ಕರ್ನಾಟಕ

karnataka

By ETV Bharat Karnataka Team

Published : Jan 14, 2024, 5:06 PM IST

ETV Bharat / state

'ಸ್ವಚ್ಛತೀರ್ಥ ಅಭಿಯಾನ': ದೇಗುಲ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ಅಶೋಕ್, ಅಶ್ವತ್ಥನಾರಾಯಣ್‌

ಬೆಂಗಳೂರಿನಲ್ಲಿಂದು ರಾಜ್ಯ ಬಿಜೆಪಿ ನಾಯಕರು ದೇವಾಲಯಗಳ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.

ದೇವಾಲಯಗಳ ಸ್ವಚ್ಛಗೊಳಿಸಿದ ಬಿಜೆಪಿ ನಾಯಕರು
ದೇವಾಲಯಗಳ ಸ್ವಚ್ಛಗೊಳಿಸಿದ ಬಿಜೆಪಿ ನಾಯಕರು

ಸ್ವಚ್ಛತೀರ್ಥ ಅಭಿಯಾನ

ಬೆಂಗಳೂರು:ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ದೇಶಾದ್ಯಂತ ಎಲ್ಲಾ ದೇಗುಲದ ಸ್ವಚ್ಛತೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಅದರಂತೆ, ಇಂದು ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ನಾಯಕರು ದೇವಾಲಯಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಕೈ ಜೋಡಿಸಿದರು.

ಜಯನಗರದ ನಾಲ್ಕನೇ ಬ್ಲಾಕ್​ನಲ್ಲಿರುವ ವಿನಾಯಕ ದೇವಸ್ಥಾನದಲ್ಲಿ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಸ್ವಚ್ಛತಾ ಕಾರ್ಯ ನಡೆಸಿದರು. ದೇವಸ್ಥಾನದ ಸುತ್ತಮುತ್ತಲಿನಲ್ಲಿ ಕಸ ಗುಡಿಸಿ, ನೀರು ಸಿಂಪಡಿಸಿದರು. ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ,‌ ಕೋಲಾರ ಸಂಸದ ಮುನಿಸ್ವಾಮಿ ಹಾಗೂ ಸ್ಥಳೀಯ ಬಿಜೆಪಿ ನಾಯಕರು ಪಾಲ್ಗೊಂಡಿದ್ದರು.

ಮಲ್ಲೇಶ್ವರದ ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ್, ಮಾಜಿ ಶಾಸಕ ಪಿ.ರಾಜೀವ್, ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ದರು.‌ ದೇವಸ್ಥಾನದ ಮೆಟ್ಟಿಲುಗಳನ್ನು ಸ್ವಚ್ಛಗೊಳಿಸಿ, ನೀರಿನಿಂದ ತೊಳೆಯಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಆರ್.ಅಶೋಕ್, "ದೇವಸ್ಥಾನದ ಸ್ವಚ್ಛತೆಗೆ ಪ್ರಧಾನಿ‌ ಮೋದಿ ಕರೆ ನೀಡಿದ್ದರು. ಅದರಂತೆ ಜಯನಗರದ ಸಿದ್ಧಿವಿನಾಯಕ ದೇವಾಲಯದಲ್ಲಿ ಇಂದು ಸ್ವಚ್ಛತೆ ಮಾಡಿದ್ದೇವೆ. ದೇಶದ ಮೂಲೆಮೂಲೆಯಲ್ಲೂ ಸ್ವಚ್ಛತಾ ಅಭಿಯಾನ ನಡೆಯುತ್ತಿದೆ. ಜನವರಿ 22ರೊಳಗೆ ಎಲ್ಲಾ ದೇವಾಲಯಗಳ ಶುದ್ಧೀಕರಣ ಕಾರ್ಯ ನಡೆಯಲಿದೆ" ಎಂದು ಹೇಳಿದರು.

ಡಾ.ಅಶ್ವತ್ಥನಾರಾಯಣ್ ಮಾತನಾಡಿ, "ನಮ್ಮ ಪ್ರಧಾನಿಯವರ ನಾಯಕತ್ವದಲ್ಲಿ ಬಿಜೆಪಿಯ ಎಲ್ಲ ಕಾರ್ಯಕರ್ತರು, ರಾಮಭಕ್ತರು ದೇಶದುದ್ದಕ್ಕೂ ಎಲ್ಲ ದೇವಸ್ಥಾನ, ಪುಣ್ಯಕ್ಷೇತ್ರಗಳಲ್ಲಿ ಸ್ವಚ್ಛತಾ ಕಾರ್ಯ ಮಾಡುತ್ತಿದ್ದಾರೆ. ನಾವೂ ಕೂಡಾ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ಸ್ವಚ್ಛತಾ ಕೆಲಸ ಮಾಡಿದ್ದೇವೆ. ಈ ಮೂಲಕ ಪಾವಿತ್ರ್ಯತೆ ಕಾಪಾಡುವಂತೆ ಸಮಾಜಕ್ಕೆ ಸಂದೇಶ ರವಾನಿಸಲಾಗುತ್ತಿದೆ" ಎಂದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ನ 'ಭಾರತ್ ಜೋಡೋ‌ ನ್ಯಾಯ್ ಯಾತ್ರೆ' ಕುರಿತು ಮಾತನಾಡಿ, "ಪ್ರತಿಪಕ್ಷಗಳು ತಮ್ಮದೇ ಆದ ಕಾರ್ಯಕ್ರಮ ಹಮ್ಮಿಕೊಂಡಿವೆ. ಐನೂರು ವರ್ಷಗಳ ನೋವು ಏನಿದೆ, ಅದು ಸರಿ‌ಮಾಡುವ ಕೆಲಸ ಆಗುತ್ತಿದೆ. ಪ್ರತಿಪಕ್ಷಗಳೂ ಪ್ರಾಣ ಪ್ರತಿಷ್ಠೆಯಲ್ಲಿ ಭಾಗವಹಿಸಬಹುದಿತ್ತು. ಇಡೀ ದೇಶ ಪ್ರಾಣ ಪ್ರತಿಷ್ಠಾಪನೆಗಾಗಿ ಕಾಯುತ್ತಿದೆ. ಇದು ಭಾರತಕ್ಕೆ ಗೌರವ ತರುವ ಕೆಲಸ. ಈ ಸಂದರ್ಭದಲ್ಲಿ ಭಾರತ್ ನ್ಯಾಯ್ ಯಾತ್ರೆ ಮಾಡಬಾರದಿತ್ತು. ಜನವರಿ 22ರ ಬಳಿಕ ನ್ಯಾಯ್ ಯಾತ್ರೆ ನಡೆಸಬಹುದಿತ್ತು. ಜನ ಅವರಿಗೆ ತಕ್ಕ ಉತ್ತರ ಕೊಡುತ್ತಾರೆ" ಎಂದು ಹೇಳಿದರು.

ಭಟ್ಕಳದ ಚಿನ್ನದ ಪಳ್ಳಿ‌ ಮಸೀದಿಯೂ ನಿರ್ನಾಮ ಆಗುತ್ತದೆ ಎಂಬ ಅನಂತ್ ಕುಮಾರ್ ಹೆಗಡೆ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅಶ್ವತ್ಥನಾರಾಯಣ, "ಅದು ಅವರ ವೈಯಕ್ತಿಕ ಹೇಳಿಕೆ. ಅದರ ಬಗ್ಗೆ ನಾನೇನೂ ಹೆಚ್ಚು ಹೇಳಲು ಇಷ್ಟಪಡಲ್ಲ. ಮೋದಿಯವರು ಸಾಮರಸ್ಯ, ಐಕ್ಯತೆ, ಎಲ್ಲ ಧರ್ಮಗಳನ್ನೂ ಗೌರವಿಸಬೇಕು ಅಂತ ಕರೆ ಕೊಟ್ಟಿದ್ದಾರೆ. ದೇವಸ್ಥಾನಗಳು ಮಸೀದಿಗಳಾಗಿರುವ ಬಗ್ಗೆ ನೋವಿದೆ ಹೌದು. ಇತಿಹಾಸದಲ್ಲಿ ಆ ಥರ ಹಲವು ನೋವುಗಳಿವೆ. ಇದಕ್ಕೆ ವಿಶೇಷವಾಗಿ ಈ ವಿಚಾರಗಳನ್ನು ಕೈಗೆತ್ತಿಕೊಳ್ಳುವ ಸಂದರ್ಭ ಇದಲ್ಲ. ಆ ವಿಚಾರಗಳೂ ಪಕ್ಷದ ಮುಂದಿಲ್ಲ" ಎಂದರು.

ಪ್ರತಿಯೊಬ್ಬರಿಗೂ ಗೌರವ ಕೊಡಬೇಕು: ಸಿಎಂ ವಿರುದ್ಧ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಏಕವಚನ ಪ್ರಯೋಗ ವಿಚಾರದ ಕುರಿತು ಮಾತನಾಡಿ, "ರಾಜಕೀಯದಲ್ಲಿ ಇದೆಲ್ಲ ಸಹಜ. ಸಿದ್ದರಾಮಯ್ಯ ಸೇರಿ ಹಲವರು ಹೀಗೆ ಮಾತಾಡಿದವರಿದ್ದಾರೆ. ತೊಡೆ ತಟ್ಟಿದವರೂ ಇದ್ದಾರೆ. ಸದನದೊಳಗೆ ಹೊರಗೆ ಉಗ್ರವಾಗಿ ಮಾತಾಡಿದವರಿದ್ದಾರೆ. ಹೆಗಡೆ ಹೇಳಿಕೆ ಸರಿ ಅಂತ ನಾನು ಹೇಳಲ್ಲ. ಕೆಲವು ಸಲ ಹಿಡಿತ ತಪ್ಪಿ ಈ ಥರ ಮಾತು ಬರುತ್ತದೆ. ಅದು ತಪ್ಪೇ. ಪ್ರತಿಯೊಬ್ಬರಿಗೂ ಗೌರವ ಕೊಡಬೇಕು. ಇಂಥ ತಪ್ಪು ಆದಾಗ ಸರಿಪಡಿಸಿಕೊಳ್ಳಬೇಕು. ಹಾಗಂತ ಹೆಗಡೆ ಅವರ ಹೇಳಿಕೆಯನ್ನು ನಾನು ಸಮರ್ಥಿಸಿಕೊಳ್ತಿಲ್ಲ. ಕಾಂಗ್ರೆಸ್ ನಾಯಕರೂ ಏಕವಚನದಲ್ಲಿ‌ ಮಾತಾಡಿದ್ದಾರೆ. ಹೆಗಡೆ ವಿರುದ್ಧ ಕ್ರಮ ತಗೊಳ್ಳುವುದಾದರೆ ಮೊದಲು ಕಾಂಗ್ರೆಸ್ ನಾಯಕರ ವಿರುದ್ಧ ಕೇಸ್ ಹಾಕಲಿ. ನಂತರ ಹೆಗಡೆ ಮೇಲೆ ಕೇಸ್ ಹಾಕಲಿ" ಎಂದರು.

ಇದನ್ನೂ ಓದಿ:ಮೆಕ್ಕೆಜೋಳದಲ್ಲಿ ಮೂಡಿಬಂದ ರಾಮಮಂದಿರ-ವಿಡಿಯೋ

ABOUT THE AUTHOR

...view details