ಆನೇಕಲ್(ಬೆಂಗಳೂರು): "ಕುತೂಹಲಕ್ಕೂ ಕೂಡ ಮಾದಕ ವ್ಯಸನದ ಜಾಡು ಹಿಡಿಯದಿರಿ. ಕರ್ನಾಟಕವನ್ನು ಮಾದಕ ವ್ಯಸನಮುಕ್ತ ರಾಜ್ಯವನ್ನಾಗಿಸುವಲ್ಲಿ ರಾಜ್ಯ ಪೊಲೀಸರೊಂದಿಗೆ ಕೈ ಜೋಡಿಸಿ" ಎಂದು ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಸಿಂಗಾರ ಸಿರಿಯೇ ಹಾಡಿಗೆ ಸಪ್ತಮಿ ಗೌಡ ಹೆಜ್ಜೆ:ಮಾದಕ ವಸ್ತು ನಿಷೇಧ ಕುರಿತು ಜಾಗೃತಿ ಮೂಡಿಸಲು ಬೆಂಗಳೂರು ಜಿಲ್ಲಾ ಪೊಲೀಸ್ ಹಾಗೂ ಇನ್ನಿತರೆ ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ 5 ಕಿ.ಮೀ ಓಟ, 3 ಕಿ.ಮೀ ನಡಿಗೆ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿತ್ತು. 'ಮಾದಕ ವಸ್ತುಗಳು ನಮಗೆ ಬೇಡ ಜಾಗೃತಿ ಅಭಿಯಾನ'ದ ಜುಂಬಾ ಡ್ಯಾನ್ಸ್ನಲ್ಲಿ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದರು. ಕಾಂತಾರ ಖ್ಯಾತಿಯ ಸಪ್ತಮಿ ಗೌಡ ಸಿಂಗಾರ ಸಿರಿಯೇ ಹಾಡಿಗೆ ಹೆಜ್ಜೆ ಹಾಕಿದರು.
ನಟಿ ಸಪ್ತಮಿ ಗೌಡ ಮಾತನಾಡಿ, ಡ್ರಗ್ಸ್ ಬಗ್ಗೆ ಯುವ ಪೀಳಿಗೆಯಲ್ಲಿ ಅರಿವು ಮೂಡಿಸುವ ಕೆಲಸ ಆಗುತ್ತಿದೆ. ಮಾದಕ ವಸ್ತು ಸೇವಿಸುವವರ ಮತ್ತು ಅವರ ಕುಟುಂಬಸ್ಥರ ಜೀವನ ತೊಂದರೆಗೆ ಒಳಗಾಗುತ್ತದೆ. ನಿಮಗೆ ಮಾದಕ ವ್ಯಸನಿಗಳು ಗೊತ್ತಿದ್ದರೆ ಅವರನ್ನು ಅದರಿಂದ ಹೊರತರುವ ಕೆಲಸ ಮಾಡಿ. ಕೌನ್ಸೆಲಿಂಗ್ ಕೊಡಿಸುವ ಪ್ರಯತ್ನ ಮಾಡಿ. ಅವರಿಗೆ ಅದರ ಅಗತ್ಯ ಇರುತ್ತೆ. ಮಾದಕ ವಸ್ತುವಿಗೆ ಕಡಿವಾಣ ಹಾಕೋದು ನಮ್ಮೆಲ್ಲರ ಜವಾಬ್ದಾರಿ. ಆ ನಿಟ್ಟಿನಲ್ಲಿ ಕೆಲಸ ಮಾಡೋಣ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಇಂತಹ ವ್ಯಸನಗಳಿಗೆ ಬಲಿಯಾಗಬಾರದು ಎಂದು ಬೆಂಗಳೂರು ಗ್ರಾಮಾಂತರ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ಕಾಲೇಜು ವಿದ್ಯಾರ್ಥಿಗಳು ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದಾರೆ. ಪ್ರಾರಂಭಿಕ ಹಂತದಲ್ಲೇ ಇದಕ್ಕೆ ಕಡಿವಾಣ ಹಾಕಬೇಕು ಎನ್ನುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ನಿರಂತರವಾಗಿ ಕೆಲಸ ಮಾಡುತ್ತಿದೆ.