ಬೆಂಗಳೂರು:ವಿದ್ಯಾರ್ಥಿನಿಯರ ಹಿಜಾಬ್ ಧರಿಸುವ ವಿಚಾರಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಮಾಡಿದ ಆರೋಪ ಸಂಬಂಧ ಕನ್ನಡ ಚಿತ್ರನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಕುಮಾರ್ ಹಾಗೂ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ ಹಾಕಿದ ಆರೋಪದಲ್ಲಿ ತಮಿಳುನಾಡಿನ ತೌಹೀದ್ ಜಮಾತ್ ಅಧ್ಯಕ್ಷ ಆರ್. ರಹಮತುಲ್ಲಾ ಎಂಬುವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ರಾಜ್ಯ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅನುಮತಿ ನೀಡಿದ್ದಾರೆ.
ನ್ಯಾಯಾಂಗ ಮತ್ತು ನ್ಯಾಯಮೂರ್ತಿಗಳ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಚೇತನ್, ರಹಮತುಲ್ಲಾ, ಸಿಪಿಐ (ಎಂ) ನಾಯಕ ಸೀತಾರಾಂ ಯೆಚೂರಿ ಹಾಗೂ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಅಧ್ಯಕ್ಷ ಅತಾವುಲ್ಲಾ ಪುಂಜಾಲಕಟ್ಟೆ ವಿರುದ್ಧ ನ್ಯಾಯಾಂಗ ನಿಂದನೆ ಕಾಯ್ದೆ ಸೆಕ್ಷನ್ 15(1)(ಬಿ) ಅಡಿ ಕ್ರಮಕೈಗೊಳ್ಳಲು ಅನುಮತಿಸುವಂತೆ ಬೆಂಗಳೂರಿನ ನಿವಾಸಿ ಗಿರೀಶ್ ಭಾರದ್ವಾಜ್ ಎಂಬುವರು ಅಡ್ವೊಕೇಟ್ ಜನರಲ್ ಅವರಿಗೆ ಮನವಿ ಸಲ್ಲಿಸಿದ್ದರು. ಹೀಗಾಗಿ ಎಜಿ ಶಶಿಕಿರಣ್ ತಮ್ಮ ವರದಿ ನೀಡಿದ್ದಾರೆ.
ನ್ಯಾಯಾಂಗ ನಿಂದನೆ ಹೇಗೆ?: ಹೈಕೋರ್ಟ್ ತೀರ್ಪಿಗೆ ಸಂಬಂಧಿಸಿದಂತೆ ನಟ ಚೇತನ್ ಎರಡು ವರ್ಷಗಳ ಹಿಂದೆ, ''ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಹೇಳಿಕೆ ನೀಡಿದ್ದರು. ಈಗ ಅದೇ ನ್ಯಾಯಮೂರ್ತಿ ಶಾಲೆಗಳಲ್ಲಿ ಹಿಜಾಬ್ ಧರಿಸಬಹುದೇ ಅಥವಾ ಇಲ್ಲವೇ ಎಂಬುದನ್ನು ತೀರ್ಮಾನಿಸಲಿದ್ದಾರೆ. ಅವರಿಗೆ ಅಗತ್ಯವಾದ ಸ್ಪಷ್ಟತೆ ಇದೆಯೇ?'' ಎಂದು ಟ್ವೀಟ್ ಮಾಡಿದ್ದರು. ಈ ಅಂಶ ದುರುದ್ದೇಶಪೂರಿತ ಮತ್ತು ವ್ಯಾಪ್ತಿ ಮೀರಿದ ಮತ್ತು ವಿವಾದಾತ್ಮಕ ಹೇಳಿಕೆಯಾಗಿದ್ದು, ಇದು ನ್ಯಾಯಮೂರ್ತಿಗಳ ಮೇಲಿನ ನಿಷ್ಟಕ್ಷಪಾತತೆಯ ಮೇಲೆ ಜನರಿಗೆ ಸಂಶಯ ಮೂಡಿಸುವಂತಿದೆ. ಇದು ನ್ಯಾಯಮೂರ್ತಿಗಳು ನ್ಯಾಯಿಕ ಕರ್ತವ್ಯ ನಿಭಾಯಿಸಲು ಮುಜುಗರ ಸನ್ನಿವೇಶ ಸೃಷ್ಟಿಸುತ್ತದೆ. ಹೀಗಾಗಿ, ಚೇತನ್ ಮಾಡಿರುವ ಟ್ವೀಟ್ ಸೆಕ್ಷನ್ 2(ಸಿ) ಅಡಿ ಕ್ರಿಮಿನಲ್ ನ್ಯಾಯಾಂಗ ನಿಂದನೆಗೆ ಸಮನಾಗಿದೆ. ಈ ನೆಲೆಯಲ್ಲಿ ಚೇತನ್ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಅರ್ಜಿದಾರರಿಗೆ ಅನುಮತಿಸಿದ್ದೇನೆ ಎಂದು ಅಡ್ವೊಕೇಟ್ ಜನರಲ್ ತಿಳಿಸಿದ್ದಾರೆ.