ಬೆಂಗಳೂರು :ನಗರದ ರವೀಂದ್ರ ಕಲಾಕ್ಷೇತ್ರದ ಮೆಟ್ಟಿಲಲ್ಲಿ ಕುಳಿತು ಕಡತಗಳಿಗೆ ಸಹಿ ಹಾಕುವ ಮೂಲಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿ ಸುನಿಲ್ ಕುಮಾರ್ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಬಳಿಕ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಪ್ರತಿದಿನ ಕನ್ನಡ ಪತ್ರಿಕೆಯೊಂದನ್ನು ಓದಬೇಕು. ತಿಂಗಳಿಗೊಂದು ಕನ್ನಡ ಪುಸ್ತಕ ಓದಬೇಕು. ಹಾಗೆಯೇ ಎರಡು ತಿಂಗಳಿಗೊಂದು ಕನ್ನಡ ಚಲನಚಿತ್ರ ನೋಡುವ ಅಭ್ಯಾಸ, ಮನೆಯಲ್ಲಿ ಕನ್ನಡವನ್ನು ಮಾತಾಡಬೇಕು. ಈ ಪರಿಪಾಠದ ಮೂಲಕ ಕನ್ನಡ ಸಂಸ್ಕೃತಿ ಉಳಿಸಲು ಸಾಧ್ಯವಾಗುತ್ತದೆ ಎಂದರು.
ಕನ್ನಡಾಂಬೆ ಫೋಟೋಗೆ ಪುಷ್ಪನಮನ ಸಲ್ಲಿಸಿದ ಸಚಿವರು ಇಂಧನ ಇಲಾಖೆಯಲ್ಲಿ ಸಂಸ್ಕೃತಿ ತರುವ, ಸಂಸ್ಕೃತಿ ಇಲಾಖೆಗೆ ಪವರ್ ತುಂಬುವ ಕೆಲಸ ಮಾಡಬೇಕಿದೆ. ಅದನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡುತ್ತೇನೆ. ಎರಡು ಇಲಾಖೆಗಳ ಆಡಳಿತ ಸುಧಾರಣೆಗೆ ಮತ್ತು ಕಾರ್ಯಕ್ರಮಗಳ ಸಮರ್ಥ ಅನುಷ್ಠಾನಕ್ಕೆ ಬೇಕಾಗುವ ಎಲ್ಲಾ ಕ್ರಮಗಳನ್ನು ನಿರ್ದಾಕ್ಷಿಣ್ಯವಾಗಿ ಕೈಗೊಳ್ಳುತ್ತೇನೆ ಎಂದರು.
ಪ್ರಶಸ್ತಿ ಪ್ರದಾನ :ಇದೇ ವೇಳೆ 2019 ಮತ್ತು 20ನೇ ಸಾಲಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಾನಪದ ಶ್ರೀ ಪ್ರಶಸ್ತಿಗೆ ಆಯ್ಕೆಯಾದ ಶ್ರೀಮತಿ ಭೀಮವ್ವ ದೊಡ್ಡ ಬಾಳವ್ವ ಶಿಳ್ಳೆಕ್ಯಾತರ ಹಾಗೂ ಬಿವಿ ಕಾರಂತ ಪ್ರಶಸ್ತಿಗೆ ಆಯ್ಕೆಯಾದ ಹೆಚ್ ವಿ ವೆಂಕಟಸುಬ್ಬಯ್ಯ ಅವರಿಗೆ ಕಲಾಕ್ಷೇತ್ರದ ಮುಂಭಾಗದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.
ನಂತರ ಕಲಾಕ್ಷೇತ್ರದ ಆವರಣದಲ್ಲಿರುವ ಕನ್ನಡ ಪುಸ್ತಕ ಪ್ರಾಧಿಕಾರದ ಸಿರಿಗನ್ನಡ ಮಾರಾಟ ಮಳಿಗೆಗೆ ಭೇಟಿ ನೀಡಿ ಕನಕಾವಲೋಕನ, ಪುಸ್ತಕ ಹಾಗೂ ಡಿವಿಜಿ ಅವರ ನೆನಪಿನ ಚಿತ್ರಗಳು ಮತ್ತು ಶಿವರಾಮ ಕಾರಂತರ ನಾಟಕಗಳು ಎಂಬ ಮೂರು ಪುಸ್ತಕಗಳನ್ನು ಖರೀದಿಸಿದರು.
ಪುಸ್ತಕಗಳ ಖರೀದಿಯಲ್ಲಿ ಸಚಿವ ಸುನಿಲ್‌ಕುಮಾರ್ ಓದಿ: ಆನಂದ್ ಸಿಂಗ್ಗೆ ಸಿಎಂ ಬುಲಾವ್: ಚರ್ಚೆ ಬಳಿಕ ಹೈಕಮಾಂಡ್ ಜೊತೆ ಮಾತುಕತೆ ಎಂದ ಬೊಮ್ಮಾಯಿ
ಬಳಿಕ ನಟಿ ತಾರಾ ಮಾತನಾಡಿ, ನೂತನ ಸಚಿವರಿಗೆ ಭಾಷೆ, ಸಂಸ್ಕೃತಿ ಬಗ್ಗೆ ಅರಿವು ಮತ್ತು ಪ್ರೀತಿ ಇದೆ. ಕನ್ನಡ ಪುಸ್ತಕ ಓದುವ ಮೂಲಕ ಕನ್ನಡ ಚಿತ್ರಗಳನ್ನು ನೋಡುವ ಮೂಲಕ ಆಡಳಿತದಲ್ಲಿಯೂ ಕನ್ನಡಮಯವೆ ಆಗಿರಬೇಕೆಂದು ಚೆನ್ನಾಗಿ ಹೇಳಿದ್ದಾರೆ.
ರಂಗಭೂಮಿ ಕಲಾವಿದರಾದ ಬಿವಿ ರಾಜಾರಾಂ, ಸಚಿವರು ಕಲಾಕ್ಷೇತ್ರದಲ್ಲಿ ಪದಗ್ರಹಣ ಮಾಡಿದ್ದು ಬಹಳ ವಿಶೇಷ. ನೆನಗುದಿಗೆ ಬಿದ್ದಿದ್ದ ಪುರಸ್ಕಾರ, ಪ್ರಶಸ್ತಿಯನ್ನು ಮತ್ತೆ ಕೊಟ್ಟಿದ್ದು ಉತ್ತಮ ವಿಚಾರವಾಗಿದೆ ಎಂದರು.
ಈ ವೇಳೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ ಎಸ್ ನಾಗಾಭರಣ, ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧ, ನಾಟಕಕಾರ ಬಿ ವಿ ರಾಜಾರಾಮ್, ಕಲಾ ನಿರ್ದೇಶಕ ಶಶಿಧರ್ ಅಡಪ, ನಟಿ ಮಾಳವಿಕಾ ಅವಿನಾಶ್ ಮತ್ತಿತರರು ಭಾಗಿಯಾಗಿದ್ದರು.