ಬೆಂಗಳೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್. ಎಸ್. ದೊರೆಸ್ವಾಮಿ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ರಾಜ್ಯ ಕಾಂಗ್ರೆಸ್ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.
ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧ ಘೋಷಣೆ ಕೂಗಿದ ನಾಯಕರು, ಯತ್ನಾಳ್ ಶಾಸಕತ್ವವನ್ನು ರದ್ದುಪಡಿಸಿ ಅವರನ್ನು ದೇಶದ್ರೋಹದಡಿ ಬಂಧಿಸಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಮಾತನಾಡಿ, ಸ್ವಾತಂತ್ರ್ಯದ ಅರಿವು ಯತ್ನಾಳ್ ಗೆ ಇಲ್ಲದಂತೆ ಕಾಣುತ್ತದೆ. ಯತ್ನಾಳ್ ಕೇವಲ ದೊರೆಸ್ವಾಮಿ ಅವರಿಗೆ ಮಾತ್ರ ಅವಮಾನ ಮಾಡಿಲ್ಲ. ದೇಶದ ಜನತೆಗೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ಕಾಂಗ್ರೆಸ್ ನಾಯಕರ ಪ್ರತಿಭಟನೆ ಕಾಂಗ್ರೆಸ್ ದೊರೆಸ್ವಾಮಿ ಅವರಿಗೆ ಅಪಾರ ಗೌರವ ನೀಡುತ್ತಾ ಬಂದಿದೆ. ನಮ್ಮ ಸರ್ಕಾರ ಇದ್ದಾಗಲೂ ದೊರೆಸ್ವಾಮಿ ಅವರು ನಮಗೂ ಛಾಟಿ ಬೀಸಿದ್ದಾರೆ ಎಂದರು. ಬೆರಳೆಣಿಕೆಯಷ್ಟು ಸ್ವಾತಂತ್ರ್ಯ ಹೋರಾಟಗಾರರರು ಮಾತ್ರ ದೇಶದಲ್ಲಿ ಬದುಕಿದ್ದಾರೆ. ಅವರಿಗೆ ನಾವು ಗೌರವ ನೀಡಬೇಕು ಎಂದು ಹೇಳಿದರು. ಅಮೆರಿಕ ಅಧ್ಯಕ್ಷ ಟಂಪ್ ಅವರನ್ನು ಕರೆದುಕೊಂಡು ಬಂದು ಇನ್ನೂರು, ಮುನ್ನೂರು ಕೋಟಿ ರೂ. ಖರ್ಚು ಮಾಡಿ ಯಾವುದೋ ಸ್ಟೇಡಿಯಂನಲ್ಲಿ ಜನ ಸೇರಿ ಬಿಟ್ರೆ ದೊಡ್ಡ ನಾಯಕ ಅಂತಾ ಬಿಂಬಿಸಿಕೊಳ್ಳೋ ಪ್ರಯತ್ನ ಮಾಡಿದ್ದಾರೆ ಎಂದು ಮೋದಿ ವಿರುದ್ಧವೂ ವಾಗ್ದಾಳಿ ನಡೆಸಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಯತ್ನಾಳ್ ಕ್ಷಮೆ ಮಾತ್ರ ಅಲ್ಲ, ಅವರ ಶಾಸಕ ಸ್ಥಾನ ರದ್ದು ಪಡಿಸಿ ದೇಶದ್ರೋಹ ಹೇಳಿಕೆ ಅಡಿ ಬಂಧಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಜಮೀರ್ ಅಹ್ಮದ್ ಖಾನ್, ಜಯಮಾಲಾ, ಎಂ ಕೃಷ್ಣಪ್ಪ, ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ, ಸೇರಿದಂತೆ ಹಲವಾರು ನಾಯಕರು ಪಾಲ್ಗೊಂಡಿದ್ದರು.