ಕರ್ನಾಟಕ

karnataka

By

Published : Jan 30, 2023, 11:38 AM IST

Updated : Jan 30, 2023, 12:08 PM IST

ETV Bharat / state

ಕನ್ನಡ ಕವಿ, ಭಾಷಾ ವಿಜ್ಞಾನಿ ಕೆ ವಿ ತಿರುಮಲೇಶ್ ಇನ್ನಿಲ್ಲ

ಕನ್ನಡದ ಕವಿ, ವಿಮರ್ಶಕರು ಹಾಗೂ ಭಾಷಾ ವಿಜ್ಞಾನಿಯಾಗಿದ್ದ ಕೆ ವಿ ತಿರುಮಲೇಶ್ ಇಂದು ಬೆಳಗ್ಗೆ ವಿಧಿವಶರಾದರು.

kannada Poet K V Tirumalesh dies
ಕನ್ನಡ ಕವಿ ಕೆ ವಿ ತಿರುಮಲೇಶ್ ಇನ್ನಿಲ್ಲ

ಬೆಂಗಳೂರು: ಕನ್ನಡದ ಕವಿ, ವಿದ್ವಾಂಸರು, ವಿಮರ್ಶಕರು ಹಾಗೂ ಭಾಷಾ ವಿಜ್ಞಾನಿಯಾಗಿದ್ದ ಕೆ.ವಿ ತಿರುಮಲೇಶ್ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹೈದರಾಬಾದಿನ ತಮ್ಮ ಮಗಳ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು.

ಕೇರಳದ ಕಾಸರಗೋಡಿನ ಕಾರಡ್ಕ ಎಂಬಲ್ಲಿ ಹುಟ್ಟಿದ ಕೆವಿ ತಿರುಮಲೇಶ್ ಹೈದರಾಬಾದಿನ ಸೆಂಟ್ರಲ್ ಇನ್ಸ್​ಟಿಟ್ಯೂಟ್ ಆಫ್ ಇಂಗ್ಲಿಷ್ ಆಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು. ನಿವೃತ್ತಿ ಬಳಿಕ ಹೈದರಾಬಾದನಲ್ಲೇ ವಾಸವಾಗಿದ್ದರು.

ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಇತ್ತೀಚೆಗೆ ಹೃದಯದ ಶಸ್ತ್ರಚಿಕಿತ್ಸೆಯಾಗಿತ್ತು. ಭಾನುವಾರ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದರು. ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಪತ್ನಿ ಹಾಗೂ ಮೂವರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ.

ಐದು ದಶಕಗಳ ಕಾಲ ಕವಿತೆ, ಕತೆ, ವಿಮರ್ಶೆ, ನಾಟಕ, ಅನುವಾದ ಕ್ಷೇತ್ರದಲ್ಲಿ ಹೆಸರು ಗಳಿಸಿರುವ ತಿರುಮಲೇಶ್ ಅವರ "ಮುಖವಾಡ" ಹಾಗೂ "ವಠಾರ" ಇವರ ಎರಡು ಜನಪ್ರಿಯ ಕೃತಿಗಳು. ಸಾಹಿತ್ಯ ಕೃಷಿಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನಿರಂಜನ ಪ್ರಶಸ್ತಿ ಲಭಿಸಿವೆ. ಇವರ ಅಕ್ಷಯ ಕಾವ್ಯ ಎಂಬ ಕವನ ಸಂಕಲನಕ್ಕೆ 2015 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

ಬೇಂದ್ರೆಯವರ ಕಾವ್ಯಶೈಲಿ, ನಮ್ಮ ಕನ್ನಡ, ಅಸ್ತಿತ್ವವಾದ ಇವರ ಪ್ರಮುಖ ವಿಮರ್ಶಾ ಕೃತಿಗಳು. ತಿರುಮಲೇಶ್ ಅವರು ಕನ್ನಡ ಭಾಷೆ ಹಾಗೂ ವ್ಯಾಕರಣದ ಬಗ್ಗೆ ಆಳವಾದ ಹಿಡಿತ ಹೊಂದಿದ್ದರು. ಕನ್ನಡದ ವಾಕ್ಯರಚನೆಯ ಕುರಿತು ಮತ್ತು ಕರ್ಮಣಿ ಪ್ರಯೋಗದ ಬಗ್ಗೆ ಕ್ರಮಬದ್ಧವಾದ, ಸೂಕ್ಷ್ಮ ಒಳನೋಟಗಳಿರುವ ಭಾಷಾವೈಜ್ಞಾನಿಕ ಅಧ್ಯಯನ ಇವರ ಪಿ.ಹೆಚ್.ಡಿ ಪ್ರಬಂಧ ಆಗಿದೆ. ಕವನ, ಕಥಾ ಸಂಕಲನ, ಕಾದಂಬರಿ, ವಿಮರ್ಶಾ ಕೃತಿ, ನಾಟಕ, ಅಂಕಣಗಳು, ಅನುವಾದಿತ ಕೃತಿಗಳ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.

ಒಡನಾಟ ಹಂಚಿಕೊಂಡ ಪುರುಷೋತ್ತಮ ಬಿಳಿಮಲೆ:ತಿರಿಮಲೇಶ್ ಸಾಹಿತ್ಯ ಕುರಿತು ಮತ್ತು ಅವರ ಜೊತೆಗಿನ ಒಡನಾಟದದ ಬಗ್ಗೆ ಸಾಹಿತಿ, ಪ್ರೊ.ಪುರುಷೋತ್ತಮ ಬಿಳಿಮಳೆ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 'ಭಾಷೆಯ ಕುರಿತಾಗಿ ಅತ್ಯಂತ ಸೂಕ್ಷ್ಮವಾಗಿ ಮತ್ತು ನವಿರಾಗಿ ಯೋಚಿಸಿ ಬರೆಯುತ್ತಿದ್ದ ಕೆಲವೇ ಕೆಲವರಲ್ಲಿ ಕೆ.ವಿ.ತಿರುಮಲೇಶ್ ಕೂಡಾ ಒಬ್ಬರು. ಅವರು ಕವಿ, ಕತೆಗಾರ, ಅನುವಾದಕ, ಭಾಷಾ ವಿಜ್ಞಾನಿ ಮತ್ತು ವಿಮರ್ಶಕ. ಅವರು ಕಾಸರಗೋಡಿನಲ್ಲಿದ್ದಾಗ ನಮಗೆಲ್ಲ ಬಹಳ ಹತ್ತಿರದವರಾಗಿದ್ದರು.

ತಿರುಮಲೇಶ್‌ ಹುಟ್ಟಿದ ಸ್ಥಳ ಕಾರಡ್ಕ (ಸೆ12, 1940). ಇದೇ ಊರಿನಲ್ಲಿ ಹುಟ್ಟಿದ ಇನ್ನೊಬ್ಬ ಕವಿ ವೇಣುಗೋಪಾಲ ಕಾಸರಗೋಡು ಬಹಳ ಬೇಗ ತೀರಿಕೊಂಡರು. ಕಾರಡ್ಕದ ಕಾರಣಿಕ ಪುರುಷರು ಎಂದು ನಾನು ಅವರಿಗೆ ಹೇಳುತ್ತಿದ್ದೆ. ನವ್ಯಸಾಹಿತ್ಯ ಕಾಲದಲ್ಲಿ ಕಾಸರಗೋಡು ಬಹಳ ಕಾರಣಗಳಿಂದ ಸುದ್ದಿಯಲ್ಲಿತ್ತು. ತಿರುಮಲೇಶ್‌, ವೇಣುಗೋಪಾಲ ಕಾಸರಗೋಡು, ಎಂ. ಗಂಗಾಧರ ಭಟ್, ಯು ಮಹೇಶ್ವರಿ, ಲಲಿತಾ ಎಸ್‌ ಎನ್‌ ಭಟ್‌, ಮೊದಲಾದವರು ನವ್ಯ ಕಾಲಘಟ್ಟದ ದೊಡ್ಡ ಹೆಸರುಗಳು. ಇವರೆಲ್ಲ ಒಟ್ಟು ಸೇರಿ ಒಮ್ಮೆ ʼಕಯ್ಯಾರರು ಇನ್ನು ಬರೆಯಬೇಕಾಗಿಲ್ಲʼ ಎಂದು ಘೋಷಿಸಿ ದೊಡ್ಡ ಗುಲ್ಲೆಬ್ಬಿಸಿದ್ದರು.

ಮುಂದೆ ತಿರುಮಲೇಶ್‌ ಹೈದರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಅಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಸೇರಿ ಅಲ್ಲಿಯೇ ನಿವೃತ್ತರಾದರು. ಹೊರನಾಡ ಕನ್ನಡಿಗರಾದ ನಾವು ಆ ಕಾರಣಕ್ಕೇನೇ ಹಲವು ವಿಷಯಗಳ ಬಗ್ಗೆ ಹರಟುತ್ತಿದ್ದೆವು. ಕಳೆದ ಸುಮಾರು 50 ವರ್ಷಗಳಿಂದ ತಿರುಮಲೇಶ್‌ ಬರೆಯುತ್ತಲೇ ಇದ್ದರು. ಮುಖವಾಡಗಳು ಹಾಗೂ ವಠಾರ ಕವನ ಸಂಕಲನಗಳ ಮೂಲಕ ಅವರು ನವ್ಯ ಕಾಲಘಟ್ಟದಲ್ಲಿ ಜನಪ್ರಿಯರಾದರು.

ಅಕ್ಷಯ ಕಾವ್ಯ, ಮಹಾಪ್ರಸ್ಥಾನ, ಅವಧ, ಪಾಪಿಯೂ, ಆರೋಪ, ಮುಸುಗು, ಕಳ್ಳಿಗಿಡದ ಹೂವು, ಸಮ್ಮುಖ, ಕಾವ್ಯಕಾರಣ ಇವರ ಇತರ ಮುಖ್ಯ ಕೃತಿಗಳು. ಕಲಿಗುಲ ಮತ್ತು ಟೈಬೀರಿಯಸ್‌ ಅವರಿಗೆ ಹೆಸರು ತಂದುಕೊಟ್ಟ ನಾಟಕಗಳು. ಡಾನ್ ಕ್ವಿಕ್ಸಾಟನ ಸಾಹಸಗಳು ಮತ್ತು ಗಂಟೆ ಗೋಪುರ ಅವರ ಒಳ್ಳೆಯ ಅನುವಾದಗಳು. ಬೇಂದ್ರೆಯವರ ಕಾವ್ಯಶೈಲಿ, ನಮ್ಮ ಕನ್ನಡ, ಮತ್ತು ಅಸ್ತಿತ್ವವಾದ ಇವರ ಮುಖ್ಯ ವಿಮರ್ಶಾ ಕೃತಿಗಳು. ದೊಡ್ಡ ಲೇಖಕನೊಬ್ಬ ತೀರಿಕೊಂಡಾಗ ಸಹಜವಾಗಿ ಒಂದು ಬಗೆಯ ನಿರ್ವಾತ ಉಂಟಾಗುತ್ತದೆ. ಅದನ್ನು ಯಾರಾದರೂ ತುಂಬಿಸುವವರೆಗೆ ನಾವೆಲ್ಲ ಕಾಯಬೇಕಾಗುತ್ತದೆ' ಎಂದು ಪುರುಷೋತ್ತಮ ಬಿಳಿಮಲೆ ಬರೆದು ಕೊಂಡಿದ್ದಾರೆ.

ಇದನ್ನೂ ಓದಿ: ಕನ್ನಡದ ಖ್ಯಾತ ಹಾಸ್ಯನಟ ಮನದೀಪ್ ರಾಯ್ ಇನ್ನಿಲ್ಲ

Last Updated : Jan 30, 2023, 12:08 PM IST

ABOUT THE AUTHOR

...view details