ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ 2023 ಹಿನ್ನೆಲೆ ರಾಜ್ಯಾದ್ಯಂತ ಬಿರುಸಿನ ಮತದಾನ ನಡೆಯುತ್ತಿದೆ. ಹೆಚ್ಚಿನ ಸಂಖ್ಯೆಯ ಕನ್ನಡ ತಾರೆಯರು ಕೂಡ ಮತದಾನ ಮಾಡಿ, ತಮ್ಮ ಹಕ್ಕು ಚಲಾಯಿಸುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಶಿವಣ್ಣ ಮತದಾನ: ಬ್ಯಾಟರಾಯನಪುರ ಕ್ಷೇತ್ರದ ರಾಜೇನಹಳ್ಳಿಯ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಗೆ ಆಗಮಿಸಿದ ಹ್ಯಾಟ್ರಿಕ್ ಹಿರೋ ಶಿವ ರಾಜ್ಕುಮಾರ್ ದಂಪತಿ ತಮ್ಮ ಮತ ಚಲಾಯಿಸಿದ್ದಾರೆ. ಬಳಿಕ ಮಾತನಾಡಿದ ನಟ ಶಿವರಾಜ್ಕುಮಾರ್, ನಾನು ಮತ ಚಲಾವಣೆ ಮಾಡಿದ್ದೇನೆ. ಸಂಜೆಯವರೆಗೆ ಮತದಾನಕ್ಕೆ ಅವಕಾಶವಿದೆ. ಎಲ್ಲರೂ ಬಂದು ಮತ ಹಾಕಬೇಕು. ಈವರೆಗೂ ಮತ ಹಾಕದವರು ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾವಣೆ ಮಾಡಿ ಬಲಿಷ್ಠ ಪ್ರಜಾಪ್ರಭುತ್ವ ನಿರ್ಮಾಣ ಮಾಡಬೇಕು ಎಂದು ಕರೆ ನೀಡಿದರು. ಹೆಚ್ಚಿನ ಮತದಾನವಾದ್ರೆ ಉತ್ತಮ ಅಭ್ಯರ್ಥಿ ಆಯ್ಕೆ ಆಗ್ತಾರೆ. ಯುವಕರು ಹೆಚ್ಚಿನ ಪ್ರಮಾಣದಲ್ಲಿ ಬಂದು ಮತದಾನ ಮಾಡಿ. ನಿಮ್ಮ ಮತ ವ್ಯರ್ಥವಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಪ್ರೇಮ್, ರಕ್ಷಿತಾ ಮತದಾನ:ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ನಿರ್ದೇಶಕ ಜೋಗಿ ಪ್ರೇಮ್ ಹಾಗೂ ನಟಿ ರಕ್ಷಿತಾ ದಂಪತಿ ಮತದಾನ ಮಾಡಿದ್ದಾರೆ. ಸುಬ್ಬಣ್ಣ ಗಾರ್ಡನ್ ಬಳಿಯ ಕೆವಿವಿ ಶಾಲೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಬಳಿಕ ಮಾತನಾಡಿದ ನಟಿ ರಕ್ಷಿತಾ, ಮತದಾನ ಎಲ್ಲರ ಹಕ್ಕು, ಅಧಿಕಾರ ಇದು. ಪ್ರತೀ ನಾಗರಿಕನಿಗೆ ಒಂದು ಅವಕಾಶ. ಯಾರು ಕೆಲಸ ಮಾಡ್ತಾರೆ ಅವರಿಗೆ ಮತ ಹಾಕಿ. ಅಭಿವೃದ್ಧಿಗೆ ಗಮನ ಕೊಡುವವರಿಗೆ ಮತ ನೀಡಿ ಎಂದು ತಿಳಿಸಿದರು. ಪ್ರೇಮ್ ಮಾತನಾಡಿ, ಹಣ ಪಡೆದು ಮತ ಚಲಾಯಿಸಬೇಡಿ. ನಿಮ್ಮನ್ನು ನೀವು ಮಾರಿಕೊಳ್ಳಬೇಡಿ. ಹಲವು ಕಾರಣಗಳನ್ನು ನೀಡಿ ಮತ ಹಾಕಿ ಅಂತಾರೆ. ಆದ್ರೆ ಒಳ್ಳೆಯ ವ್ಯಕ್ತಿ, ಕೆಲಸ ಮಾಡೋ ವ್ಯಕ್ತಿಗೆ ಮತ ನೀಡಿ. ಮತ ಮಾರಿಕೊಳ್ಳಬೇಡಿ ಅಂತ ಕರೆ ನೀಡಿದರು.
ದುನಿಯಾ ವಿಜಯ್ ಮತದಾನ: ಮತ ಚಲಾಯಿಸಿ ಮಾತನಾಡಿದ ನಟ ದುನಿಯಾ ವಿಜಯ್, ಮತದಾನ ಮಾಡೋದು ನಮ್ಮ ಹಕ್ಕು. ಮನೆಯಲ್ಲಿ ಸುಮ್ನನೆ ಕೂರಬೇಡಿ. ಎಲ್ಲರೂ ಬಂದು ವೋಟ್ ಮಾಡಿ. ಎಲೆಕ್ಷನ್ 5 ವರ್ಷಕ್ಕೊಮ್ಮೆ ಬರೋದು. ಅದರ ಪ್ರಯೋಜನ ನಮಗೆ ಸಿಗೋದು ಹೊರತು ಬೇರೆಯವರಿಗೆ ಅಲ್ಲ. ಹಾಗಾಗಿ ಮಸ್ಟ್ ವೋಟ್ ಅಂತೀನಿ ಅಷ್ಟೇ ಎಂದರು.
ಸಾಧುಕೋಕಿಲ ಮತದಾನ:ಹಾಸ್ಯ ನಟ, ನಿರೂಪಕ ಸಾಧುಕೋಕಿಲ ತಮ್ಮ ಮತ ಚಲಾಯಿಸಿದ್ದಾರೆ. ಪ್ರತಿಯೊಬ್ಬರಲ್ಲಿಯೂ ಮತದಾನ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಮತ ಚಲಾಯಿಸಿದ ಕ್ರೇಜಿ ಸ್ಟಾರ್ ಪುತ್ರರು: ರಾಜಾಜಿನಗರದ ಮತಗಟ್ಟೆ 154ರಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರರು ಮತ ಚಲಾಯಿಸಿದ್ದಾರೆ. ಠಾಗೋರ್ ಮೆಮೋರಿಯಲ್ ಸ್ಕೂಲ್ನಲ್ಲಿ ಮನೋರಂಜನ್ ಹಾಗೂ ವಿಕ್ರಮ್ ಸಹೋದರಿಯೊಂದಿಗೆ ಬಂದು ಮತ ಚಲಾಯಿಸಿದರು.
ಕಾಂತಾರ ನಾಯಕಿ ಮತದಾನ: ಜೆಪಿ ನಗರದ ಸೆಂಟ್ ಪಾಲ್ಸ್ ಶಾಲೆಯಲ್ಲಿ ಕಾಂತಾರ ನಾಯಕಿ ಸಪ್ತಮಿ ಗೌಡ ಮತದಾನ ಮಾಡಿದ್ದಾರೆ. ಬೂತ್ ನಂಬರ್ 160ರಲ್ಲಿ ತಂದೆ, ನಿವೃತ್ತ ಐಪಿಎಸ್ ಉಮೇಶ್ ಜೊತೆಗೆ ಬಂದು ಮತ ಚಲಾಯಿಸಿದ್ದಾರೆ.