ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ದತ್ತಿ ಪ್ರಶಸ್ತಿಗಳಲ್ಲಿ ಒಂದಾಗಿರುವ ʻಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿʼಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಆಯ್ಕೆ ಮಾಡಲಾಗಿದೆ. ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರು ಇಂದು 2022ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿರುವ ವಿಚಾರವನ್ನು ದೇವೇಗೌಡರ ನಿವಾಸಕ್ಕೆ ತೆರಳಿ ತಿಳಿಸಿದರು. ಡಾ.ಮಹೇಶ ಜೋಶಿ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯಲ್ಲಿ ಇತಿಹಾಸ ತಜ್ಞ ಹಾಗೂ ಸಂಶೋಧಕ ಡಾ.ತಲಕಾಡು ಚಿಕ್ಕರಂಗೇ ಗೌಡ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ನೇ.ಭ. ರಾಮಲಿಂಗ ಶೆಟ್ಟಿ, ಡಾ. ಪದ್ಮಿನಿ ನಾಗರಾಜು ಹಾಗೂ ಗೌರವ ಕೋಶಾಧ್ಯಕ್ಷ ಡಾ.ಬಿ.ಎಂ.ಪಟೇಲ್ ಪಾಂಡು ಇದ್ದರು.
"ನಾಡಿನ ಹಿರಿಯ ರಾಜಕೀಯ ಮುತ್ಸದ್ದಿ, ದೇಶದ ಪ್ರಧಾನಿ ಪಟ್ಟಕ್ಕೇರಿದ ಮೊದಲ ಕನ್ನಡಿಗ, ಕನ್ನಡ ನಾಡು ನುಡಿಯ ಕುರಿತು ಸದಾ ತುಡಿತ ಹೊಂದಿರುವ ಅಪ್ಪಟ ಕನ್ನಡದ ಹೆಮ್ಮೆಯ ಮಣ್ಣಿನ ಮಗ ಎಂದು ಕರೆಸಿಕೊಂಡ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು 2022ನೇ ಸಾಲಿನ ʻಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿʼಗೆ ಭಾಜನರಾಗಿದ್ದಾರೆ" ಎಂದು ಡಾ.ಮಹೇಶ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಲ್ವಡಿಯವರು ನಾಡಿನ ಅಭ್ಯುದಯದ ಕನಸು ಕಂಡವರು. ಅವರ ಆಶಯದಂತೆ ನಾಡಿನಲ್ಲಿ ಕೈಗಾರಿಕಾ ಕ್ಷೇತ್ರ, ಕೃಷಿ, ನೀರಾವರಿ, ವಿದ್ಯುಚ್ಛಕ್ತಿ, ಹಿಂದುಳಿದ ವರ್ಗಗಳ ಕಲ್ಯಾಣ, ಸಾಮಾಜಿಕ ನ್ಯಾಯ, ಮಹಿಳಾ ಸಬಲೀಕರಣ, ಗ್ರಾಮ ನೈರ್ಮಲೀಕರಣ, ವೈದ್ಯಕೀಯ ಕ್ಷೇತ್ರ, ನೀರಿನ ಸೌಕರ್ಯ, ಸಾರಿಗೆ ಸೌಲಭ್ಯ, ವ್ಯಾಪಾರ ಸೇರಿದಂತೆ ನಾಡಿನ ಸರ್ವತೋಮುಖ ಅಭಿವೃದ್ಧಿಯಲ್ಲಿ ಗಣನೀಯ ಸಾಧನೆ ಮಾಡಿರುವ ಗಣ್ಯರೊಬ್ಬರಿಗೆ ಪ್ರತಿ ವರ್ಷ ಪ್ರಸ್ತುತ ʻಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿʼ ನೀಡಬೇಕು ಎನ್ನುವ ಮೂಲ ಆಶಯ ಈ ದತ್ತಿ ಪ್ರಶಸ್ತಿಯದ್ದು. ಪ್ರಶಸ್ತಿಯು 51,000 (ಐವತ್ತೊಂದು ಸಾವಿರ) ರೂ. ನಗದು, ಸ್ಮರಣಿಕೆ, ಫಲ ತಾಂಬೂಲ ಒಳಗೊಂಡಿರುತ್ತದೆ ಎಂದು ತಿಳಿಸಿದ್ದಾರೆ.