ಬೆಂಗಳೂರು : ಶೀಘ್ರದಲ್ಲಿ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯನ್ನು ಅನುಷ್ಠಾನಗೊಳಿಸಲು ಇಂದು ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.
ಸುಪ್ರೀಂಕೋರ್ಟ್ ಪ್ರಾಣಿ ಕಲ್ಯಾಣ ಮಂಡಳಿಯನ್ನು ರಚಿಸುವಂತೆ ರಾಜ್ಯಗಳಿಗೆ ಈ ಮೊದಲೇ ನಿರ್ದೇಶಿಸಿದೆ. ಈ ಹಿನ್ನೆಲೆ ಕೇಂದ್ರ ಸರ್ಕಾರ ತೀರ್ಮಾನಿಸಿದಂತೆ ರಾಜ್ಯದಲ್ಲಿಯೂ ಪ್ರಾಣಿ ಕಲ್ಯಾಣ ಮಂಡಳಿಯನ್ನು ರೂಪಿಸಲು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.
ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಹಾಗೂ ಸ್ಥಳಿಯ ಹಂತದಲ್ಲಿ ಮಂಡಳಿಯ ಕಾರ್ಯನಿರ್ವಹಣೆಯ ಬಗ್ಗೆ ಮಾರ್ಗಸೂಚಿಗಳನ್ನು ತಯಾರಿಸಲು ಸೂಚನೆ ನೀಡಲಾಯಿತು. ಜಿಲ್ಲಾ,ತಾಲೂಕು ಮತ್ತು ಸ್ಥಳೀಯ ಮಟ್ಟದ ಪ್ರಾಧಿಕಾರದಲ್ಲಿ ಪ್ರಾಣಿಗಳನ್ನು ವಶಪಡಿಸಿಕೊಂಡಾಗ ಅವುಗಳ ಸಂರಕ್ಷಣೆ ಹಾಗೂ ನಿರ್ವಹಣೆಯ ಬಗ್ಗೆಯೂ ಸಮಾಲೋಚನೆ ನಡೆಯಿತು. ಅಹಿತಕರ ಘಟನೆಗಳು ನಡೆದಾಗ ಎಫ್ಐಆರ್ ದಾಖಲಿಸುವ ಸಮಯದಲ್ಲಿ ಪಶುಪಾಲನಾ ಇಲಾಖೆಯ ಜಿಲ್ಲಾ, ತಾಲ್ಲೂಕು ಸ್ಥಳೀಯ ಅಧಿಕಾರಿಗಳಿಗೆ ನಿರ್ದಿಷ್ಟ ಹೊಣೆ ಮತ್ತು ಅಧಿಕಾರ ನೀಡುವ ಬಗ್ಗೆ ಮಾರ್ಗಸೂಚಿಗಳನ್ನು ತಯಾರಿಸಲು ಸೂಚಿಸಲಾಗಿದೆ.