ಬೆಂಗಳೂರು: ಕೇಂದ್ರ ಸರ್ಕಾರದ ಹಿಂದಿ ಹೇರಿಕೆಗೆ ಕನ್ನಡಿಗರು ಮಣಿಯಬಾರದು. ಇದು ಮುಂದೆ ನಮ್ಮ ನೆಲ, ಜಲದ ಮೇಲೆ ಪರಿಣಾಮ ಬೀರುತ್ತದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಹಮ್ಮಿಕೊಂಡಿದ್ದ ಸಾಮಾಜಿಕ ಜಾಲತಾಣ ಕಾರ್ಯಕರ್ತರ ಸಂಘಟನಾ ಸಭೆಗೂ ಮುನ್ನ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುವ ಬಿಜೆಪಿ ಕಾರ್ಯಕ್ರಮಗಳಲ್ಲಿ ಹಿಂದಿ ಭಾಷೆಯನ್ನೇ ಹೆಚ್ಚಾಗಿ ಬಳಸಲಾಗುತ್ತಿದೆ. ಪ್ರಾದೇಶಿಕ ಭಾಷೆಯಾದ ಕನ್ನಡವನ್ನು ಬಳಸುತ್ತಿಲ್ಲ, ಇದು ದೊಡ್ಡ ದುರಂತ ಎಂದರು.
ಮೈಸೂರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ನೀಡುತ್ತಿದ್ದಾರೆ. ಅಲ್ಲೂ ಕೂಡಾ ಹಿಂದಿಯ ಫ್ಲೆಕ್ಸ್, ಬ್ಯಾನರ್ಸ್ ಬಳಸಿ ಕನ್ನಡ ಕಡೆಗಣಿಸಿದ್ದಾರೆ. ಈಗಲಾದರೂ ಕನ್ನಡಿಗರು ಎಚ್ಚೆತ್ತುಕೊಳ್ಳಬೇಕು ಎಂದು ತಿಳಿಸಿದರು.
ನೆಗೆಟಿವಿಟಿಗೆ ಆಸ್ಪದ ಬೇಡ:ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಅನ್ನು ಬಹಳ ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಬಹುದು. ಪಾಸಿಟಿವ್ ಆಗಿಯೂ ಬಳಕೆ ಮಾಡಿಕೊಳ್ಳಬಹುದು, ನೆಗೆಟಿವ್ ಆಗಿಯೂ ಬಳಸಿಕೊಳ್ಳಬಹುದು. ಆದರೆ, ಎಲ್ಲೂ ಕೂಡ ನೆಗೆಟಿವಿಟಿಗೆ ಆಸ್ಪದ ಕೊಡದೆ ಪಾಸಿಟಿವ್ ಆಗಿ ಬಳಸಿಕೊಳ್ಳುವಂತೆ ನಮ್ಮ ಪಕ್ಷದ ಕಾರ್ಯಕರ್ತರಿಗೆ ಸಂದೇಶ ನೀಡುತ್ತಿದ್ದೇವೆ ಎಂದು ನಿಖಿಲ್ ತಿಳಿಸಿದರು.
ಇದನ್ನೂ ಓದಿ:ರಾಷ್ಟ್ರಪತಿ ಚುನಾವಣೆ: ಪ್ರತಿಪಕ್ಷಗಳಿಂದ ಸರ್ವ ಸಮ್ಮತದ ಅಭ್ಯರ್ಥಿ ಕಣಕ್ಕಿಳಿಸುವ ನಿರ್ಣಯ