ಬೆಂಗಳೂರು :ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಇಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಟಿ ಎಸ್ ನಾಗಾಭರಣ ಮಾತನಾಡಿ, ಸಾರಿಗೆ ಸಂಸ್ಥೆಗಳ ಪೈಕಿ ದೇಶದಲ್ಲಿಯೇ ಮುಂಚೂಣಿಯಲ್ಲಿರುವ ಸಂಸ್ಥೆಗಳಲ್ಲಿ ಬಿಎಂಟಿಸಿ ಒಂದು.
ಅಲ್ಲದೇ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಗ್ರಗಣ್ಯ ಸೇವೆ ಸಲ್ಲಿಸಿದವರನ್ನು ಗುರುತಿಸಿ ಬೆಂಮಸಾಸಂನೀಡುವ ನೃಪತುಂಗ ಪ್ರಶಸ್ತಿಯೂ ಪ್ರಾಧಿಕಾರದ ಗಮನಕ್ಕೆ ಬಂದಿದೆ. ಇದಕ್ಕಾಗಿ ಅಖಂಡ ಕನ್ನಡಿಗರ ಪರವಾಗಿ ಪ್ರಾಧಿಕಾರ ಅಧಿನಂದನೆಗಳನ್ನು ಸಲ್ಲಿಸುತ್ತದೆ ಎಂದು ಹೇಳಿದರು. ಬೆಂಗಳೂರಿನಂತಹ ಮೆಟ್ರೋಪಾಲಿಟನ್ ನಗರಗಳಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವುದಕ್ಕೆ ಸಾರಿಗೆ ಸಂಸ್ಥೆಗಳ ಕೊಡುಗೆ ಪ್ರಮುಖವಾಗಿದೆ.
ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಪ್ರಯಾಣಿಸುವ ಕನ್ನಡೇತರರೊಂದಿಗೆ ಕನ್ನಡದಲ್ಲಿಯೇ ವ್ಯವಹರಿಸಿ, ಅವರುಗಳಿಗೆ ಕನ್ನಡವನ್ನು ಕಲಿಯುವ ಅನಿವಾರ್ಯವನ್ನು, ಕನ್ನಡದ ಮೇಲಿನ ಪ್ರೀತಿಯನ್ನುಂಟು ಮಾಡುವಲ್ಲಿ ಸಾರಿಗೆ ಇಲಾಖೆಯ ಸಿಬ್ಬಂದಿಯಿರುವುದು ಶ್ಲಾಘನೀಯ ಎಂದು ತಿಳಿಸಿದರು. ಚಾಲಕರು ಮತ್ತು ನಿರ್ವಾಹಕರ ಎದೆಬಿಲ್ಲೆ ಮತ್ತು ಭುಜಬಿಲ್ಲೆ ಕನ್ನಡದಲ್ಲಿರಬೇಕು.
ಸೇವಾ ಸಿಂಧು ಕೇಂದ್ರಗಳಲ್ಲಿ ದೊರೆಯುವ ಅಂಧರು ಮತ್ತು ಅಂಗವಿಕಲರ ಪಾಸ್‌ಗೆ ಸಂಬಂಧಿಸಿದಂತೆ ನೀಡುವ ಅರ್ಜಿ ನಮೂನೆಗಳು ಕನ್ನಡದಲ್ಲಿರಬೇಕು. ಬಸ್‌ಗಳು ನಿಲ್ದಾಣದಿಂದ ನಿಲ್ದಾಣಕ್ಕೆ ಸಂಚರಿಸುವಾಗ ಖಾಲಿ ಇರುವ ಕಡೆಗಳಲ್ಲಿ ಕನ್ನಡಪರ ಘೋಷಣೆಗಳನ್ನು ಹಾಕಿಸಬೇಕು. ಬಸ್ ನಿಲ್ದಾಣಗಳಲ್ಲಿ ಕನ್ನಡದ ಕವಿ-ಕಾವ್ಯಗಳನ್ನು ಪರಿಚಯಿಸಬೇಕು.