ ಮತ್ತು ಜೆನೆಟಿಕ್ ಎಂಜಿನಿಯರಿಂಗ್ನಂತಹ ಅತ್ಯಾಧುನಿಕ ತಂತ್ರಜ್ಞಾನದಲ್ಲಿಯೂ ನಮ್ಮ ರಾಜ್ಯ ಮುಂಚೂಣಿಯಲ್ಲಿದೆ ಎಂದರು.
- ಉದ್ಯಮ ಸ್ನೇಹಿ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಉದ್ಯಮ ಸುಧಾರಣಾ ಕ್ರಿಯಾ ಯೋಜನೆಯ ಶೇ. 98.6ರಷ್ಟು ಗುರಿ ಸಾಧನೆ ಮಾಡಿದೆ. ಕಾಲಮಿತಿಯಲ್ಲಿ ಯೋಜನೆಗಳ ಅನುಮೋದನೆ ಹಾಗೂ ವಿವಿಧ ಪ್ರಾಧಿಕಾರಗಳ ಅನುಮತಿ ಹಾಗೂ ಪರವಾನಗಿ ಒದಗಿಸಲು ಸಮಗ್ರ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹೊಸ ಕೈಗಾರಿಕೆಗಳು ಹಾಗೂ ಉದ್ಯಮಿಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ 20ಕ್ಕೂ ಹೆಚ್ಚು ನೀತಿಗಳನ್ನು ಜಾರಿಗೆ ತರಲಾಗಿದೆ. ಇತ್ತೀಚೆಗೆ ನಾವು ವಿದ್ಯುತ್ ಚಾಲಿತ ವಾಹನಗಳು ಹಾಗೂ ಇಂಧನ ಸಂಗ್ರಹ ನೀತಿ 2017ನ್ನು ಜಾರಿಗೆ ತಂದಿದ್ದು, ಈ ನೀತಿ ಜಾರಿಗೆ ತಂದ ಮೊದಲ ರಾಜ್ಯ ನಮ್ಮದಾಗಿದೆ ಎಂದು ಹೇಳಿದರು.
- ಸರ್ಕಾರವು ನೂತನ ಕೈಗಾರಿಕಾ ನೀತಿ 2019-2024ನ್ನು ರೂಪಿಸುತ್ತಿದ್ದು, ಅದರಲ್ಲಿ ಜಾಗತಿಕ ಮಾನದಂಡಗಳನ್ವಯ ಕೈಗಾರಿಕೆಗಳಿಗೆ ಮೂಲ ಸೌಕರ್ಯ, ನೀತಿಗಳು ಮತ್ತು ಅನುಷ್ಠಾನಕ್ಕೆ ಆದ್ಯತೆ ನೀಡಲಾಗಿದ್ದು, ಕರ್ನಾಟಕವನ್ನು ಜಾಗತಿಕಮಟ್ಟದ ತಯಾರಿಕೆ ಮತ್ತು ಸೇವಾ ವಲಯವಾಗಿ ರೂಪಿಸುವ ಗುರಿ ಹೊಂದಿದ್ದೇವೆ ಎಂದರು.
- ರಾಜ್ಯದ ಎರಡನೇ ಮತ್ತು ಮೂರನೇ ಸ್ತರದ ನಗರಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡುವಲ್ಲಿ 9 ಜಿಲ್ಲೆಗಳಲ್ಲಿ ಕೈಗಾರಿಕಾ ಕ್ಲಸ್ಟರ್ಗಳನ್ನು ಸ್ಥಾಪಿಸಲಾಗುತ್ತಿದೆ. ದೇಶದಲ್ಲಿಯೇ ಮೊದಲ ಬಾರಿ ಜಾರಿಗೊಳ್ಳುತ್ತಿರುವ ಈ ಯೋಜನೆಯಡಿ ಉತ್ಪಾದನಾ ವಲಯಕ್ಕೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ ಎಂದು ಹೇಳಿದರು.
- ರಾಜ್ಯದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳೂ ಸಾಕಷ್ಟು ಸಂಖ್ಯೆಯಲ್ಲಿದ್ದು, ಅವುಗಳಿಗೆ ಉತ್ತೇಜನ ನೀಡುವ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ನಾಲ್ಕನೇ ಕೈಗಾರಿಕಾ ಕ್ರಾಂತಿಯಲ್ಲಿ ಕರ್ನಾಟಕವು ಮುಂಚೂಣಿಯ ರಾಜ್ಯವಾಗಿ ಹೊಮ್ಮಬೇಕೆನ್ನುವುದು ನಮ್ಮ ದೃಢ ಸಂಕಲ್ಪ. ಈ ನಿಟ್ಟಿನಲ್ಲಿ ಉತ್ಪಾದನೆಯನ್ನು ಡಿಜಿಟಲೀಕರಣಗೊಳಿಸಲು ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆ ಮಾಡಲು ನಮ್ಮ ಸರ್ಕಾರ ಉತ್ಸುಕವಾಗಿದೆ.
ಕರ್ನಾಟಕವು ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದಲ್ಲಿ ವಿಶ್ವದಲ್ಲಿಯೇ ಮೊದಲ ಐದು ತಾಣಗಳಲ್ಲಿ ಒಂದಾಗಿದೆ. ಸ್ಟಾರ್ಟ್ ಅಪ್ ವಿಷಯದಲ್ಲಿ 2ನೇ ಸ್ಥಾನದಲ್ಲಿದೆ. ಇನ್ನಷ್ಟು ಹೂಡಿಕೆ ಆಕರ್ಷಿಸಿ, ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ರಾಜ್ಯವು 2020ರ ಜನವರಿಯಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ಹಮ್ಮಿಕೊಂಡಿದೆ. ಈ ಸಮಾವೇಶವನ್ನು ಯಶಸ್ವಿಗೊಳಿಸಲು ಹಾಗೂ ಕರ್ನಾಟಕದಲ್ಲಿ ಲಭ್ಯವಿರುವ ವಿನೂತನ ಹಾಗೂ ವಿಶಿಷ್ಟ ಉದ್ಯಮಗಳ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಿಎಂ ಕುಮಾರಸ್ವಾಮಿ ಮನವಿ ಮಾಡಿದರು.