ಬೆಂಗಳೂರು: ಕಾಂಗ್ರೆಸ್ ಕುಮ್ಮಕ್ಕಿನಿಂದ ಕೆಂಪಣ್ಣ ಕಮಿಷನ್ ಬಗ್ಗೆ ಆರೋಪ ಮಾಡುತ್ತಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಆರೋಪಿಸಿದರು.
ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ವರ್ಷಗಳಲ್ಲಿ ನಾನು ಕ್ಲಿಯರ್ ಮಾಡಿದ ಅಂಕಿಅಂಶಗಳ ಸಮೇತ ಮಾಹಿತಿ ನೀಡುತ್ತಿದ್ದು, 3,737 ಕೋಟಿ ರೂ. ಸಮ್ಮಿಶ್ರ ಸರ್ಕಾರದಲ್ಲಿ ಪೆಂಡಿಂಗ್ ಇತ್ತು. 7,128 ಕೋಟಿ ರೂ. ನಮ್ಮ ಅವಧಿಯಲ್ಲಿ ಬಿಲ್ ಆಗದೇ ಬಾಕಿ ಇದೆ.
ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಪಾವತಿಯಾಗಿರುವುದು 12,752 ಕೋಟಿ ರೂ., ಒಟ್ಟು ಬಿಲ್ 22,011 ಕೋಟಿ ರೂ. ಪಾವತಿಯಾಗಿದೆ. ಇನ್ನು ಸಣ್ಣಸಣ್ಣ ಟೆಂಡರ್ ದಾರರ 2.158 ಕೋಟಿ ರೂ. ಬಿಡುಗಡೆಯಾಗಿದೆ. ದೊಡ್ಡ ದೊಡ್ಡ ಟೆಂಡರ್ ದಾರರು 1,115 ಜನ ಇದ್ದಾರೆ. ಇವರಿಗೆ 3,376 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ. ಟೆಂಡರ್ ಮೊತ್ತ ಐದು ಪರ್ಸೆಂಟ್ಗಿಂತ ಹೆಚ್ಚು ಕೊಟ್ಟಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಇದ್ದಾಗ 35 ಗಿಂತಲೂ ಹೆಚ್ಚು ಬಿಡ್ ಪರ್ಸೆಂಟ್ಗೆ ಕೊಟ್ಟಿದ್ದಾರೆ. ನಾವು ಅತ್ಯಂತ ಪಾರದರ್ಶಕವಾಗಿ ಟೆಂಡರ್ ಪ್ರಕ್ರಿಯೆ ಮುಗಿಸಿದ್ದೇವೆ ಎಂದು ಹೇಳಿದರು.
2020-21 ಸಾಲಿನಲ್ಲಿ ಒಂದು ಲಕ್ಷ ಕೋಟಿ ರೂಪಾಯಿಗಳ ಕೆಲಸ ಆಗುತ್ತಿದೆ. ಐಬಿಆರ್ ಲೋನ್ ಕಡಿಮೆ ಮಾಡಿದ್ದೇವೆ. 1,650 ಕೋಟಿ ರೂ.ಗೆ ಐಬಿಆರ್ ಲೋನ್ ಇಳಿಸಿದ್ದೇವೆ. ಸಣ್ಣ ಟೆಂಡರ್ ದಾರರ ಬಿಲ್ ಬಾಕಿ ಉಳಿದಿಲ್ಲ. ಒಬ್ಬ ಟೆಂಡರ್ ದಾರ ಸಹ ಯಾಕೆ ಬಂದು ಕೇಳಿಲ್ಲ? ಅಧಿಕಾರಿಗಳು, ಸಚಿವರು, ಶಾಸಕರು ಭ್ರಷ್ಟರು ಅಂತ ಹೇಳಿದ್ದೀರಿ, ಹಾಗಾದರೆ ಗುತ್ತಿಗೆದಾರರು ಒಬ್ಬರು ಸಹ ಹೊರಗೆ ಯಾಕೆ ಬಂದು ಮಾತನಾಡಿಲ್ಲ. ಕೆಂಪಣ್ಣ ಹಾಗಾದರೆ ಎಲ್ಲ ಗುತ್ತಿಗೆದಾರರು ಭ್ರಷ್ಟರೇನಾ? ಎಂದು ತಿರುಗೇಟು ನೀಡಿದರು.
ಮನೆಯಲ್ಲಿ ಕೂರಿಸಿಕೊಂಡು ಆರೋಪ ಮಾಡಿಸುವವರಿಗೆ ಅರ್ಥ ಆಗಬೇಕು. ದೆಹಲಿಯಲ್ಲಿ ಒಂದು ರೂಪಾಯಿ ಬಿಡುಗಡೆ ಮಾಡಿದ್ರೆ 85 ಫೈಸೆ ಸೋರಿಕೆ ಆಗುತ್ತೆ ಅಂತ ರಾಜೀವ್ ಗಾಂಧಿ ಹೇಳಿದ್ರು. ಆಗ ರಾಜ್ಯ ಮತ್ತು ರಾಷ್ಟ್ರದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ಇದರ ಬಗ್ಗೆ ಕಾಂಗ್ರೆಸ್ ನಾಯಕರು ಏನು ಹೇಳ್ತಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ನಾನು ಉತ್ತರ ಕರ್ನಾಟಕದ ಮನುಷ್ಯ. ಬಹಳ ಕೆಟ್ಟ ಭಾಷೆಯಲ್ಲಿ ಹೇಳಕ್ಕೆ ಬರುತ್ತೆ. ಆದರೆ ನಾನು ಕೆಂಪಣ್ಣ ಅವರನ್ನು ದೊಡ್ಡ ಅಣ್ಣನ ಸ್ಥಾನದಲ್ಲಿ ನೋಡುತ್ತಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಶೇ 40 ಕಮಿಷನ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿ: ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ