ಬೆಂಗಳೂರು: ರಾಜ್ಯದಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಎಜುಕೇಷನ್ (ಸಿಬಿಎಸ್ಸಿ) ಮತ್ತು ಕೌನ್ಸಿಲ್ ಪಾರ್ ದಿ ಇಂಡಿಯನ್ ಸ್ಕೂಲ್ ಆಫ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ (ಸಿಐಎಸ್‌ಸಿಇ) ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸಿ ಕಾನೂನು ರೂಪಿಸಿರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಹಲವು ಮಕ್ಕಳ ಪೋಷಕರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಸಿ. ಸೋಮಸೇಖರ್ ಎಂಬುವರು ಸೇರಿದಂರೆ 19 ಮಂದಿ ಪೋಷಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ.ಜೆ.ಎಸ್.ಕಮಲ್ ಅವರಿದ್ದ ವಿಭಾಗೀಯ ನ್ಯಾಯಪೀಠ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿದೆ.
ಕನ್ನಡ ಭಾಷಾ ಕಲಿಕೆ (ಕೆಎಲ್‌ಎಲ್) ಕಾಯಿದೆ ಮತ್ತು ನಿಯಮಗಳು ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವೀತೀಯ ಭಾಷೆಯಾಗಿ ಕಡ್ಡಾಯಗೊಳಿಸುತ್ತವೆ. ಆದರೆ, ಕರ್ನಾಟಕ ಶಿಕ್ಷಣ ಸಂಸ್ಥೆಗಳು (ನಿರಾಕ್ಷೇಪಣಾ ಪ್ರಮಾಣ ಪತ್ರ ಮತ್ತು ನಿಯಂತ್ರಣ) ನಿಯಮ 2022ರ ಪ್ರಕಾರ ಎರಡನೇ ಅಥವಾ ಮೂರನೇ ಭಾಷೆಯಾಗಿ ಕಡ್ಡಾಯ ಎಂಬುದಾಗಿ ತಿಳಿಸುತ್ತವೆ. ಈ ಅಂಶಗಳು ಕರ್ನಾಟಕ ಶಿಕ್ಷಣ ಕಾಯಿದೆ 1983ಕ್ಕೆ ತದ್ವಿರುದ್ಧವಾಗಿವೆ. ಅಲ್ಲದೆ, ಈ ಕಾಯಿದೆಗಳು ಸಿಬಿಎಸ್ಸಿ ಮತ್ತು ಸಿಐಎಸ್‌ಸಿಇಯ ವ್ಯಾಪ್ತಿಯಿಂದ ಹೊರಗಡೆ ಇವೆ.
ಅಷ್ಟೇ ಅಲ್ಲದೆ, ಕರ್ನಾಟಕ ಶಿಕ್ಷಣ ಕಾಯಿದೆ 1998ರ ತಿದ್ದುಪಡಿ ಮಾಡುವ ಮೂಲಕ ಸಿಬಿಎಸ್‌ಇ ಮತ್ತು ಸಿಐಎಸ್‌ಸಿಇ ಶಾಲೆಗಳು ಮತ್ತು ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶುಲ್ಕ ನಿಗಧಿ ಮಾಡುವುದಕ್ಕೆ ಅವಕಾಶ ಕಲ್ಪಿಸಿದ್ದ ನಿಯಮಗಳನ್ನು ಅಸಾಂವಿಧಾನಿಕ ಎಂದು ಹೈಕೋರ್ಟ್‌ನ ದ್ವಿಸದಸ್ಯ ಪೀಠ ಇತ್ತೀಚೆಗೆ ಆದೇಶಿಸಿದೆ.