ಬೆಂಗಳೂರು:ವಿ.ಡಿ ಸಾವರ್ಕರ್ ವಿಚಾರವಾಗಿ ವಿವಾದಗಳು ಮುಂದುವರಿದಿರುವ ಸಂದರ್ಭದಲ್ಲಿಯೇ ರಾಜ್ಯ ಸರ್ಕಾರ 8ನೇ ತರಗತಿಯ ಪಠ್ಯದಲ್ಲಿ ಇವರ ವಿಚಾರವನ್ನು ಸೇರ್ಪಡೆ ಮಾಡಿದೆ. ಪಠ್ಯದಲ್ಲಿ ಅವರ ಬದುಕು ಹಾಗೂ ಜೈಲುವಾಸ ಮತ್ತು ಅಲ್ಲಿ ಅನುಭವಿಸಿದ ಕಷ್ಟಗಳ ಸಚಿತ್ರ ವಿವರಣೆ ನೀಡಲಾಗಿದೆ.
2022ರಲ್ಲಿ ರೋಹಿತ್ ಚಕ್ರತೀರ್ಥ ಸಮಿತಿ ಮಾಡಿರುವ ಪರಿಷ್ಕರಣೆ ಪಠ್ಯದಲ್ಲಿ ಸಾವರ್ಕರ್ ಕುರಿತಾದ ಪಠ್ಯ ಸೇರ್ಪಡೆ ಮಾಡಲಾಗಿದೆ. ಕೆ.ಟಿ ಗಟ್ಟಿ ರಚನೆಯ ಕಾಲವನ್ನು ಗೆದ್ದವರು ಎಂಬ ಪಠ್ಯದಲ್ಲಿ ಈ ವಿವರ ಲಭ್ಯವಿದ್ದು, ಸಾವರ್ಕರ್ ಅಂಡಮಾನ್ ಜೈಲಿನಲ್ಲಿ ಇದ್ದ ವಿವರ, ಅವರಿಗೆ ನೀಡಿದ ಶಿಕ್ಷೆ, ಅವರ ಹೋರಾಟಗಳ ಬಗ್ಗೆ ಉಲ್ಲೇಖ ಮಾಡಲಾಗಿದೆ.
8ನೇ ತರಗತಿ ಪಠ್ಯದಲ್ಲಿ ಸಾವರ್ಕರ್ ಪಾಠ 2017-18 ರಲ್ಲಿ ಬರಗೂರು ರಾಮಚಂದ್ರಪ್ಪ ಸಮಿತಿ ಪಠ್ಯದಲ್ಲಿದ್ದ ವಿಜಯಮಾಲಾ ರಂಗನಾಥ್ ರಚಿತ ಬ್ಲಡ್ ಗ್ರೂಪ್ ಪಠ್ಯವನ್ನು ಕೈ ಬಿಟ್ಟು ಹೊಸದಾಗಿ ಕಾಲವನ್ನು ಗೆದ್ದವರು ಎಂಬ ಸಾವರ್ಕರ್ ಪಠ್ಯ ಸೇರ್ಪಡೆ ಮಾಡಲಾಗಿದೆ.
"ಕೋಣೆಯೊಳಗಿನ ಹಿಂಬದಿ ಗೋಡೆಯಲ್ಲಿ ಎತ್ತರದಲ್ಲಿ ಆಕಾಶ ಕೂಡ ಕಾಣಿಸದ ಕಿಂಡಿ. ಸಾವರ್ಕರ್ ಕೋಣೆಯಲ್ಲಿ ಆ ಕಿಂಡಿ ಕೂಡ ಇಲ್ಲ. ಆದರೂ ಎಲ್ಲಿಂದಲೋ ಬುಲ್‌ಬುಲ್ ಹಕ್ಕಿಗಳು ಹಾರಿ ಸೆಲ್‌ನೊಳಗೆ ಬರುತ್ತಿದ್ದವು. ಅವುಗಳ ರೆಕ್ಕೆಯ ಮೇಲೆ ಕುಳಿತು ಸಾವರ್ಕರ್ ಪ್ರತಿದಿನ ತಾಯ್ನಾಡಿನ ನೆಲವನ್ನು ಸಂದರ್ಶಿಸಿ ಬರುತ್ತಿದ್ದರು ಎಂಬ ವಿಚಾರವನ್ನು ಪುಸ್ತಕದಲ್ಲಿ ಪ್ರಕಟಿಸಲಾಗಿದೆ". ಈ ವಿಚಾರದ ಮೇಲೆ ದೊಡ್ಡ ಮಟ್ಟದ ಚರ್ಚೆ ಆರಂಭವಾಗಿದೆ.
ಸಾವರ್ಕರ್ ಸ್ವತಂತ್ರ ಹೋರಾಟಗಾರರೇ ಅಲ್ಲ ಎಂದು ಪ್ರತಿಪಾದಿಸುತ್ತಾ ಬಂದಿರುವ ಕಾಂಗ್ರೆಸ್ ಹಾಗೂ ಪ್ರಗತಿಪರ ಹೋರಾಟಗಾರರು ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ತೀವ್ರವಾಗಿ ಖಂಡಿಸುತ್ತಿದ್ದಾರೆ. ಬಿಜೆಪಿ ಪಕ್ಷದ ನಾಯಕರು ಹಾಗೂ ಬೆಂಬಲಿಗರು ಪಠ್ಯದ ಪರವಾಗಿ ಮಾತನಾಡುತ್ತಿದ್ದಾರೆ.
ಇದನ್ನೂ ಓದಿ:ತುಮಕೂರು ವಿವಿ ವೀರ ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆಗೆ ಸರ್ಕಾರದ ಸಹಾಯ.. ಸಿಎಂ ಬೊಮ್ಮಾಯಿ