ಬೆಂಗಳೂರು: ಕರ್ನಾಟಕ 50ರ ಸಂಭ್ರಮಾಚರಣೆಯಲ್ಲಿದೆ. ಪ್ರಗತಿಪರ ರಾಜ್ಯವಾದ ಕರ್ನಾಟಕ ಯಾವತ್ತೂ ವಿಕಾಸದ ಹಾದಿಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯ. ರಾಜ್ಯದ ಬಜೆಟ್‌ನ ಇತಿಹಾಸವನ್ನು ಅವಲೋಕಿಸಿದರೆ ಅಭಿವೃದ್ಧಿಯ ಪಥ ಹೇಗೆ ಸಾಗಿ ಬಂದಿದೆ ಎಂಬುದರ ಸ್ಥೂಲ ಚಿತ್ರಣ ದೊರಕುತ್ತದೆ. ಇದರ ಕುರಿತ ವಿಶೇಷ ನೋಟ ಇಲ್ಲಿದೆ.
ಕರುನಾಡಿಗೆ 50 ವರ್ಷದ ಸಂಭ್ರಮ. ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷ ಪೂರೈಸಿದೆ. ಪ್ರಗತಿಶೀಲ ರಾಜ್ಯವಾಗಿರುವ ಕರುನಾಡು ತನ್ನ ಐವತ್ತು ವರ್ಷದ ಪಯಣದಲ್ಲಿ ದೇಶದ ಅಭಿವೃದ್ಧಿಗಾಗಿ ಹಲವು ಕೊಡುಗೆಗಳನ್ನು ಕೊಡುತ್ತಿದೆ. ಪ್ರಜ್ಞಾವಂತರ ನಾಡಾಗಿರುವ ಕರ್ನಾಟಕ ವಿಕಾಸದ ಹಾದಿಯಲ್ಲಿ ಸಮಯದ ಜೊತೆಗೆ ಹಲವಾರು ತಿರುವುಗಳನ್ನು ಪಡೆಯುತ್ತಾ ಅಭಿವೃದ್ಧಿಯ ಪಥದತ್ತ ಮುನ್ನುಗ್ಗುತ್ತಾ ಸಾಗಿ ಬಂದಿದೆ. ಹೀಗಾಗಿ ಕರ್ನಾಟಕ ದೇಶದ ಟಾಪ್ ಐದು ರಾಜ್ಯಗಳ ಆರ್ಥಿಕತೆಗಳಲ್ಲಿ ಒಂದಾಗಿದೆ. ಎಲ್ಲಾ ಹೊಸತನಗಳಿಗೆ ತನ್ನನ್ನು ತೆರೆದು ಆಧುನಿಕತೆ, ನಾವೀನ್ಯತೆಗಳನ್ನು ಮೈಗೂಡಿಸಿ ವಿಕಾಸದ ಆರ್ಥಿಕತೆಯನ್ನು ಮೇಲ್ಪಂಕ್ತಿ ಹಾಕುತ್ತಾ ಸಾಗಿದೆ.
ಕಾಲದಿಂದ ಕಾಲಕ್ಕೆ ಕೈಗೊಂಡ ಆರ್ಥಿಕ ಸುಧಾರಣಾ ಕ್ರಮಗಳಿಂದ ರಾಜ್ಯ ಪ್ರಗತಿಶೀಲ ರಾಜ್ಯಗಳಲ್ಲಿ ಅಗ್ರಗಣ್ಯವಾಗಿದೆ. ಕರುನಾಡು ದೇಶದ ವಿಕಾಸದ ಎಂಜಿನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 1960ರಲ್ಲಿ ಸುಮಾರು 296 ರೂಪಾಯಿ ಇದ್ದ ರಾಜ್ಯದ ತಲಾ ಆದಾಯ ಇದೀಗ ಸರಾಸರಿ 3.32 ಲಕ್ಷ ರೂಪಾಯಿಗೆ ತಲುಪಿದೆ. ಇದು ರಾಜ್ಯದ ಪ್ರಗತಿಗೆ ಹಿಡಿದ ಕೈಗನ್ನಡಿಯಾಗಿದೆ. 7.9% ಜಿಡಿಪಿ ಪ್ರಗತಿ ಕಾಣಲಿರುವ ಕರುನಾಡು ತನ್ನ ವೇಗದ ಗತಿಯನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಿಸುತ್ತಲೇ ಇದೆ. ಸರ್ಕಾರಗಳ ಆದಾಯ ಹೆಚ್ಚಿಸುವ ಅನೇಕ ಕ್ರಮ, ಜನರ ಜೀವನಮಟ್ಟ ಹೆಚ್ಚಿಸುವ ಉಪಕ್ರಮಗಳು ಕರುನಾಡನ್ನು ಉತ್ತುಂಗಕ್ಕೇರಿಸುವತ್ತ ಕೊಂಡೊಯ್ಯುತ್ತಿದೆ. ರಾಜ್ಯದ ಬಜೆಟ್ ಇತಿಹಾಸವನ್ನು ಅವಲೋಕಿಸಿದರೆ ಅಭಿವೃದ್ಧಿಯ ಪಥ ಹೇಗೆ ಸಾಗಿ ಬಂದಿದೆ ಎಂಬುದರ ಸ್ಥೂಲ ಚಿತ್ರಣ ದೊರಕುತ್ತದೆ.
ರಾಜ್ಯದ ಆರ್ಥಿಕತೆಗೆ ಬಜೆಟ್ ಬಲ :ರಾಜ್ಯದಲ್ಲಿ ಚುನಾಯಿತ ಸರಕಾರ ರಚನೆ ಬಳಿಕ ಮೊಟ್ಟ ಮೊದಲ ಬಜೆಟ್ ಮಂಡಿಸಿದವರು ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ. ಆ ಬಳಿಕ ಪರಿಷ್ಕೃತ ಆಯವ್ಯಯಗಳೂ ಸೇರಿದಂತೆ ರಾಜ್ಯದಲ್ಲಿ ಒಟ್ಟಾರೆ 77 ಬಜೆಟ್‌ಗಳು ಮಂಡನೆಯಾಗಿವೆ. ಅಂದಿನ ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯನವರು 1952-53ರಲ್ಲಿ 21 ಕೋಟಿ ರೂಗಳ ಬಜೆಟ್ ನ್ನು ಮೊದಲ ಬಾರಿಗೆ ಮಂಡಿಸಿದ್ದರು. ಇಂತಹ ಪ್ರಗತಿಪರ ರಾಜ್ಯದ ಮೊದಲ ಬಜೆಟ್‌ನ ಗಾತ್ರ 21.03 ಕೋಟಿ ರೂಪಾಯಿ ಇತ್ತು. ಇದೀಗ ರಾಜ್ಯದ ಬಜೆಟ್‌ನ ಗಾತ್ರ 3 ಲಕ್ಷ ಕೋಟಿ ರೂಪಾಯಿ ದಾಟಿದೆ. 21 ಕೋಟಿ ರೂಪಾಯಿಯಿಂದ ಪ್ರಾರಂಭವಾದ ರಾಜ್ಯದ ಬಜೆಟ್ ಯಾತ್ರೆ ಸದ್ಯಕ್ಕೆ 3.27 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಆ ಮೂಲಕ ರಾಜ್ಯದ ಆರ್ಥಿಕ ಪ್ರಗತಿಗೆ ಪೂರಕವಾದ ಅಡಿಗಲ್ಲು ಹಾಕುತ್ತಾ ಸಾಗಲಾಯಿತು.
ಮೊದಲ ಬಜೆಟ್ ಗಾತ್ರ ಬರೇ 21 ಕೋಟಿ:ಕರ್ನಾಟಕ ಏಕೀಕರಣದ ಬಳಿಕ 1952-53ರಲ್ಲಿ ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ರಾಜ್ಯದ ಮೊದಲ ಮುಂಗಡ ಪತ್ರವನ್ನು ಮಂಡಿಸಿದರು. ಕೆಂಗಲ್ ಅವರು ಮಂಡಿಸಿದ್ದ ಮೊದಲ ಬಜೆಟ್ ಗಾತ್ರ ಬರೇ 21.03 ಕೋಟಿ ರೂ. ಆಗಿನ ಆರ್ಥಿಕತೆಯ ಇತಿಮಿತಿಯೊಳಗೆ ಕೆಂಗಲ್ ಹನುಮಂತಯ್ಯ ಅವರು ಬಜೆಟ್ ತಯಾರಿಸಿದ್ದರು. ಒಟ್ಟು 4 ಬಜೆಟ್ ನೀಡಿದ್ದ ಕೆಂಗಲ್ ಅವರ ಕಡೆಯ ಆಯವ್ಯಯದ ಗಾತ್ರ 30 ಕೋಟಿ ರೂ. ಆಗಿತ್ತು.