ಕರ್ನಾಟಕ

karnataka

ETV Bharat / state

'ಕರ್ನಾಟಕ'ಕ್ಕೆ 50 ತುಂಬಿದ ಹರುಷ: ಬಿಬಿಎಂಪಿಯಿಂದ ವಿಶೇಷ ರೀತಿಯಲ್ಲಿ ರಾಜ್ಯೋತ್ಸವ ಆಚರಣೆ

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಇಂದು ಕನ್ನಡ ರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗಿದೆ.

ಬಿಬಿಎಂಪಿಯಿಂದ ಕನ್ನಡ ರಾಜ್ಯೋತ್ಸವ
ಬಿಬಿಎಂಪಿಯಿಂದ ಕನ್ನಡ ರಾಜ್ಯೋತ್ಸವ

By ETV Bharat Karnataka Team

Published : Nov 1, 2023, 10:50 AM IST

Updated : Nov 1, 2023, 11:26 AM IST

ಬೆಂಗಳೂರು: ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಪಾಲಿಕೆಯಿಂದ ವಿಶೇಷ ರೀತಿಯಲ್ಲಿ ಆಚರಿಸಲಾಯಿತು. ಕೇಂದ್ರ ಕಚೇರಿಯಲ್ಲಿ ಬಿಬಿಎಂಪಿ ಆಡಳಿತಗಾರರಾದ ರಾಕೇಶ್ ಸಿಂಗ್, ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಧ್ವಜಾರೋಹಣ ನೆರವೇರಿಸಿದರು. ನಂತರ ರಾಷ್ಟ್ರಗೀತೆ, ನಾಡಗೀತೆ ನುಡಿಸಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

ಧ್ವಜಾರೋಹಣ ನೆರವೇರಿಸಿದ ಆಯುಕ್ತ ತುಷಾರ್ ಗಿರಿನಾಥ್

ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, "ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಬೇಕಾದರೆ, ಕನ್ನಡ ಸಾಹಿತ್ಯವನ್ನು ಪ್ರತಿಯೊಬ್ಬ ಕನ್ನಡಿಗನೂ ಓದಬೇಕು. ಭಾಷೆಯ ಮೇಲೆ ಅಭಿಮಾನ ಹೊಂದಬೇಕು. ಕಲೆಗಳಿಗೆ ಪ್ರೋತ್ಸಾಹ ನೀಡಬೇಕು. ಈ ಮೂರು ಕೆಲಸಗಳನ್ನು ಮಾಡಿದಾಗ ಮಾತ್ರವೇ ಸಾವಿರಾರು ವರ್ಷದ ಇತಿಹಾಸ ಹೊಂದಿರುವ ಕನ್ನಡ ಭಾಷೆ ಬೆಳೆಯಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಹೆಜ್ಜೆ ಹಾಕೋಣ" ಎಂದು ಹೇಳಿದರು.

5 ಕನ್ನಡ ಗೀತೆಗಳನ್ನು ಹಾಡುವ ಮೂಲಕ ನುಡಿ ನಮನ

ಕಾರ್ಯಕ್ರಮದಲ್ಲಿ ಹುಯಿಲಗೊಳ ನಾರಾಯಣರಾಯರ ಗೀತೆ 'ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು', ಕುವೆಂಪು ವಿರಚಿತ 'ಎಲ್ಲಾದರು ಇರು ಎಂತಾದರು ಇರು', ದ.ರಾ.ಬೇಂದ್ರೆ ಅವರ 'ಒಂದೇ ಒಂದೇ ಕರ್ನಾಟಕ ಒಂದೇ', ಸಿದ್ದಯ್ಯ ಪುರಾಣಿಕರ 'ಹೊತ್ತಿತೋ ಹೊತ್ತಿತೋ ಕನ್ನಡದ ದೀಪ', ಚನ್ನವೀರ ಕಣವಿ ಅವರ 'ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ' ಎನ್ನುವ 5 ಕನ್ನಡ ಗೀತೆಗಳನ್ನು ಹಾಡುವ ಮೂಲಕ ನುಡಿ ನಮನ ಸಲ್ಲಿಸಲಾಯಿತು.

ಪಾಲಿಕೆ ಕೇಂದ್ರ ಕಛೇರಿಯ ಮುಂಭಾಗದಲ್ಲಿ ಮುಂದೆ ಕೆಂಪು ಮತ್ತು ಹಳದಿ ಬಣ್ಣದಲ್ಲಿ ಕರ್ನಾಟಕದ ನಕ್ಷೆಯ ರಂಗೋಲಿ ಬಿಡಿಸಿ ಕರ್ನಾಟಕ ಸಂಭ್ರಮ-50 'ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ' ಎಂಬ ಘೋಷ ವಾಕ್ಯ ಬರೆಯಲಾಯಿತು.

ವಿಶೇಷ ಆಯುಕ್ತರಾದ ಮುನೀಶ್ ಮೌದ್ಗೀಲ್, ಶಿವಾನಂದ ಕಲ್ಕೆರಿ, ಡಾ.ಕೆ.ಹರೀಶ್ ಕುಮಾರ್, ರೆಡ್ಡಿ ಶಂಕರ ಬಾಬು, ಪ್ರೀತಿ ಗೆಲ್ಲೋಟ್, ಪೂರ್ವ ವಲಯ ಆಯುಕ್ತ ಸ್ನೇಹಲ್, ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರಹ್ಲಾದ್, ಜಂಟಿ ಆಯುಕ್ತರಾದ ಪ್ರತಿಭಾ, ಪಲ್ಲವಿ, ಉಪ ಆಯುಕ್ತ ಮಂಜುನಾಥ ಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸಾರ್ವಜನಿಕರಲ್ಲಿ ಮನವಿ:ಇಂದು ಸಂಜೆ 5 ಗಂಟೆಗೆ ಬೆಂಗಳೂರು ನಗರದ ಎಲ್ಲಾ ಮೈದಾನಗಳಲ್ಲಿ ಕೆಂಪು ಹಳದಿ ಬಣ್ಣದ ಗಾಳಿಪಟಗಳನ್ನು ಆಕಾಶಕ್ಕೆ ಹಾರಿ ಬಿಡುವ ಮೂಲಕ ಸುವರ್ಣ ಸಂಭ್ರಮ ಗಾಳಿಪಟ ಉತ್ಸವ ಆಚರಣೆ ಹಾಗೂ ಸಂಜೆ 7 ಗಂಟೆಗೆ ಬೆಂಗಳೂರು ನಗರದ ಎಲ್ಲಾ ಮನೆಗಳ ಮುಂದೆ, ಕಚೇರಿಗಳ ಮುಂದೆ ಹಾಗೂ ಅಂಗಡಿ-ಮಳಿಗೆಗಳ ಮುಂದೆ ಹಣತೆ (ದೀಪ) ಹಚ್ಚುವ ಮೂಲಕ ಕನ್ನಡ ಜ್ಯೋತಿ ಬೆಳಗಿಸಿ ಆಚರಿಸಲು ಸಾರ್ವಜನಿಕರಿಗೆ ಪಾಲಿಕೆ ಮುಖ್ಯ ಆಯುಕ್ತ ಹುಷಾರ್ ಗಿರಿನಾಥ್ ಮನವಿ ಮಾಡಿದ್ದಾರೆ.

ಶುಭಾಶಯ ಕೋರಿದ ಜೆಡಿಎಸ್ ವರಿಷ್ಠರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು, ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯ ಕೋರಿದ್ದಾರೆ. ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ ಇಂದಿಗೆ 50 ವರ್ಷ ಪೂರೈಸಿದ್ದು, ಕನ್ನಡದ ಅಸ್ಮಿತೆಯ ಉಳಿವಿಗಾಗಿ ಹಾಗೂ ಕನ್ನಡಿಗರ ಏಳಿಗೆಗಾಗಿ, ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಎಂದು ಟ್ವೀಟ್ ಮಾಡಿದ್ದಾರೆ.

ನಾಡಿನ ಹಾಗೂ ಜಗತ್ತಿನೆಲ್ಲೆಡೆ ನೆಲೆಸಿರುವ ಸಮಸ್ತ ಕನ್ನಡ ಬಂಧುಗಳಿಗೆ 68ನೇ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಹಾಗೆಯೇ, 'ಕರ್ನಾಟಕ'ವೆಂದು ಹೆಸರಾಗಿ ಇಂದಿಗೆ 50 ವರ್ಷ. ಸಾಧಿಸಿದ್ದು ಸಾಕಷ್ಟು, ಸಾಧಿಸಬೇಕಾದದ್ದು ಬಹಳಷ್ಟು. ಕನಸು ನನಸುಗಳ ಈ ಮಹಾಯಾನದಲ್ಲಿ ಸಾರ್ಥಕ ಹೆಜ್ಜೆಗಳನ್ನು ಇಡುತ್ತಾ ಕನ್ನಡಾಂಬೆಯ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರೈಸೋಣ. ಪ್ರತಿ ಹೊಸಿಲಿನಲ್ಲಿಯೂ ಕನ್ನಡದ ನಂದಾದೀಪ ಬೆಳಗಲಿ, ಆ ಹೊನಲು ಜಗವೆಲ್ಲಾ ತುಂಬಿಕೊಳ್ಳಲಿ ಎಂದು ಆಶಿಸುತ್ತೇನೆ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:68ನೇ ಕನ್ನಡ ರಾಜ್ಯೋತ್ಸವ: ಕಂಠೀರವ ಸ್ಟೇಡಿಯಂನಲ್ಲಿ ಧ್ವಜಾರೋಹಣ ನೆರವೇರಿಸಿದ ಸಿಎಂ ಸಿದ್ದರಾಮಯ್ಯ

Last Updated : Nov 1, 2023, 11:26 AM IST

ABOUT THE AUTHOR

...view details