ಆನೇಕಲ್:ರಾಜಧಾನಿಯಲ್ಲಿ ಬಹುಪಾಲು ಆಂಗ್ಲ ಮಾಧ್ಯಮ ಶಾಲೆಗಳೇ ತುಂಬಿ ಹೋಗಿದ್ದು, ಸರ್ಕಾರಿ ಶಾಲೆಗಳಲ್ಲಿ ಮಾತ್ರ ಕನ್ನಡ ಉಳಿದಿದೆ. ಈಗಿನ ದಿನಗಳಲ್ಲಿ ಆಂಗ್ಲ ಶಾಲೆಗಳಲ್ಲಿ ಕನ್ನಡ ಕಡ್ಡಾಯಗೊಳಿಸಬೇಕಿರುವ ಅನಿವಾರ್ಯತೆಯಿದೆ ಎಂದು ಸಮ್ಮೇಳನಾಧ್ಯಕ್ಷೆ ನಟಿ, ರಾಧಾ ಅನುರಾಧ ಅಭಿಪ್ರಾಯಪಟ್ಟರು.
ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಕರ್ನಾಟಕ-ತಮಿಳುನಾಡಿನ ಗಡಿ ಅತ್ತಿಬೆಲೆಯಿಂದ ಕನ್ನಡ ಸಾಹಿತಿಗಳ ಭಾವಚಿತ್ರವಿದ್ದ ಮರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು ಭಾಗಿಯಾಗಿದ್ದವು.
ಬಳಿಕ ಮಾತನಾಡಿದ ತಾರಾ ಅನುರಾಧ, ತನ್ನ ತವರಲ್ಲಿ ನಡೆದ ಕಾರ್ಯಕ್ರಮದ ಸಮ್ಮೇಳನಾಧ್ಯಕ್ಷತೆ ಸ್ಥಾನ ವಹಿಸಿದ್ದಕ್ಕೆ ಸಂತಸವಿದೆ. ಕನ್ನಡದ ಸೊಗಡನ್ನು ಚಿತ್ರರಂಗದ ಮೂಲಕ ಜೀವಂತವಾಗಿಡುವ ಪ್ರಯತ್ನಗಳು ನಡೆಯುತ್ತಿವೆ. ಏಕೆಂದರೆ, ಸಿನಿಮಾ ಕತೆ, ಹಾಡು, ನೃತ್ಯ, ಹೀಗೆ ಹತ್ತು ಹಲವು ದೃಶ್ಯ ಕಾವ್ಯಗಳನ್ನು ಕಟ್ಟಿಕೊಡುವ ಮಾಧ್ಯಮವಾಗಿದೆ. ಇದೂ ಸಹ ಕನ್ನಡ ಕಟ್ಟುವ ಕಾಯಕವೇ ಎಂದರು.
ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು, ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.