ಬೆಂಗಳೂರು: ʻಕನ್ನಡಕ್ಕಾಗಿ ನಾವುʼ ಎಂಬ ವಿಶೇಷ ಅಭಿಯಾನಕ್ಕಾಗಿ ರಚಿಸಲಾದ ʻಮಾತಾಡ್ ಮಾತಾಡ್ ಕನ್ನಡʼ ಎಂಬ ಕಿರು ನಾಟಕವನ್ನ ಇಂದು ನಗರದ ಲಾಲ್ ಬಾಗ್‌ನಲ್ಲಿ ಆಯೋಜಿಸಲಾಗಿತ್ತು. 66ನೇ ಕನ್ನಡ ರಾಜ್ಯೋತ್ಸವದ ಹಿನ್ನೆಲೆ ಆಯೋಜಿಸಲಾಗಿದ್ದ ಈ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನೀಲ್ ಕುಮಾರ್ ಚಾಲನೆ ನೀಡಿದರು.
ಈ ಕುರಿತು ಮಾತನಾಡಿದ ಸಚಿವ ಸುನೀಲ್ ಕುಮಾರ್, ಕನ್ನಡ ನಮ್ಮ ಸಂಸ್ಕೃತಿ. ಕನ್ನಡವನ್ನು ಉಳಿಸಿ ಬೆಳೆಸಲು ದೊಡ್ಡ ಪ್ರಮಾಣದ ಅಭಿಯಾನಕ್ಕೆ ಇಂದು ಚಾಲನೆ ನೀಡಲಾಗಿದೆ. ಮನೆ ಮನೆಗಳಲ್ಲಿ ಹಾಗೂ ಮನ ಮನಗಳಲ್ಲಿ ಕನ್ನಡ ಮಾತನಾಡುವ ಮೂಲಕ ಕನ್ನಡ ವಾತಾವರಣ ನಿರ್ಮಾಣ ಆಗಬೇಕಿದೆ ಎಂದರು.
ʻಮಾತಾಡ್ ಮಾತಾಡ್ ಕನ್ನಡʼ ಎನ್ನುವ ಘೋಷವಾಕ್ಯದೊಂದಿಗೆ ಆರಂಭವಾದ ಈ ಅಭಿಯಾನ ಅಕ್ಟೋಬರ್ 31 ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ನಾಡಿನಾದ್ಯಂತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮನೆಗಳಲ್ಲಿ ಕನ್ನಡ ಮಾತನಾಡುವ ಮೂಲಕ ಮಕ್ಕಳಲ್ಲಿ ಕನ್ನಡ ಭಾಷೆ ಕುರಿತ ಹೆಮ್ಮೆ ಮೂಡಿಸಬೇಕು. ಕನ್ನಡಲ್ಲಿ ಸಹಿ ಮಾಡುವ ರೂಢಿ ಹೆಚ್ಚಾಗಬೇಕು. ಚರವಾಣಿಗಳಲ್ಲಿ ಕನ್ನಡ ಸಂದೇಶಗಳನ್ನು ಕಳಿಸುವ ಪದ್ಧತಿ ಶುರು ಆಗಬೇಕು. ಈ ಮೂಲಕ ʻಕನ್ನಡಕ್ಕಾಗಿ ನಾವುʼ ಅಭಿಯಾನ ಯಶಸ್ವಿಯಾಗಿಸಬೇಕು ಎಂದು ಹೇಳಿದರು.