ಬೆಂಗಳೂರು: ಕಣ್ವ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಎಲ್ಲ ವಹಿವಾಟು ಲೆಕ್ಕಪತ್ರಗಳನ್ನು ಫೊರೆನ್ಸಿಕ್ ಆಡಿಟ್ ನಡೆಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಬ್ಯಾಂಕ್ ಆಡಳಿತ ಮಂಡಳಿಯು ಅವ್ಯವಹಾರ ನಡೆಸಿರುವ ಗುಮಾನಿ ಇರುವುದರಿಂದ ಲೆಕ್ಕಪತ್ರಗಳನ್ನು ಫೊರೆನ್ಸಿಕ್ ಆಡಿಟ್ ಮಾಡಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಠೇವಣಿದಾರರಾದ ಕೆ.ಎಸ್. ರಮೇಶ್ ಮತ್ತಿತರರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠ ಸರ್ಕಾರ ಸೇರಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಸಲು ಸೂಚಿಸಿದೆ.
ಇದೇ ವೇಳೆ ಬ್ಯಾಂಕ್ ಅವ್ಯವಹಾರ ಆರೋಪ ಸಂಬಂಧ ಪೊಲೀಸ್ ಠಾಣೆಗಳಲ್ಲಿ ದಾಖಲಿಸಿರುವ ನಾಲ್ಕು ಪ್ರತ್ಯೇಕ ಎಫ್ಐಆರ್ಗಳ ತನಿಖಾ ವರದಿಯನ್ನು ಸಲ್ಲಿಸುವಂತೆ ಪೊಲೀಸರಿಗೆ ನಿರ್ದೇಶಿಸಿದೆ. ವಿಚಾರಣೆ ವೇಳೆ ಅಭಿಪ್ರಾಯ ವ್ಯಕ್ತಪಡಿಸಿರುವ ಪೀಠ, ಪ್ರಕರಣದಲ್ಲಿ ದೊಡ್ಡ ಮೊತ್ತ ದುರ್ಬಳಕೆಯಾಗಿರುವ ಆರೋಪವಿದೆ. ಸರ್ಕಾರ ಕೆಪಿಐಡಿ ಕಾಯ್ದೆಯಡಿ ನಗರ ಜಿಲ್ಲಾಧಿಕಾರಿಯನ್ನು ಸಕ್ಷಮ ಪ್ರಾಧಿಕಾರವನ್ನಾಗಿ ನೇಮಿಸಿದ್ದರೂ, ಅವರು ಕೋವಿಡ್ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಹೀಗಾಗಿ ಜವಾಬ್ದಾರಿಯನ್ನು ಬೇರೆ ಉನ್ನತ ಮಟ್ಟದ ಅಧಿಕಾರಿ ಗೂ, ತನಿಖೆಯನ್ನು ತಜ್ಞ ಸಂಸ್ಥೆಗೂ ವಹಿಸುವುದು ಸೂಕ್ತ ಎಂದಿದೆ.
ಅರ್ಜಿದಾರರು, ಬ್ಯಾಂಕ್ ತನ್ನ ಠೇವಣಿದಾರರು ಮತ್ತು ಸಾರ್ವಜನಿಕರಿಂದ 2019ರ ಮಾರ್ಚ್ ವೇಳೆಗೆ 642.31 ಕೋಟಿ ರೂಪಾಯಿ ಹಣವನ್ನು ಠೇವಣಿ ರೂಪದಲ್ಲಿ ಸಂಗ್ರಹಿಸಿದೆ. ಈ ಹಣದಲ್ಲಿ ಹಲವು ಕಂಪನಿಗಳಿಗೆ 416 ಕೋಟಿ ರೂ. ಸಾಲ ನೀಡಿದೆ. ಆದರೆ ಆ ಸಾಲ ವಸೂಲಿಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ, ಹೀಗಾಗಿ ಇಡೀ ವಹಿವಾಟನ್ನು ಫೊರೆನ್ಸಿಕ್ ಆಡಿಟ್ಗೆ ಒಳಪಡಿಸಬೇಕು ಎಂದು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.