ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಪರೀಕ್ಷಾ ಪ್ರಾಧಿಕಾರದಿಂದ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳ ಕನ್ನಡ ಭಾಷಾ ಪ್ರಶ್ನೆಪತ್ರಿಕೆಗಳಲ್ಲಿ ವ್ಯಾಕರಣ ದೋಷ, ಅಕ್ಷರ ದೋಷ ಸೇರಿದಂತೆ ಹಲವಾರು ಲೋಪದೋಷಗಳಿದ್ದು, ಈ ಬಗ್ಗೆ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅಸಮಾಧಾನ ವ್ಯಕ್ತಪಡಿಸಿದರು.
ಪದವಿಪೂರ್ವ ಶಿಕ್ಷಣದ ವಿವಿಧ ಉಪನ್ಯಾಸಕರುಗಳ ನೇಮಕಾತಿಗೆ ಸಂಬಂಧಿಸಿದಂತೆ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಯನ್ನು ಕನ್ನಡ ಭಾಷೆಗೆ ಭಾಷಾಂತರಿಸುವಾಗ ಹಲವು ಲೋಪಗಳಾಗಿವೆ. ಇಂತಹ ದೋಷಗಳನ್ನು ತಡೆಯುವ ನಿಟ್ಟಿನಲ್ಲಿ ವಿಷಯ ತಜ್ಞರನ್ನು ಮುಂದಿನ ಪರೀಕ್ಷಾ ಕಾರ್ಯಗಳಿಗೆ ತೆಗೆದುಕೊಳ್ಳುವಂತೆ ಹಾಗೂ ತಪ್ಪು ಮಾಡಿದವರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಸೂಚಿಸಲಾಗಿತ್ತು. ಶೀಘ್ರವಾಗಿ ಈ ಬಗ್ಗೆ ಕ್ರಮವಹಿಸಿ ಪ್ರಾಧಿಕಾರಕ್ಕೆ ಮಾಹಿತಿ ಸಲ್ಲಿಸಬೇಕೆಂದು ನಾಗಾಭರಣ ಸೂಚಿಸಿದರು.
ಅಲ್ಲದೇ, ಇತ್ತೀಚಿಗೆ ನಡೆದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಯ ಕನ್ನಡ ಭಾಷಾ ಪತ್ರಿಕೆಯ ವಿಷಯದಲ್ಲಿ ಹಲವಾರು ಲೋಪ ದೋಷಗಳಿವೆ. ಈ ಪ್ರಶ್ನೆ ಪತ್ರಿಕೆಯನ್ನು ತಯಾರಿಸಿದ ತಂಡವನ್ನು ಕನ್ನಡ ಪ್ರಾಧಿಕಾರದ ಗಮನಕ್ಕೆ ತಂದು ವಿಷಯ ತಜ್ಞರನ್ನು ಮುಂದಿನ ಪರೀಕ್ಷಾ ಕಾರ್ಯಗಳಿಗೆ ತೆಗೆದುಕೊಳ್ಳದಂತೆ ಕಪ್ಪು ಪಟ್ಟಿಗೆ ಸೇರಿಸಬೇಕು. ಲೋಪ-ದೋಷಗಳ ಬಗ್ಗೆ ಕ್ರಮ ಕೈಗೊಳ್ಳದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಹಿಂದಿನ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ಜರುಗಿಸಬೇಕೆಂದು ತಾಕೀತು ಮಾಡಿದರು.
ಪ್ರಶ್ನೆ ಪತ್ರಿಕೆಯ ಮುಖಪುಟದಲ್ಲಿ ಕನ್ನಡದಲ್ಲಿ ಮುದ್ರಿತವಾಗಿರುವ ಪ್ರಶ್ನೆಗಳ ಬಗ್ಗೆ ಏನಾದರೂ ಸಂದೇಹವಿದ್ದಲ್ಲಿ ಇಂಗ್ಲಿಷ್ ಆವೃತ್ತಿಯ ಪ್ರಶ್ನೆ ಪತ್ರಿಕೆಯನ್ನು ನೋಡಬಹುದು. ಏನಾದರೂ ವ್ಯತ್ಯಾಸ ಕಂಡುಬಂದಲ್ಲಿ ಇಂಗ್ಲಿಷ್ ಆವೃತ್ತಿ ಅಂತಿಮ ಎಂದು ಪರಿಗಣಿಸಲಾಗುವುದು ಎಂದು ತಿಳಿಸಲಾಗಿತ್ತು. ಇದನ್ನು ಕನ್ನಡವೇ ಅಂತಿಮವೆಂದು ಮುದ್ರಿಸುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಗಡಿನಾಡು ಪ್ರದೇಶದ ವಿದ್ಯಾರ್ಥಿಗಳು ಹತ್ತು ವರ್ಷ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದರೆ ಅಂತಹ ಅಭ್ಯರ್ಥಿಗಳಿಗೆ ವಾಸಸ್ಥಳ ಪ್ರಮಾಣಪತ್ರ ಸಲ್ಲಿಸುವುದರಿಂದ ವಿನಾಯಿತಿ ನೀಡಬೇಕು. ಇದರ ಬಗ್ಗೆ ಒಂದು ವಾರದೊಳಗಾಗಿ ಮಾಹಿತಿ ಸಲ್ಲಿಸುವಂತೆ ನಾಗಾಭರಣ ಸೂಚಿಸಿದರು.
ಇದನ್ನೂ ಓದಿ:ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಇಂಗ್ಲಿಷ್-ಕನ್ನಡ ಬಳಸಿ ಪರೀಕ್ಷೆ ಬರೆಯುವ ಅವಕಾಶ