ಕರ್ನಾಟಕ

karnataka

ETV Bharat / state

‌ಭಾರತವೇನು ಕೇವಲ ಹಿಂದಿವಾಲಾಗಳ ದೇಶವೇ? - ಕರವೇ ನಾರಾಯಣಗೌಡ ಆಕ್ರೋಶ - Karave Narayanagawda anger over central government

ಕೇಂದ್ರ ಸರ್ಕಾರ ನಮ್ಮ ಹಣವನ್ನು ನಮಗೆ ಕೊಡದೆ ನಮ್ಮನ್ನು ಸಾಲಗಾರರನ್ನಾಗಿ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಕರ್ನಾಟಕ ನೆನಪಿಲ್ಲವೇ? ಯಾಕೆ ಅವರು ಕರ್ನಾಟಕದ ನೆರೆ ಸಂತ್ರಸ್ತ ಜಿಲ್ಲೆಗಳಿಗೆ ಭೇಟಿ ನೀಡುತ್ತಿಲ್ಲ. ಅವರ ದೃಷ್ಟಿಯಲ್ಲಿ ಉತ್ತರ ಭಾರತ ಮಾತ್ರ ಭಾರತವೇ? ದಕ್ಷಿಣ ಭಾರತವು ಭಾರತಕ್ಕೆ ಸೇರಿಲ್ಲವೇ? ಎಂದು ಕಿಡಿಕಾರಿದರು.

ಕರವೇ ನಾರಾಯಣಗೌಡ ಆಕ್ರೋಶ
ಕರವೇ ನಾರಾಯಣಗೌಡ ಆಕ್ರೋಶ

By

Published : Nov 1, 2020, 5:59 PM IST

Updated : Nov 1, 2020, 7:32 PM IST

ಬೆಂಗಳೂರು:ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವವನ್ನ ಸರಳವಾಗಿ ಆಚರಿಸಲಾಯಿತು. ಕರವೇ ಕಚೇರಿ ಮುಂಭಾಗ ಕನ್ನಡ ಧ್ವಜಾರೋಹಣ ನೆರವೇರಿಸಲಾಯಿತು. ಕರವೇಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹಾಗೂ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹಾಜರಿದ್ದರು.

ಈ ವೇಳೆ ಮಾತಾನಾಡಿದ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ, ಕೇಂದ್ರ ಸರ್ಕಾರದ ನಡವಳಿಕೆ ನೋಡಿದರೆ ದಕ್ಷಿಣ ಭಾರತೀಯರನ್ನು ಅವರು ದೇಶದ ನಾಗರಿಕರೆಂದು ಪರಿಗಣಿಸಿಯೇ ಇಲ್ಲವೆಂದು ತೋರುತ್ತದೆ. ಭಾರತವೇನು ಕೇವಲ ಹಿಂದಿವಾಲಾಗಳ ದೇಶವೇ? ದ್ರಾವಿಡ ಚಳವಳಿ ನೆನಪಿದೆಯೇ? ಅಂಥ ಚಳವಳಿ ಮತ್ತೆ ಮರುಕಳಿಸಿದರೆ ಆಶ್ವರ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿಯವರಿಗೆ ಕರ್ನಾಟಕ ನೆನಪಿಲ್ಲವೇ? ಯಾಕೆ ಅವರು ಕರ್ನಾಟಕದ ನೆರೆ ಸಂತ್ರಸ್ತ ಜಿಲ್ಲೆಗಳಿಗೆ ಭೇಟಿ ನೀಡುತ್ತಿಲ್ಲ. ಅವರ ದೃಷ್ಟಿಯಲ್ಲಿ ಉತ್ತರ ಭಾರತ ಮಾತ್ರ ಭಾರತವೇ? ದಕ್ಷಿಣ ಭಾರತವು ಭಾರತಕ್ಕೆ ಸೇರಿಲ್ಲವೇ?ಅಂತ ಪ್ರಶ್ನೆ ಮಾಡಿದರು.

ಜಿಎಸ್​ಟಿ ಬಾಕಿ ಹಣ ಕೊಡಿ ಎಂದು ಕರ್ನಾಟಕ‌ ಬೇಡುವ ಸ್ಥಿತಿ ತಲುಪಿದೆ. ನಾವು ಯಾರ ಹಣವನ್ನು ಕೇಳುತ್ತಿದ್ದೇವೆ? ಅದು ನಮ್ಮದೇ ಹಣ. ನಾವೇ ಕೊಟ್ಟ ತೆರಿಗೆಯ ಒಂದು ಭಾಗವನ್ನಷ್ಟೇ ಕೇಳುತ್ತಿದ್ದೇವೆ. ಕೇಂದ್ರ ಸರ್ಕಾರ ನಮ್ಮ ಹಣವನ್ನು ನಮಗೆ ಕೊಡದೆ ನಮ್ಮನ್ನು ಸಾಲಗಾರರನ್ನಾಗಿ ಮಾಡುತ್ತಿದೆ. ಕರ್ನಾಟಕಕ್ಕೆ ನ್ಯಾಯಯುತವಾಗಿ ದಕ್ಕಬೇಕಿರುವ ಅನುದಾನಗಳನ್ನು ಕೇಳಲು, ಕರ್ನಾಟಕದ ಸಮಸ್ಯೆಗಳ ಬಗ್ಗೆ ಪ್ರಧಾನಿ ಜತೆ ಮಾತನಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಯ ಪಡುತ್ತಿದ್ದಾರೆ. ಒಬ್ಬ ಪ್ರಧಾನಿ ಜತೆ ಮಾತಾಡಲು ಒಬ್ಬ ಮುಖ್ಯಮಂತ್ರಿ ಭಯ ಪಡುವ ಸ್ಥಿತಿ ತಲುಪಿದರೆ ಏನರ್ಥ? ಇದನ್ನು ಒಕ್ಕೂಟವೆಂದು ಕರೆಯಲು ಸಾಧ್ಯವೇ? ಒಕ್ಕೂಟದ ಮೂಲತತ್ತ್ವಗಳು‌ ಉಳಿದುಕೊಂಡಿವೆಯೇ? ಎಂದು ಕಿಡಿಕಾರಿದರು.

ರಾಜ್ಯೋತ್ಸವವನ್ನು ಸಂಘ-ಸಂಸ್ಥೆಗಳು ಸರಳವಾಗಿ ಆಚರಿಸಬೇಕು ಎಂದು ಸರ್ಕಾರ ಹೇಳುತ್ತದೆ. ಆದರೆ ಸರ್ಕಾರ ನಡೆಸುವ‌ ಪಕ್ಷ, ಉಪಚುನಾವಣೆಗಳಲ್ಲಿ ಹತ್ತಾರು ಸಾವಿರ ಜನರನ್ನು ಸೇರಿಸಿ, ಸಿನಿಮಾ ಕಲಾವಿದರನ್ನು‌ ಕರೆಯಿಸಿ ರ‌್ಯಾಲಿಗಳನ್ನು ನಡೆಸುತ್ತದೆ. ನೀವು ಹೇಳುವ ನಿಯಮಗಳು ನಿಮಗೆ ಅನ್ವಯಿಸುವುದಿಲ್ಲವೇ?ಕೊರೊನಾ ಮತ್ತು ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹದ ಹಿನ್ನೆಲೆಯಲ್ಲಿ ಈ ವರ್ಷ ಸರಳವಾಗಿ ರಾಜ್ಯೋತ್ಸವ ಆಚರಿಸಲು‌ ನಾವು ಮೊದಲೇ ತೀರ್ಮಾನಿಸಿದ್ದೆವು. ಆದರೆ ರಾಜಕೀಯ ಪಕ್ಷಗಳು ಚುನಾವಣೆ ಹೆಸರಲ್ಲಿ‌ ತಾವೇ ಮಾಡಿದ ನಿಯಮಗಳನ್ನು ತಾವೇ ಮುರಿಯುತ್ತಿವೆ ಎಂದರು.

ರಾಜ್ಯೋತ್ಸವವೆಂದರೆ ಕೇವಲ ಸಂಭ್ರಮ, ಸಡಗರವಲ್ಲ. ಅಖಂಡ ಕರ್ನಾಟಕದ ಕನಸು ಕಂಡ ನಮ್ಮ ಹಿರಿಯರ ಶ್ರೇಯೋಭಿಲಾಷೆಯನ್ನು ಕಾಪಾಡುವ ಹೊಣೆಗಾರಿಕೆ ಮತ್ತು ಸವಾಲು. ನಾವು ನಮ್ಮ ಹಕ್ಕುಗಳಿಗೆ ಯಾರನ್ನು ಬೇಕಾದರೂ ಪ್ರಶ್ನಿಸುವ ಅವಕಾಶವನ್ನು ಸಂವಿಧಾನ ನಮಗೆ ನೀಡಿದೆ. ಕನ್ನಡಿಗರ ಹಕ್ಕೊತ್ತಾಯಗಳಿಗೆ ಕೇಂದ್ರ, ರಾಜ್ಯ ಸರ್ಕಾರಗಳನ್ನು ಪ್ರಶ್ನಿಸುತ್ತಿರೋಣ, ಹೋರಾಟ ನಡೆಸೋಣ. ಕರ್ನಾಟಕದ ಹಿತಾಸಕ್ತಿಯನ್ನು ಕಾಪಾಡಲು ರಾಷ್ಟ್ರೀಯ ಪಕ್ಷಗಳು ವಿಫಲವಾಗಿವೆ. ನಾವು ಈಗ ಪ್ರಾದೇಶಿಕ ಚಿಂತನೆಗಳನ್ನು ಬಿತ್ತಬೇಕಿದೆ. ಕೇಂದ್ರ ಸರ್ಕಾರ ಏನೇ ಸಮಸ್ಯೆ ಬಂದರೂ‌ ಒಮ್ಮೆ ಚೀನಾ ಕಡೆ ಮತ್ತೊಮ್ಮೆ ಪಾಕಿಸ್ತಾನದ ಕಡೆ ತೋರಿಸಿ ನುಣುಚಿಕೊಳ್ಳುತ್ತದೆ. ಈ‌ ಆಟ ಹೆಚ್ಚು‌ ದಿನ‌ ನಡೆಯದು. ಕನ್ನಡಿಗರು ಜಾಗೃತರಾಗಿದ್ದಾರೆ ಎಂದು ಹೇಳಿದರು.

Last Updated : Nov 1, 2020, 7:32 PM IST

For All Latest Updates

TAGGED:

ABOUT THE AUTHOR

...view details