ಕರ್ನಾಟಕ

karnataka

ETV Bharat / state

ಬೆಂಗಳೂರಿಗೆ ಕನಕಪುರ ಸೇರ್ಪಡೆ ವಿವಾದ: ಜನರು ಮೌನ ವಹಿಸದಿರಿ, ಪ್ರತಿಕ್ರಿಯಿಸಿ ಎಂದ ಆರ್.ಅಶೋಕ್ - ಕಾಂಗ್ರೆಸ್​ ಸರ್ಕಾರದಿಂದ ತುಘಲಕ್‍ನ ದರ್ಬಾರ್

ಕನಕಪುರವನ್ನು ಬೆಂಗಳೂರಿನಲ್ಲಿ ಸೇರ್ಪಡೆಗೊಳಿಸುವ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಆರ್.ಅಶೋಕ್
ಆರ್.ಅಶೋಕ್

By ETV Bharat Karnataka Team

Published : Oct 25, 2023, 4:36 PM IST

Updated : Oct 25, 2023, 4:56 PM IST

ಬೆಂಗಳೂರು:ಕನಕಪುರವನ್ನು ಬೆಂಗಳೂರಿಗೆ ಸೇರಿಸುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯು ಡೆವಲಪರ್‌ಗಳಿಗೆ ರಿಯಲ್ ಎಸ್ಟೇಟ್ ದಂಧೆಗೆ ಅನುಕೂಲ ಕಲ್ಪಿಸುವ ಹುನ್ನಾರ ಹೊಂದಿದೆ ಎಂದು ಬಿಜೆಪಿ ನಾಯಕ, ಮಾಜಿ ಸಚಿವ ಆರ್.ಅಶೋಕ್ ದೂರಿದರು. ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಮೂಲಸೌಕರ್ಯ ಕೊರತೆ ಎದುರಿಸುತ್ತಿರುವ ಮಹಾನಗರ ಬೆಂಗಳೂರನ್ನು ಮತ್ತಷ್ಟು ಹಾಳು ಮಾಡಬೇಡಿ. ಈ ಹೇಳಿಕೆಯನ್ನು ಕೇಳಿಕೊಂಡು ರಾಜಧಾನಿಯ ಜನ ಸುಮ್ಮನಿರಬಾರದು. ಇಲ್ಲದೇ ಹೋದರೆ ಕಾಂಗ್ರೆಸ್‌ನವರು ಬೆಂಗಳೂರನ್ನು ಹಾಳು ಕೊಂಪೆ ಮಾಡುತ್ತಾರೆ. ದಯವಿಟ್ಟು ಇದಕ್ಕೆ ಪ್ರತಿಕ್ರಿಯೆ ನೀಡಬೇಕು ಎಂದು ಅವರು ಮನವಿ ಮಾಡಿದರು.

ಡಿಕೆಶಿ ಹೇಳಿಕೆ ಖಂಡನೀಯ: ಕನಕಪುರವನ್ನು ಬೆಂಗಳೂರಿಗೆ ಸೇರಿಸುವ ಕುರಿತ ಡಿ.ಕೆ.ಶಿವಕುಮಾರ್ ಹೇಳಿಕೆ ಖಂಡನೀಯ. ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಅವರು ಒಂದಲ್ಲ ನೂರಾರು ಬಾರಿ ಈ ಕುರಿತು ಮಾಧ್ಯಮ ಹೇಳಿಕೆ ಕೊಟ್ಟಿದ್ದಾರೆ. ನಾನು ಮೊದಲು ಬಿಸ್ನೆಸ್‍ಮ್ಯಾನ್. ರಾಜಕಾರಣ ನನ್ನ ಹವ್ಯಾಸ ಎಂದಿದ್ದಾರೆ. ಅವರು ಏನೇ ಮಾಡಿದರೂ ಬಿಸ್ನೆಸ್ ಮೊದಲ ಸ್ಥಾನ ಪಡೆಯುತ್ತದೆ. ಆಮೇಲಿನ ಸ್ಥಾನ ರಾಜಕೀಯಕ್ಕೆ. ಹೀಗಾಗಿ ಕನಕಪುರವನ್ನು ಬೆಂಗಳೂರಿಗೆ ಸೇರಿಸುವ ಪ್ರಯತ್ನದ ಹಿಂದೆ ಅವರ ಬಿಸ್ನೆಸ್ ಹಿತಾಸಕ್ತಿಯೇ ಇದೆ ಎಂದರು.

ಬೆಂಗಳೂರಿನಿಂದ ಕಾಂಗ್ರೆಸ್ ಟಿಕೆಟ್ ಪಡೆದು ಗೆದ್ದವರು ಈ ಕುರಿತು ಏನು ಹೇಳುತ್ತಾರೆ ಎಂದು ಪ್ರಶ್ನಿಸಿದ ಅವರು, 110 ಹಳ್ಳಿಗಳನ್ನು ಸುಮಾರು 15 ವರ್ಷಗಳ ಹಿಂದೆ ಬಿಬಿಎಂಪಿಗೆ ಸೇರಿಸಿದ್ದು, ಇನ್ನೂ ಶೇ 30ರಷ್ಟೂ ಅಭಿವೃದ್ಧಿ ಸಾಧಿಸಿಲ್ಲ. ಈ ಪ್ರದೇಶಗಳಿಗೆ ಕಾವೇರಿ ಕುಡಿಯುವ ನೀರು ಕೊಡಲು ಸಾಧ್ಯವಾಗಿಲ್ಲ. ರಸ್ತೆ, ಬೀದಿ ದೀಪ ಸೌಕರ್ಯ ಕೊಟ್ಟಿಲ್ಲ. ಅದನ್ನು ಬೆಂಗಳೂರಿನಂತೆ ಮಾಡಲು ಇನ್ನೂ 15 ವರ್ಷಗಳು ಬೇಕು. ಹೀಗಾಗಿ 110 ಹಳ್ಳಿಗಳ ಜನರು ಸಂಕಷ್ಟದಲ್ಲಿದ್ದು, ಹೋರಾಟ ಮಾಡುತ್ತಿದ್ದಾರೆ. ಪ್ರತಿಭಟನೆಗಳೂ ನಡೆಯುತ್ತಿವೆ. ಈಗ ಕನಕಪುರವನ್ನು ಸೇರಿಸುತ್ತೇನೆ ಎನ್ನುತ್ತಾರೆ ಡಿಕೆಶಿ. ಹಾರೋಹಳ್ಳಿ ದಾಟಿ 10 ಕಿಮೀ ಬಳಿಕ ಕನಕಪುರ ಸಿಗುತ್ತದೆ. ಹಾಗಿದ್ದರೆ ಹಾರೋಹಳ್ಳಿ, ರಾಮನಗರದ ಕಥೆ ಏನು ಎಂದು ಕೇಳಿದರು.

ಏರ್‍ಪೋರ್ಟ್ ಇರುವ ದೇವನಹಳ್ಳಿ ಕಥೆ ಏನು? ಅದು ಗಡಿಯಲ್ಲೇ ಇದೆ. ಹೊಸಕೋಟೆ ಏನಾಗಬಹುದು? ಮುಂದೆ ಸಿಡಿಪಿ ಬರಲಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಿಡಿಪಿ 10 ವರ್ಷದಿಂದ ಬಾಕಿ ಇದೆ. ಆ ಸಿಡಿಪಿಯಡಿ ಇದೆಲ್ಲವನ್ನೂ ಸೇರಿಸಿ ಯಾವ್ಯಾವುದು ಹೇಗೆ ಬೇಕೋ ಯೆಲ್ಲೊ, ಗ್ರೀನ್, ಕಮರ್ಷಿಯಲ್, ವಸತಿ ಪ್ರದೇಶ ಹೀಗೆ ಡೆವಲಪರ್‌ಗಳಿಗೆ ದಂಧೆ ಮಾಡುವ ಹುನ್ನಾರದಿಂದಲೇ ಡಿ.ಕೆ.ಶಿವಕುಮಾರ್ ಕನಕಪುರವನ್ನು ಬೆಂಗಳೂರಿಗೆ ಸೇರಿಸುವ ಹೇಳಿಕೆ ನೀಡಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್‍ನವರು ಟಿಪ್ಪು ಅಭಿಮಾನಿಗಳು ಮತ್ತು ಬೆಂಬಲಿಗರು. ಹೀಗಾಗಿ ಸರ್ಕಾರ ತುಘಲಕ್‍ ದರ್ಬಾರ್ ನಡೆಸುತ್ತಿದೆ ಎಂದು ವ್ಯಂಗ್ಯವಾಗಿ ಟೀಕಿಸಿದ ಅವರು, ನೀವು ಹೇಗಿದ್ದರೂ 5 ಟಿಎಂಸಿ ಕಾವೇರಿ ನೀರನ್ನು ಸ್ಟಾಲಿನ್‍ಗೆ ಕೊಟ್ಟಿದ್ದೀರಿ. ಕನಕಪುರದಿಂದ ಹತ್ತಿರ ಇರುವ ಆನೇಕಲ್ ಸಮೀಪದ ಹೊಸೂರನ್ನು ಬೆಂಗಳೂರಿಗೆ ಸೇರಿಸಿ, ಈ ಬಗ್ಗೆ ದೋಸ್ತ್ ಸ್ಟಾಲಿನ್ ಅವರೊಂದಿಗೆ ಮಾತನಾಡಿ, ಅದನ್ನೂ ಸೇರಿಸಿ, ಬೆಂಗಳೂರನ್ನು ಹಾಳುಗೆಡಹಲು ಏನೇನು ಹುನ್ನಾರ ಬೇಕೋ ಅದನ್ನು ಮಾಡಿಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಿಪಬ್ಲಿಕ್ ಆಫ್ ಕನಕಪುರ:ಹಿಂದೆ 50 ವರ್ಷ ಆಳ್ವಿಕೆ ಮಾಡಿದ ಕಾಂಗ್ರೆಸ್ಸಿಗರು ಯಾಕೆ ಅವಾಗ ಬೆಂಗಳೂರಿಗೆ ಏನೂ ಮಾಡಿಲ್ಲ? ಆಗ ಯೋಗ್ಯತೆ ಇರಲಿಲ್ಲ ಅಲ್ಲವೇ? ಆಗ ಏನೂ ಮಾಡಿಲ್ಲ ಅಲ್ಲವೇ? ಈಗ ಸೌಜನ್ಯಶೀಲ, ಶಾಂತಿಪ್ರಿಯ ಬೆಂಗಳೂರಿನ ಜನ ನೆಮ್ಮದಿಯಿಂದಿದ್ದಾರೆ. ನಿಮ್ಮ ರಿಪಬ್ಲಿಕ್ ಆಫ್ ಕನಕಪುರವನ್ನು ಸೇರಿಸಿದರೆ ಬೆಂಗಳೂರಿನ ಜನರ ಪಾಡೇನು ಎಂದು ಪ್ರಶ್ನಿಸಿದರು.

ಹೊಸೂರು, ಕನಕಪುರ, ರಾಮನಗರ, ಮಾಗಡಿ ಏನೇನಿದೆಯೋ ಎಲ್ಲ ಸೇರಿಸಿದರೆ ರಿಯಲ್ ಎಸ್ಟೇಟ್ ದಂಧೆ ಮಾಡಲು ಅವಕಾಶ ಆಗಲಿದೆ. ಬೆಂಗಳೂರಿನ ಜನರು ನರಕ ನೋಡಲು ಪ್ರಯತ್ನ ಕಾಂಗ್ರೆಸ್ಸಿನವರದು ಎಂದು ಆಕ್ಷೇಪಿಸಿದರು. ಬೆಂಗಳೂರಿನ ಜನರು ಎಲ್ಲದಕ್ಕೂ ಮೌನ ವಹಿಸದಿರಿ; ಸಾಮಾಜಿಕ ಜಾಲತಾಣ ಸೇರಿ ಎಲ್ಲ ಕಡೆ ಪ್ರತಿಕ್ರಿಯೆ ಕೊಡಿ ಎಂದು ಮನವಿ ಮಾಡಿದರು.

ಕನಕಪುರ ಪ್ರತ್ಯೇಕ ಜಿಲ್ಲೆ ಮಾಡಲಿ:ಕನಕಪುರ, ರಾಮನಗರ, ಹೊಸೂರು ಸೇರಿಸಲು ಡಿ.ಕೆ.ಶಿವಕುಮಾರ್ ಒಬ್ಬರದು ಹೋರಾಟ. ಜನರೇನೂ ಹೋರಾಟ ಮಾಡಿಲ್ಲ ಎಂದು ಈ ಹೇಳಿಕೆ ಸಂಪೂರ್ಣ ಡಿಕೆ ಶಿವಕುಮಾರ್ ಅವರ ವೈಯಕ್ತಿಕ ಹಿತಾಸಕ್ತಿಯಿಂದಲೇ ಕೂಡಿದೆ. ಬೆಂಗಳೂರಿಗೆ ಕನಕಪುರ ಸೇರಿಸಿ ಬೆಂಗಳೂರನ್ನು ಮತ್ತಷ್ಟು ಹಾಳು ಮಾಡುವ ಬದಲು ಕನಕಪುರವೊಂದನ್ನೇ ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಿ, ಅಭಿವೃದ್ಧಿ ಮಾಡಿ ಅದಕ್ಕೆ ನಮ್ಮದೇನು ತಕರಾರಿಲ್ಲ, ಆದರೆ ಬೆಂಗಳೂರಿಗೆ ಈಗಾಗಲೇ ಒತ್ತಡ ಹೆಚ್ಚಾಗಿದೆ. ಹೊಸ ಪ್ರದೇಶ ಮತ್ತೆ ಸೇರಿಸಲು ಕನಿಷ್ಠ 50 ವರ್ಷ ಬೇಕು, ಈಗಾಗಲೇ ಬಿಬಿಎಂಪಿ 20 ಸಾವಿರ ಕೋಟಿ ಸಾಲದಲ್ಲಿದೆ, ಆ ಸಾಲ ತೀರಿಸಲೇ 20 ವರ್ಷ ಬೇಕು. ಹೀಗಿರುವಾಗ ಕನಕಪುರವನ್ನು ಬೆಂಗಳೂರಿಗೆ ಸೇರಿಸಲು ಹೇಗೆ ಸಾಧ್ಯ? ಯಾವ ಕಾರಣಕ್ಕೂ ನಾವು ಇದಕ್ಕೆ ಅವಕಾಶ ನೀಡಲ್ಲ ಎಂದು ತಿಳಿಸಿದರು.

ಪಾಕಿಸ್ತಾನದ ಕ್ರಿಕೆಟ್ ಮ್ಯಾಚ್ ವೀಕ್ಷಣೆ ವಿಚಾರ​: ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರಿನಲ್ಲಿ ಪಾಕಿಸ್ತಾನದ ಕ್ರಿಕೆಟ್ ಮ್ಯಾಚಿಗೆ ಹೋಗಿ ಚಪ್ಪಾಳೆ ಹೊಡೆದುಕೊಂಡು ಕೂತಿದ್ದರು. ಕೇಳಿದ್ರೆ ಸ್ಪೋರ್ಟ್ಸ್ ಅಂತ ಹೇಳಿದ್ರು. ಆದರೆ ಇಂಡಿಯಾ ಮ್ಯಾಚಿಗೆ ಯಾಕೆ ಹೋಗಲಿಲ್ಲ.? ಇವರದ್ದು ಎಲ್ಲಾ ತುಘಲಕ್ ದರ್ಬಾರ್. ದಸರಾದಲ್ಲಿ ಟೋಪಿ ಹಾಕಲ್ಲ ಅಂದ್ರು. ಆದರೆ ಬೇರೆ ಕಡೆ ಕೇಳುವ ಮೊದಲೇ ಹುಡುಕಿಕೊಂಡು ಹೋಗಿ ಟೋಪಿ ಹಾಕಿಕೊಳ್ಳುತ್ತಾರೆ ಎಂದು ವಾಗ್ದಾಳಿ ಮಾಡಿದರು.

ಇದನ್ನೂಓದಿ:ರಾಮನಗರ ಬೆಂಗಳೂರಿಗೆ ಸೇರಿಸುವ ವಿಚಾರ ನನಗೆ ಗೊತ್ತಿಲ್ಲ : ಸಿಎಂ ಸಿದ್ದರಾಮಯ್ಯ

Last Updated : Oct 25, 2023, 4:56 PM IST

ABOUT THE AUTHOR

...view details