ಬೆಂಗಳೂರು : ಕಂಬಾರರ ನಾಟಕ ಸಾಹಿತ್ಯದ ಭಾಷೆಯೇ ಭಿನ್ನ. ಅದರದ್ದೇ ಆದ ಪದಗತಿಯಲ್ಲಿ ವಿಶೇಷವೆನ್ನಿಸುತ್ತದೆ. ಭಾಷೆಯ ಒಳಗಿರುವ ಕಸುವನ್ನು ಇನ್ನೊಂದು ಭಾಷೆಯ ಜೊತೆಗೆ ಸಮೀಕರಿಸುವ ಕೆಲಸ ಮಾಡಲಾಗಿದೆ. ಬದುಕಿನ ಬಗ್ಗೆ ಆಶಾ ಭಾವನೆ ಮೂಡಿಸುವ, ನಾಳೆಗಳಿವೆ ಎಂದು ತಿಳಿಸುವ ನಾಟಕ ಕೃತಿಗಳಿವು ಎಂದು ಚಲನಚಿತ್ರ ನಿರ್ದೇಶಕ, ನಟ ಟಿ ಎಸ್ ನಾಗಾಭರಣ ತಿಳಿಸಿದರು.
ಅಂಕಿತ ಪುಸ್ತಕದ ವತಿಯಿಂದ ಭಾನುವಾರದಂದು ಹಮ್ಮಿಕೊಂಡಿದ್ದ ಹಿರಿಯ ಸಾಹಿತಿ ಚಂದ್ರಶೇಖರ್ ಕಂಬಾರ ಅವರ ‘ಸಾವಿರದ ಶರಣವ್ವ ಕನ್ನಡದ ತಾಯೇ’ ಮಕ್ಕಳಿಗಾಗಿ ಹನ್ನೆರಡು ಏಕಾಂಕ ನಾಟಕಗಳು, ‘ಕಿತ್ತೂರು ಚೆನ್ನಮ್ಮ ಮತ್ತು ಇತರ ಮಕ್ಕಳ ನಾಟಕಗಳು’, ‘ಅಮೋಘವರ್ಷ ನೃಪತುಂಗ ಮತ್ತು ಇತರ ನಾಟಕಗಳು’ ಕೃತಿಗಳ ಲೋಕಾರ್ಪಣಾ ಕಾರ್ಯಕ್ರಮವು ನಗರದ ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ನಡೆಯಿತು.
ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಚಲನಚಿತ್ರ ನಿರ್ದೇಶಕ, ನಾಗಾಭರಣ, ದೃಶ್ಯದ ವೈಭವವನ್ನು, ನಾಟಕದ ಲವಲವಿಕೆಯನ್ನು ಮಕ್ಕಳ ಮನೋರಂಗದಲ್ಲಿ ಆಗುವಂತಹ ಬೇರೆ ಬೇರೆ ರೀತಿಯ ಸೂಕ್ಷ್ಮ ವಿಚಾರಗಳನ್ನು ನಾಟಕಗಳಲ್ಲಿ ಗಮನಿಸಿದ್ದೇನೆ. ಎಲ್ಲರಲ್ಲಿ ಒಂದಾಗಿಸುವ, ಎಲ್ಲರಲ್ಲೂ ಒಳಗೊಳ್ಳುವ, ಎಲ್ಲರ ಜೊತೆಯನ್ನ ಮತ್ತೆ ಮತ್ತೆ ಸಮೀಕರಿಸಿಕೊಳ್ಳುವಂತಹ ನಾಟಕಗಳಾಗಿವೆ ಎಂದು ಹೇಳಿದರು.
ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಲೇಖಕ, ಸಂಸ್ಕೃತಿ ಚಿಂತಕ ಬಸವರಾಜ ಕಲ್ಗುಡಿ, ಕಂಬಾರರ ಹಾಗೆ ಪ್ರಕಾರದ ಮಿತಿಯನ್ನು ದಾಟಿದಂತವರು ಮತ್ತು ಪ್ರಕಾರವನ್ನು ಒಂದು ಸಂಗೋಪನ ಮಾಡಿದವರು ಕಡಿಮೆಯೇ. ಕನ್ನಡ ಸಂಸ್ಕೃತಿ, ಕನ್ನಡ ಸೃಜನಶೀಲತೆಗೆ ಸೇರಿದಂತೆ ಕಂಬಾರರ ಹುಡುಕಾಟ ದೊಡ್ಡದು ಎಂದು ಹೇಳಿದರು.
ನಮ್ಮ ಸಾಹಿತ್ಯದ ಶೈಲಿಯನ್ನು ಬಳಸಿಕೊಂಡು, ಆಧುನಿಕತೆಯ ಸಂದಿಗ್ಧತೆಯೊಂದಿಗೆ ಮುಖಾಮುಖಿಯಾಗಿಸುವ ಪರಿ ದೊಡ್ದದು. ಕಂಬಾರರು ಇಡೀ ಭಾರತೀಯ ಪ್ರಪಂಚದಲ್ಲಿ, ಆಧುನಿಕ ಭಾರತದ ಬರಹ ಪ್ರಪಂಚದ ಪರಂಪರೆಯಲ್ಲಿ ಒಂದು ಭಿನ್ನವಾದ ಮಾರ್ಗವನ್ನು ತುಳಿದವರು ಎಂದು ಬಣ್ಣಿಸಿದರು.