ಕರ್ನಾಟಕ

karnataka

ETV Bharat / state

ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2ರ ಆರನೇ ವರದಿ ಸಿಎಂಗೆ ಸಲ್ಲಿಕೆ: ವರದಿಯಲ್ಲಿರುವ ಶಿಫಾರಸುಗಳೇನು? - ಆಡಳಿತ ಸುಧಾರಣಾ ಆಯೋಗ ವರದಿ

ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ಆರನೇ ವರದಿಯಲ್ಲಿ ಏನೆಲ್ಲ ಶಿಫಾರಸು ಮಾಡಿದೆ ಎಂಬುದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಕರ್ನಾಟಕ ಆಡಳಿತ ಸುಧಾರಣಾ ಆಯೋಗ
ಕರ್ನಾಟಕ ಆಡಳಿತ ಸುಧಾರಣಾ ಆಯೋಗ

By ETV Bharat Karnataka Team

Published : Nov 26, 2023, 8:58 AM IST

ಬೆಂಗಳೂರು: ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ತನ್ನ ಆರನೇಯ ವರದಿಯನ್ನು ಸಿಎಂ ಸಿದ್ದರಾಮಯ್ಯಗೆ ಸಲ್ಲಿಕೆ ಮಾಡಿದೆ. ಈಗಾಗಲೇ ಐದು ವರದಿಯನ್ನು ಸಲ್ಲಿಕೆ ಮಾಡಿರುವ ಆಯೋಗದ ಅಧ್ಯಕ್ಷ ಟಿ.ಎಂ.ವಿಜಯಭಾಸ್ಕರ್ ಶನಿವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯಗೆ ಆರನೇಯ ವರದಿಯನ್ನು ಸಲ್ಲಿಕೆ ಮಾಡಿದರು. ಆಯೋಗವು ಈಗಾಗಲೇ ಸರ್ಕಾರಕ್ಕೆ 5 ವರದಿಗಳನ್ನು ಸಲ್ಲಿಸಿದೆ. ಒಟ್ಟು 23 ಇಲಾಖೆಗಳಿಗೆ ಸಂಬಂಧಿಸಿದಂತೆ 3,630 ಶಿಫಾರಸುಗಳನ್ನು ಮಾಡಿದೆ. ಸರ್ಕಾರ 66 ಶಿಫಾರಸುಗಳನ್ನು ಅನುಷ್ಠಾನ ಮಾಡಿದೆ. 284 ಶಿಫಾರಸುಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. 90 ಶಿಫಾರಸುಗಳನ್ನು ಪರಿಶೀಲಿಸಲಾಗುತ್ತಿದೆ. ಇನ್ನು 13 ಶಿಫಾರಸುಗಳನ್ನು ಒಪ್ಪಿಲ್ಲ.

ಆರನೇ ವರದಿಯ ಶಿಫಾರಸು ಏನು?:

  • ಅನುಮೋದಿತ ಮಾಸ್ಟರ್ ಪ್ಲಾನಗಳಿಗೆ ಅನುಗುಣವಾಗಿರುವ ಮತ್ತು ನಗರ ಯೋಜನೆ ಕೆಹೆಚ್‌ಬಿ ಹೆಚ್ಚುವರಿ ನಿರ್ದೇಶಕ ಅವರಿಂದ ಅನುಮೋದನೆ ಪಡೆದ ಲೇಔಟ್‌ಗಳಿಗೆ ಅನುಮೋದನೆ ನೀಡಲು ಮಂಡಳಿ ಮತ್ತು ಆಯುಕ್ತರಿಗೆ ಅಧಿಕಾರ ಪ್ರತ್ಯಾಯೋಜಿಸಲು ಕೆಟಿಸಿಪಿ ಕಾಯ್ದೆ, 1961ರ ಸಂಬಂಧಿತ ಕಲಂ ತಿದ್ದುಪಡಿ ಮಾಡಬಹುದು.
  • ಕೆಹೆಚ್‌ಬಿಯು 2013 ರಲ್ಲಿ ಕಟ್ಟಡ ನಕ್ಷೆಯ ಅನುಮೋದನೆಗಾಗಿ ರೂ.1000 ಗಳ ಶುಲ್ಕವನ್ನು ನಿಗದಿಪಡಿಸಿತ್ತು. ಶುಲ್ಕವನ್ನು ಕಟ್ಟಡದ ಅಂದಾಜು ವೆಚ್ಚದ ಶೇಕಡಾವಾರು ನಿಗದಿಪಡಿಸಬೇಕು.
  • ದೀರ್ಘಕಾಲದವರೆಗೆ ನಿವೇಶನಗಳನ್ನು ಖಾಲಿ ಇಟ್ಟಿರುವ ಮಾಲೀಕರಿಗೆ ದಂಡ ವಿಧಿಸಬೇಕು. ಕೆಹೆಚ್‌ಬಿಯು ಖಾಲಿ ನಿವೇಶನಗಳ ಶುದ್ದ ಕ್ರಯ ಪತ್ರವನ್ನು ನೋಂದಾಯಿಸಲು ನಿವೇಶನದ ಪ್ರಸ್ತುತ ಮಾರ್ಗಸೂಚಿ ದರದ ಶೇ.25 ರಷ್ಟು ದಂಡವನ್ನು ನಿಗದಿಪಡಿಸಬಹುದು. ಎರಡನೇಯದಾಗಿ ಖಾಲಿ ನಿವೇಶನಗಳ ಮೇಲೆ ವಿಧಿಸಲಾಗುವ ನಿರ್ವಹಣಾ ಶುಲ್ಕವು ನಿರ್ಮಿಸಲಾದ ಮನೆಗಳ ಮೇಲೆ ವಿಧಿಸುವ ಖಾಲಿ ಭೂ ಶುಲ್ಕಕ್ಕಿಂತ ದುಪ್ಪಟ್ಟಾಗಿರಬಹುದು.
  • 1994 ರಿಂದ ನಗರ ಸ್ಥಳೀಯ ಸಂಸ್ಥೆಗಳಿಂದ ಕೊಳಗೇರಿ ಅಭಿವೃದ್ಧಿ ಸುಧಾರಣಾ ಸೆಸ್ ದರಗಳನ್ನು ಪರಿಷ್ಕರಿಸಲಾಗಿಲ್ಲ. ವಸತಿ ಇಲಾಖೆಯು ಕರ್ನಾಟಕ ಕೊಳಗೇರಿ ಪ್ರದೇಶಗಳ (ಸುಧಾರಣೆ ಮತ್ತು ತೆರವು) ಕಾಯ್ದೆ 1973ಕ್ಕೆ ತಿದ್ದುಪಡಿ ತಂದು ಕರ್ನಾಟಕ ಸಾರ್ವಜನಿಕ ಗ್ರಂಥಾಲಯಗಳ ಅಧಿನಿಯಮ 1965ರ ಕಲಂ 30 ರಂತೆಯೇ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳು ವಿಧಿಸುವ ಆಸ್ತಿ ತೆರಿಗೆ ಮತ್ತು ಇತರ ತೆರಿಗೆಗಳ ಶೇಕಡಾವಾರು ಪ್ರಮಾಣದಲ್ಲಿ ಕೊಳಗೇರಿ ಅಭಿವೃದ್ಧಿ ಸೆಸ್‌ ಸಂಗ್ರಹಿಸಲು ಅವಕಾಶ ಕಲ್ಪಿಸಲು ಶಿಫಾರಸು ಮಾಡಲಾಗಿದೆ.
  • ಅರಣ್ಯ ಉಲ್ಲಂಘನೆಯ ಸುಮಾರು ಒಂದು ಲಕ್ಷ ಪ್ರಕರಣಗಳು ಬಾಕಿ ಉಳಿದಿವೆ. ಅರಣ್ಯ ಇಲಾಖೆಯು ಉಪ ವಲಯ ಅರಣ್ಯಾಧಿಕಾರಿಗಳಿಗೆ ಅಪರಾಧಗಳನ್ನು ಕಾಂಪೌಂಡ್ ಮಾಡುವ ಅಧಿಕಾರ ನೀಡಲು ಕರ್ನಾಟಕ ಅರಣ್ಯ ಕಾಯ್ದೆಯ ಕಲಂ 79ಕ್ಕೆ ತಿದ್ದುಪಡಿ ತರಲು ಪ್ರಸ್ತಾಪಿಸಬಹುದು ಎಂದು ಶಿಫಾರಸು ಮಾಡಲಾಗಿದೆ. ಕಾಂಪೌಂಡ್ ಮಾಡಬಹುದಾದ ಅಪರಾಧಗಳಿಗೆ 1981 ರಲ್ಲಿ ಐವತ್ತು ಸಾವಿರ ರೂಪಾಯಿಗಳ ಮಿತಿಯನ್ನು 10 ಲಕ್ಷ ರೂ. ವರೆಗೆ ಹೆಚ್ಚಿಸಲು ಶಿಫಾರಸು ಮಾಡಲಾಗಿದೆ.
  • ಕರಾವಳಿ ನಿಯಂತ್ರಣ ವಲಯ (ಸಿಆರ್ಝಡ್)-3ರ ನಿಯಮಗಳ ಪ್ರಕಾರ ಕರಾವಳಿಯ 200 ಮೀಟರ್ ನಿಂದ 500 ಮೀಟರ್ ವ್ಯಾಪ್ತಿಯಲ್ಲಿ ಮನೆಗಳನ್ನು ನಿರ್ಮಿಸುವವರು ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿರುವ ಜಿಲ್ಲಾ ಕರಾವಳಿ ನಿರ್ವಹಣಾ ಸಮಿತಿಯಿಂದ ಅನುಮತಿ ಪಡೆಯಬೇಕು. ಜಿಲ್ಲಾಧಿಕಾರಿ ಅವರಿಗೆ ಡಿಸಿಎಂಸಿಯ ಸಭೆಗಳನ್ನು ನಿಯಮಿತವಾಗಿ ನಡೆಸಲು ಸಾಧ್ಯವಾಗದಿರಬಹುದು. ಆದ್ದರಿಂದ, ಸಂಬಂಧಪಟ್ಟ ಡಿಸಿಎಫ್‌ಗಳಿಗೆ ಅಧಿಕಾರ ಪ್ರತ್ಯಾಯೋಜಿಸಲು ಇಲಾಖೆ ಪರಿಗಣಿಸಬಹುದು ಎಂದು ಸಲಹೆ ನೀಡಲಾಗಿದೆ.
  • ಕೈಗಾರಿಕಾ ಬಳಕೆಯ ಪರಿಷ್ಕೃತ ನೀರಿನ ದರವನ್ನು ನೀರಿನ ಬಳಕೆಗೆ ಪ್ರತಿ ಎಂಸಿಎಫ್‌ಟಿಗೆ ರೂ 1.20 ಲಕ್ಷಗಳು, ಕಾಲುವೆ ನೀರಿನ ಬಳಕೆಗೆ ರೂ.2.40 ಲಕ್ಷ ದರಗಳೊಂದಿಗೆ ನಿಯಮಗಳನ್ನು ಅಧಿಸೂಚಿಸಬಹುದು.
  • ಕಾಡಾಗಳನ್ನು ನೀರಾವರಿ ನಿಗಮಗಳೊಂದಿಗೆ ವಿಲೀನಗೊಳಿಸಲು ಶಿಫಾರಸು ಮಾಡಲಾಗಿದೆ. ಜಲಸಂಪನ್ಮೂಲ ಇಲಾಖೆಯು ಪೂರ್ಣಗೊಂಡ ಯೋಜನಾ ಪ್ರದೇಶಗಳಲ್ಲಿನ ಕ್ಷೇತ್ರ ನೀರಾವರಿ ಕಾಲುವೆ ರಚನೆ ಹಾಗೂ ನಿರ್ವಹಣೆ ಮತ್ತು ನೀರು ಬಳಕೆದಾರರ ಸಹಕಾರ ಸಂಘಗಳ ಜವಾಬ್ದಾರಿಯನ್ನು ನಿಗಮಗಳ ವ್ಯಾಪ್ತಿಗೆ ವರ್ಗಾಯಿಸಬಹುದು.
  • ಎಲ್ಲ ಸಕ್ರಿಯ ನೀರು ಬಳಕೆದಾರರ ಸಹಕಾರ ಸಂಘಗಳಿಗೆ ತಲಾ ರೂ. 2 ಲಕ್ಷಗಳ ವಾರ್ಷಿಕ ಅನುದಾನವನ್ನು ನೀಡಲು ಶಿಫಾರಸು ಮಾಡಲಾಗಿದೆ. ನಿಗಮಗಳಲ್ಲಿ ಹೆಚ್ಚಿನ ಬಜೆಟ್ ಹಂಚಿಕೆ ಲಭ್ಯವಿರುವುದರಿಂದ ಹಣವನ್ನು ಕಾಡಾಗಳ ಬದಲು ನಿಗಮಗಳ ಮೂಲಕ ಕೊಡಬಹುದು.
  • ಇಲಾಖೆಯು ಏತ ನೀರಾವರಿ ಮತ್ತು ಕೆರೆ ತುಂಬಿಸುವ ಯೋಜನೆಗಳಲ್ಲಿನ ಎಲ್ಲ ಹಳೆಯ ಪಂಪ್‌ಗಳು ಮತ್ತು ಮೋಟರ್‌ಗಳ ದಕ್ಷತೆಯನ್ನು ಅಳೆಯಲು ಇಂಧನ ಲೆಕ್ಕಪರಿಶೋಧನೆ ಮಾಡಬೇಕು. ಎಲ್ಲಾ ಉಪ ವಿಭಾಗಗಳಿಗೆ ಇಲಾಖೆಯು ಜಾರಿಗೆ ತರಬೇಕಾದ ಇಂಧನ ಉಳಿತಾಯ ಕ್ರಮಗಳ ಬಗ್ಗೆ ಮಾರ್ಗಸೂಚಿಗಳನ್ನು ನೀಡಬೇಕು. ಅಗತ್ಯವಿದ್ದರೆ, ಸ್ಮಾರ್ಟ್ ಸಿಟಿ ನಿಗಮಗಳು ಅಸಮರ್ಥ ಬಲ್ಬ್ ಗಳು ಮತ್ತು ಟ್ಯೂಬ್‌ಗಳನ್ನು ಬದಲಾಯಿಸಿ ಎಲ್‌ಇಡಿ ಬೀದಿ ದೀಪಗಳನ್ನು ಹಾಕಿದಂತೆ ಅಸಮರ್ಥ ಪಂಪ್‌ಗಳು ಮತ್ತು ಮೋಟರ್‌ಗಳನ್ನು ಬದಲಾಯಿಸುವ ಯೋಜನೆಗಳನ್ನು ಟೆಂಡರ್ ಕರೆಯುವ ಮೂಲಕ ಮಾಡಬಹುದು.
  • ಖಾಸಗಿ ಕೈಗಾರಿಕಾ ಪಾರ್ಕ್‌ಗಳನ್ನು ಉತ್ತೇಜಿಸಲು, ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ಖಾಸಗಿ ಕೈಗಾರಿಕಾ ಪಾರ್ಕ್‌ಗಳ ಪ್ರದೇಶವನ್ನು 75 ಎಕರೆಯಿಂದ 10 ಎಕರೆಗೆ ಮತ್ತು ಪಟ್ಟಣ ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳನ್ನು ಹೊಂದಿರುವ ತಾಲ್ಲೂಕುಗಳಲ್ಲಿ 15 ಎಕರೆಗೆ ಇಳಿಸಲು ಕರ್ನಾಟಕ ಕೈಗಾರಿಕಾ ನೀತಿ 2020-25 ಅನ್ನು ಮಾರ್ಪಡಿಸಲು ಶಿಫಾರಸು ಮಾಡಲಾಗಿದೆ.
  • ಜಿಲ್ಲಾ ಮಟ್ಟದ ಏಕಗವಾಕ್ಷಿ ಅನುಮತಿ ಸಮಿತಿ (ಎಸ್‌ಡಬ್ಲ್ಯೂಸಿಸಿ)ಗಳಿಗೆ ಅನುಮತಿ ಅವಧಿ ಮುಗಿದ ನಂತರವೂ ಕೈಗಾರಿಕೆಗಳನ್ನು ಸ್ಥಾಪಿಸದ ಕೆಐಎಡಿಬಿ ಮತ್ತು ಕೆಎಸ್‌ಎಸ್‌ಐಡಿಸಿ ಕೈಗಾರಿಕಾ ನಿವೇಶನಗಳನ್ನು ಗುರುತಿಸುವ ಅಭಿಯಾನವನ್ನು ಕೈಗೊಳ್ಳಲು ಸೂಚನೆ ನೀಡಬೇಕು. ನಿರ್ದಿಷ್ಟ ಪ್ರದೇಶಕ್ಕಿಂತ ಕಡಿಮೆಯಿರುವ ಭೂಮಿಯನ್ನು ಪುನರಾರಂಭಿಸಲು ಜಿಲ್ಲಾ ಮಟ್ಟದ ಏಕಗವಾಕ್ಷಿ ಅನುಮತಿ ಸಮಿತಿಗೆ ಅಧಿಕಾರ ನೀಡಬೇಕು.
  • ನಗರ ಮತ್ತು ಗ್ರಾಮೀಣ ಪ್ರದೇಶಗಳ ವಸತಿ ಪ್ರದೇಶಗಳಲ್ಲಿ ರೂ 1 ಕೋಟಿವರೆಗಿನ ಬಂಡವಾಳ ಹೂಡಿಕೆಯೊಂದಿಗೆ ಸೂಕ್ಷ್ಮ ಪ್ರಮಾಣದ ಗಾರ್ಮೆಂಟ್ ಮತ್ತು ಕಸೂತಿ ಘಟಕಗಳನ್ನು ಮತ್ತು ರೂ. 50 ಲಕ್ಷವರೆಗಿನ ಕೈಮಗ್ಗ ಘಟಕಗಳನ್ನು ಸ್ಥಾಪಿಸಲು ಅನುಮತಿ ನೀಡಲು ನಗರ ಯೋಜನಾ ಇಲಾಖೆಯ ವಲಯ ನಿಯಮಾವಳಿಗಳಿಗೆ ತಿದ್ದುಪಡಿ ತರಲು ಸಿ&ಐ ಇಲಾಖೆಯು ಪ್ರಸ್ತಾಪಿಸಬಹುದು.
  • 74 ಸಕ್ಕರೆ ಕಾರ್ಖಾನೆಗಳ ಪೈಕಿ ಕೇವಲ 14 ಸಹಕಾರಿ ಕಾರ್ಖಾನೆಗಳು ಮತ್ತು ಉಳಿದ 60 ಖಾಸಗಿ ಕಾರ್ಖಾನೆಗಳು ಇವೆ. ಆದ್ದರಿಂದ, ಸಕ್ಕರೆ ಮತ್ತು ಕಬ್ಬು ಅಭಿವೃದ್ಧಿ ನಿರ್ದೇಶನಾಲಯದಲ್ಲಿ ಸಹಕಾರಿ ಅಧಿಕಾರಿಗಳ ಅಗತ್ಯವಿಲ್ಲದಿರಬಹುದು; ನಿರ್ದೇಶನಾಲಯದಲ್ಲಿ ಸಹಕಾರಿ ಇಲಾಖೆಯ ಹುದ್ದೆಗಳನ್ನು ರದ್ದುಗೊಳಿಸಬಹುದು.
  • ಹರಾಜಿಗಾಗಿ ಗುರುತಿಸಲಾದ ರಾಜ್ಯದ 314 ಸಾಮಾನ್ಯ ಕಟ್ಟಡ ಕಲ್ಲು (ಒಬಿಎಸ್) ಬ್ಲಾಕ್‌ಗಳಲ್ಲಿ ಕೇವಲ 15-20 ಬ್ಲಾಕ್‌ಗಳನ್ನು ಮಾತ್ರ ಹರಾಜು ಮಾಡಲಾಗಿದೆ. ಉಳಿದವು ಕಂದಾಯ ಮತ್ತು ಅರಣ್ಯ ಇಲಾಖೆಗಳ ನಿರಾಕ್ಷೇಪಣಾ ಪತ್ರಗಳನ್ನು ಸಲ್ಲಿಸದೇ ಇರುವುದರಿಂದ ಬಾಕಿ ಉಳಿದಿವೆ. ಸರ್ಕಾರವು ಜಿಲ್ಲಾಧಿಕಾರಿಗಳಿಗೆ ಈ ಬ್ಲಾಕ್‌ಗಳಿಗೆ ಬಾಕಿ ಇರುವ ನಿರಾಕ್ಷೇಪಣಾ ಪತ್ರಗಳನ್ನು ಪರಿಶೀಲಿಸಲು ಮತ್ತು ತ್ವರಿತಗೊಳಿಸಲು ಮಾಸಿಕ ಸಭೆಗಳನ್ನು ನಡೆಸುವಂತೆ ಸೂಚನೆ ನೀಡಬಹುದು. ಸಿ&ಐ ಇಲಾಖೆಯು ನಿರಾಕ್ಷೇಪಣಾ ಪತ್ರಗಳು ಮತ್ತು ಅನುಮತಿಗಳ ವಿತರಣೆಯನ್ನು ನಿಯಮಿತವಾಗಿ ಪರಿಶೀಲಿಸಲು ಮತ್ತು ತ್ವರಿತಗೊಳಿಸಲು ಕಂದಾಯ, ಅರಣ್ಯ ಮತ್ತು ಗಣಿ ಇಲಾಖೆಗಳ ಸಚಿವರನ್ನು ಒಳಗೊಂಡ ಸಂಪುಟ ಉಪಸಮಿತಿಯನ್ನು ರಚಿಸಬಹುದು.

ಇದನ್ನೂ ಓದಿ:ಡಿಕೆಶಿ ವಿರುದ್ಧ ಸಿಬಿಐ ತನಿಖೆ: ಸಿದ್ದರಾಮಯ್ಯ ತಿರುಚುವ ಕೆಲಸ ಮಾಡಿದ್ದಾರೆ.. ಮಾಜಿ ಸಿಎಂ ಯಡಿಯೂರಪ್ಪ ಕಿಡಿ

ABOUT THE AUTHOR

...view details