ಬೆಂಗಳೂರು:ರಾಜ್ಯದಲ್ಲೂ ಕೊರೊನಾ ಅಲೆ ಜೋರಾಗಿ ಬೀಸಲು ಶುರುವಾಗಿರುವ ಕಾರಣ ರಾಜ್ಯ ಸರ್ಕಾರ ಇಂದಿನ ಸಚಿವ ಸಂಪುಟದಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ.
ಇಂದಿನಿಂದ ಮುಂದಿನ 14 ದಿನಗಳ ಕಾಲ ರಾಜ್ಯಾದ್ಯಂತ ಕೋವಿಡ್ ಕರ್ಫ್ಯೂ ವಿಧಿಸಿ ಘೋಷಣೆ ಮಾಡಲಾಗಿದ್ದು, ಕಠಿಣ ನಿಯಮ ಜಾರಿಗೊಳಿಸಲು ನಿರ್ಧರಿಸಿದ್ದಾರೆ. ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಅಂದರೆ ನಾಲ್ಕು ಗಂಟೆಗಳ ಕಾಲ ಮಾತ್ರ ಅಗತ್ಯ ವಸ್ತು ಖರೀದಿ ಮಾಡಲು ಅವಕಾಶ ನೀಡಲಾಗಿದೆ. ಉತ್ಪಾದನಾ ವಲಯ ಎಂದಿನಂತೆ ಕಾರ್ಯ ನಿರ್ವಹಿಸಲಿದ್ದು, ಕೃಷಿ ಚಟುವಟಿಕೆಗಳಿಗೆ ಯಾವುದೇ ರೀತಿಯ ತೊಂದರೆ ಇಲ್ಲ ಎಂದು ಸಿಎಂ ತಿಳಿಸಿದ್ದಾರೆ. ಸರ್ಕಾರಿ ಬಸ್ಗಳು ಸೇರಿ ಯಾವುದೇ ಸಾರಿಗೆ ಸಂಚಾರ ಇರುವುದಿಲ್ಲ. ಮೆಟ್ರೋ ಸಂಚಾರ ಬಂದ್ ಆಗಲಿದೆ.
ರಾಜ್ಯಾದ್ಯಂತ 18 ರಿಂದ 44 ವರ್ಷದವರಿಗೆ ಉಚಿತ ಲಸಿಕೆ
ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಕೊರೊನಾ ಲಸಿಕೆ ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಮುಖ್ಯಮಂತ್ರಿ ಬಿಎಸ್ವೈ ಮಾಹಿತಿ ನೀಡಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಸೇರಿ ರಾಜ್ಯದ ಎಲ್ಲ ಚುನಾವಣೆಗಳು ಮುಂದಿನ ಆರು ತಿಂಗಳ ಮುಂದೂಡಿಕೆ ಮಾಡಲು ಶಿಫಾರಸು ಮಾಡಲಾಗಿದೆ. ಬಾರ್ಗಳಲ್ಲಿ ಪಾರ್ಸಲ್ ತೆಗೆದುಕೊಳ್ಳಲು ಅನುಮತಿ ನೀಡಲಾಗಿದೆ. ಎರಡು ವಾರದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದಿದ್ದರೆ ಮತ್ತೆ ಕಠಿಣ ಕ್ರಮ ಮುಂದುವರಿಸಬೇಕಾದ ಅನಿವಾರ್ಯತೆ ನಿರ್ಮಾಣಗೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ. ಇದೇ ವೇಳೆ ರಾಜ್ಯಕ್ಕೆ 800 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆ ಮಾಡಲು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ ಎಂದು ಸಿಎಂ ತಿಳಿಸಿದ್ದಾರೆ.
ಸಚಿವ ಸಂಪುಟದ ಬಳಿಕ ಬಿಎಸ್ವೈ ಸುದ್ದಿಗೋಷ್ಠಿ ಏನೆಲ್ಲ ಮಾರ್ಗಸೂಚಿ ಜಾರಿ?
- ನಾಳೆಯಿಂದ 14 ದಿನಗಳ ಕಾಲ ರಾಜ್ಯಾದ್ಯಂತ ಕಟ್ಟುನಿಟ್ಟಿನ ಕ್ರಮ ಜಾರಿ
- ಬೆಳಗ್ಗೆ 6ರಿಂದ 10ಗಂಟೆವರೆಗೆ ಅಗತ್ಯ ವಸುಗಳ ಖರೀದಿಗೆ ಮಾತ್ರ ಅವಕಾಶ
- ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ಸೇರಿದಂತೆ ಸಾರಿಗೆ ಸಂಚಾರ ಸಂಪೂರ್ಣ ಬಂದ್
- ಖಾಸಗಿ ವಾಹನ ಸಂಚಾರಕ್ಕೆ ನಿಷೇಧ
- ಗೂಡ್ಸ್ ಸರಕು ಸಾಗಾಟಕ್ಕೆ ಮಾತ್ರ ಅವಕಾಶ
- ಬೆಳಗ್ಗೆ 6ರಿಂದ 10ರವರೆಗೆ ಹೋಟೆಲ್ನಲ್ಲಿ ಪಾರ್ಸೆಲ್ ಗೆ ಅವಕಾಶ
- ಬೆಳಗ್ಗೆ 6ರಿಂದ 10ರವರೆಗೆ ಮದ್ಯಗಂಡಿಗಳು ಓಪನ್, ಪಾರ್ಸೆಲ್ಗೆ ಮಾತ್ರ ಅವಕಾಶ
- ಮೆಟ್ರೋ ಸೇವೆ ಸ್ಥಗಿತ
- ಬ್ಯಾಂಕಿಂಗ್ ಕ್ಷೇತ್ರಕ್ಕೆ ಅವಕಾಶ
- ಕೃಷಿ ಚಟುವಟಿಕೆ, ಕಟ್ಟಡ ನಿರ್ಮಾಣಕ್ಕೆ ಅವಕಾಶ
- ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಲಸಿಕೆ
- ಚುನಾವಣೆಗಳನ್ನು ಮುಂದೂಡಲು ಶಿಫಾರಸು
- ಪ್ರತಿದಿನ ರಾತ್ರಿ 9ರಿಂದ ಬೆಳಗ್ಗೆ 6ರವರೆಗೆ ಕರ್ಫ್ಯೂ
- ಅಂತಾರಾಜ್ಯ, ಅಂತರ್ಜಿಲ್ಲಾ ಪ್ರಯಾಣಕ್ಕೆ ಅವಕಾಶ ಇಲ್ಲ
ಸಿಎಂ ಹೇಳಿದ್ದೇನು?
ಇನ್ನು ಎರಡು ವಾರದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರದೇ ಇದ್ದರೆ ಮತ್ತೆ ಬಿಗಿ ಕ್ರಮ ಮುಂದುವರಿಯುವ ಸಾಧ್ಯತೆ ಇದೆ. ಹಾಗಾಗಿ, ಸಾರ್ವಜನಿಕರು ಕಟ್ಟುನಿಟ್ಟಾಗಿ ನಿಯಮ ಪಾಲಿಸಿಬೇಕು. ಆಕ್ಸಿಜನ್ ಮತ್ತು ರೆಮ್ಡಿಸಿವೀರ್ ಕೊರತೆ ಇಲ್ಲ ಎಂದು ತಿಳಿಸಿದರು.
ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಅಂತಾರಾಜ್ಯ ಸರಕು ಸಾಗಣೆ ವಾಹನಗಳಿಗೆ ಮಾತ್ರ ಅವಕಾಶ ಇದೆ. ಜನಸಾಮಾನ್ಯರ ಪ್ರಯಾಣಕ್ಕೆ ಅವಕಾಶವಿಲ್ಲ. ಸಾರಿಗೆ ಬಸ್ಗಳ ಸಂಚಾರ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.