ಬೆಂಗಳೂರು: ಹೆಣ್ಣು ಒಂದು ಹೆಜ್ಜೆ ಮುಂದೆ ಇಟ್ಟರೆ ಸಮಾಜ ಒಂದು ಹಂತ ಮೇಲಕ್ಕೇರುತ್ತದೆ. ಎಲ್ಲಾ ಮಹಿಳೆಯರಲ್ಲೂ ಒಂದಿಲ್ಲೊಂದು ಕನಸು ಅಥವಾ ಕಲೆ ಅಡಗಿರುತ್ತದೆ. ಅವುಗಳಿಗೆ ಸರಿಯಾದ ಪೋಷಣೆ ನೀಡುವುದು ಕುಟುಂಬದ ಹೊಣೆ. ಹಾಗೆಯೇ ಅವಕಾಶ ದೊರಕಿಸಿಕೊಡುವುದು ಸಮಾಜದ ಎಲ್ಲರ ಜವಾಬ್ದಾರಿಯಾಗಿದೆ ಎಂದು 'ಅವಳ ಹೆಜ್ಜೆ' ಸಂಸ್ಥಾಪಕಿ ಶಾಂತಲಾ ದಾಮ್ಲೆ ಹೇಳಿದರು.
ನಗರದ ಮಹಾಲಕ್ಷ್ಮೀ ಲೇಔಟ್‌ನಲ್ಲಿ ಕನ್ನಡತಿ ಉತ್ಸವ-2022ರ ಅಂಗವಾಗಿ ನಡೆದ ಮಿಸ್ ಮಹಾಲಕ್ಷ್ಮೀ ಕಾರ್ಯಕ್ರಮದಲ್ಲಿನ ಫ್ಯಾಷನ್ ಶೋನಲ್ಲಿ 7 ವರ್ಷದ ಬಾಲಕಿಯರಿಂದ ಹಿಡಿದು 75 ವರ್ಷ ವಯೋಮಾನದವರೆಗಿನ ಮಹಿಳೆಯರು ತಮ್ಮ ತಮ್ಮ ಕನಸು, ಕಸುಬು ಮತ್ತು ಕಲೆಯನ್ನು ಕ್ರಿಯಾಶೀಲವಾಗಿ ವಿವಿಧ ಉಡುಗೆ ತೊಡುಗೆಗಳ ಮೂಲಕ ರ‍್ಯಾಂಪ್ ಮೇಲೆ ಪ್ರದರ್ಶಿಸಿದರು.
ವೈದ್ಯೆ, ವಕೀಲೆ, ಫಾರ್ಮಾಸಿಸ್ಟ್, ಕೇಶ ವಿನ್ಯಾಸಕಿ, ಬಾಹ್ಯಾಕಾಶ ವಿಜ್ಞಾನಿ, ವನ್ಯಜೀವಿ ಛಾಯಾಗ್ರಾಹಕಿ, ಸಮಾಜ ಸೇವೆ, ಕಸೂತಿ, ಶಿಕ್ಷಣ, ಫ್ಯಾಷನ್ ಡಿಸೈನಿಂಗ್, ಮಾಡಲಿಂಗ್, ಜಿಮ್, ಯೋಗ, ಸಾಹಿತ್ಯ, ಗಾಯನ, ಭರತನಾಟ್ಯ, ಕಥಕ್, ಯಕ್ಷಗಾನ, ಚಿತ್ರಕಲೆ, ನಾಟಕ, ಟ್ರಕ್ಕಿಂಗ್, ಆಭರಣ ವಿನ್ಯಾಸ ಮುಂತಾದ ಕ್ಷೇತ್ರಗಳನ್ನು ಮಹಿಳೆಯರು ಪ್ರತಿನಿಧಿಸಿದರು.
ನಾಲ್ಕು ತಲೆಮಾರಿನ ಒಂದೇ ಕುಟುಂಬದ ಮಹಿಳೆಯರಿಂದ ರ‍್ಯಾಂಪ್ ವಾಕ್: 'ಹಳೆ ಬೇರು ಹೊಸ ಚಿಗುರು' ಶೀರ್ಷಿಕೆಯಡಿ ನಾಲ್ಕು ತಲೆಮಾರಿನ ಒಂದೇ ಕುಟುಂಬದ ಮಹಿಳೆಯರು ಒಟ್ಟಾಗಿ ರ‍್ಯಾಂಪ್ ವಾಕ್ ಮೇಲೆ ನಡೆದು ತಮ್ಮ ಬಾಂಧವ್ಯವನ್ನು ಪ್ರದರ್ಶಿಸಿದರು.
ಇದನ್ನೂ ಓದಿ:ಗೊಂದಲಗಳಿಲ್ಲದೆ ತಳವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣಪತ್ರ ನೀಡಿ: ಸಚಿವ ಶ್ರೀನಿವಾಸ್ ಪೂಜಾರಿ