ಬೆಂಗಳೂರು: 2021-22 ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲಿ ಬದಲಾವಣೆ ತರಲಾಗಿದೆ. ಇದೇ ಮೊದಲ ಬಾರಿ ಜಿಲ್ಲಾವಾರು ಪ್ರತಿನಿಧ್ಯ, ಕ್ಷೇತ್ರವಾರು ಆದ್ಯತೆ ಹಾಗು ಅಚ್ಚರಿ ಆಯ್ಕೆ ಮೂಲಕ ರಾಜ್ಯೋತ್ಸವ ಪುರಸ್ಕೃತರನ್ನು ಪಟ್ಟಿ ಮಾಡಲಾಗುತ್ತಿದೆ. 28 ಸಾವಿರ ಅರ್ಜಿಗಳ ಪರಿಶೀಲನೆ ಮುಕ್ತಾಯಗೊಂಡಿದ್ದು, ಇಂದು ಸಂಜೆ ಅಥವಾ ನಾಳೆ ಪುರಸ್ಕೃತರ ಪಟ್ಟಿ ಬಿಡುಗಡೆಯಾಗಲಿದೆ.
ಬೇಕಾಬಿಟ್ಟಿಯಾಗಿ ಪ್ರಶಸ್ತಿ ಪುರಸ್ಕೃತರ ಪಟ್ಟಿ ಸಿದ್ಧಪಡಿಸುವ ಪದ್ಧತಿಗೆ ಕಡಿವಾಣ ಹಾಕಿ ಆಯ್ಕೆಗೆ ನಿಯಮ ರೂಪಿಸುವಂತೆ ಹೈಕೋರ್ಟ್ ಸೂಚನೆ ನೀಡಿದ್ದ ನಂತರ ಎಚ್ಚೆತ್ತುಕೊಂಡಿರುವ ಸರ್ಕಾರ, ಕಳೆದ ಮೂರು ವರ್ಷದಿಂದ ನಿಯಮಾವಳಿ ರೂಪಿಸಿಕೊಂಡು ಹಂತ ಹಂತವಾಗಿ ಆಯ್ಕೆ ವಿಧಾನದಲ್ಲಿ ಸಾಕಷ್ಟು ಸುಧಾರಣೆ, ಬದಲಾವಣೆ ಮಾಡಿಕೊಂಡು ಬಂದಿದೆ. ಈ ಬಾರಿಯೂ ಕೆಲ ಬದಲಾವಣೆ ಮೂಲಕ ಆಯ್ಕೆ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.
ವಿವಿಧ ಕ್ಷೇತ್ರದ 67 ಮಂದಿ ಸಾಧಕರಿಗೆ ಈ ಬಾರಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಹಾಗಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅರ್ಜಿ ಆಹ್ವಾನದಂತೆ ಪ್ರಶಸ್ತಿಗಾಗಿ ಸಾವಿರಾರು ಗಣ್ಯರು ಆನ್‌ಲೈನ್ ಹಾಗೂ ಸೇವಾ ಸಿಂಧು ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದು, ಕೆಲವರು ಭೌತಿಕವಾಗಿ ಅರ್ಜಿ ಸಲ್ಲಿಸಿದ್ದರು. ಎಲ್ಲಾ ವಲಯ ಮತ್ತು ಕ್ಷೇತ್ರ ಸೇರಿ ನಾಡಿನ ವಿವಿಧ ವಲಯದಿಂದ ಸುಮಾರು 28 ಸಾವಿರದಷ್ಟು ಅರ್ಜಿಗಳು ಬಂದಿವೆ.
2021-22ನೇ ಸಾಲಿನ ಪ್ರಶಸ್ತಿಗೆ ಅರ್ಹ ಮಹನೀಯರನ್ನು ಆಯ್ಕೆ ಮಾಡಲು ಇಲಾಖೆ ಆಯ್ಕೆ ಸಲಹಾ ಸಮಿತಿಯನ್ನು ರಚಿಸಿದ್ದು, ಸಮಿತಿಯಲ್ಲಿ ವಿವಿಧ ಕ್ಷೇತ್ರಗಳ ಒಟ್ಟು 30ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಇಲಾಖೆ ನೇಮಕ ಮಾಡಿದ್ದ ಉಪ ಸಮಿತಿ, ಸಲಹಾ ಸಮಿತಿ ಅರ್ಜಿ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನಿಲ್ ಕುಮಾರ್ ಅಧ್ಯಕ್ಷತೆಯಲ್ಲಿ ಪ್ರಸಕ್ತ ಸಾಲಿನ ರಾಜೋತ್ಸವ ಪ್ರಶಸ್ತಿಗೆ ನಾನಾ ಕ್ಷೇತ್ರದ ಸಾಧಕರನ್ನು ಆಯ್ಕೆ ಮಾಡಲಾಗಿದೆ. 1:3 (ಒಂದು ಪ್ರಶಸ್ತಿಗೆ ಮೂವರು ಅರ್ಜಿ)ಗಳನ್ನು ಸಚಿವರ ನೇತೃತ್ವದ ಸಭೆಯಲ್ಲಿ ಅಂತಿಮಗೊಳಿಸಿತ್ತು ಎಂದು ತಿಳಿದುಬಂದಿದೆ.
ಇದನ್ನೂ ಓದಿ:ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಅಂತಿಮಗೊಳಿಸಿದ ಸಿಎಂ; ಸದ್ಯದಲ್ಲೇ ಪಟ್ಟಿ ಪ್ರಕಟ
ಜಿಲ್ಲಾವಾರು ಪ್ರಾತಿನಿಧ್ಯ:ನ್ಯಾ. ನಾಗಮೋಹನ್ ದಾಸ್ ಸಮಿತಿ ನೀಡಿರುವ ಶಿಫಾರಸಿನ ಮಾನದಂಡಗಳಂತೆ ಪ್ರತಿ ಜಿಲ್ಲೆಗೂ ಒಂದು ಪ್ರಶಸ್ತಿಯನ್ನು ನೀಡಲು ನಿರ್ಧರಿಸಲಾಗಿದೆ. ವಿವಿಧ ಕ್ಷೇತ್ರಗಳಾದ ರಂಗಭೂಮಿ, ಸಂಗೀತ-ನೃತ್ಯ, ಜಾನಪದ, ಚಲನಚಿತ್ರ, ಕಿರುತೆರೆ, ಚಿತ್ರಕಲೆ-ಶಿಲ್ಪಕಲೆ, ಯಕ್ಷಗಾನ-ಬಯಲಾಟದ ಸಾಧಕರನ್ನ ಗುರುತಿಸಲಾಗುತ್ತಿದೆ. ಕೃಷಿ, ಪರಿಸರ, ವಿಜ್ಞಾನ, ತಂತ್ರಜ್ಞಾನ, ಸಹಕಾರ, ವೈದ್ಯಕೀಯ, ಶಿಕ್ಷಣ ಕ್ಷೇತ್ರ ಮತ್ತು ಪತ್ರಿಕಾ ರಂಗದ ಸಾಧಕರನ್ನು ಕೂಡ ಆಯ್ಕೆ ಮಾಡಿ ಗೌರವಿಸಲಾಗುತ್ತದೆ. ಈ 67 ಪ್ರಶಸ್ತಿಯಲ್ಲಿ ಎಲ್ಲಾ ಜಿಲ್ಲೆಗಳು ಮತ್ತು ಎಲ್ಲಾ ವಲಯಗಳು, ಕ್ಷೇತ್ರಗಳು ಸೇರಿಕೊಂಡಿರಲಿವೆ.
ಅಚ್ಚರಿ ಆಯ್ಕೆ ಸಾಧ್ಯತೆ: ಅರ್ಜಿ ಸಲ್ಲಿಕೆ ಮಾಡದೇ ಇದ್ದರೂ ಅರ್ಹರಿಗೆ ಸರ್ಕಾರವೇ ಹುಡುಕಿಕೊಂಡು ಹೋಗಿ ಪ್ರಶಸ್ತಿ ನೀಡಲು ನಿರ್ಧರಿಸಿದೆ. ಹಾಗಾಗಿ, ಪ್ರಶಸ್ತಿಗೆ ಅರ್ಜಿ ಸಲ್ಲಿಕೆ ಮಾಡದ ಎಲೆಮರೆ ಕಾಯಿಯಂತಿರುವವರನ್ನು ಕೂಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ. ಇದರಿಂದಾಗಿ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಕೆಲವು ಅಚ್ಚರಿಯ ಹೆಸರುಗಳನ್ನು ನಿರೀಕ್ಷಿಸಬಹುದಾಗಿದೆ ಎನ್ನಲಾಗಿದೆ.