ಬೆಂಗಳೂರು:ರಾಜಧಾನಿಯಲ್ಲಿಬೆಂಗಳೂರು ಕಂಬಳ - ನಮ್ಮ ಕಂಬಳ ಸ್ಪರ್ಧೆ ಎರಡನೇ ದಿನವೂ ಮುಂದುವರಿದಿದೆ. ಐತಿಹಾಸಿಕ ಹಿನ್ನೆಲೆಯುಳ್ಳ ಜಾನಪದ ಕ್ರೀಡೆಗೆ ರಾಜ್ಯ ರಾಜಧಾನಿ ಸಾಕ್ಷಿಯಾಗಿದ್ದು, ಅದರೊಂದಿಗೆ ಕರಾವಳಿ ಭಾಗದ ಸಾಂಸ್ಕೃತಿಕ ಚೆಲುವು ಅನಾವರಣಗೊಂಡಿದೆ. ಇನ್ನು ಕಂಬಳದಲ್ಲಿ ಪ್ರಮುಖ ಪಾತ್ರವಹಿಸುವ ಕೋಣಗಳು ಮತ್ತು ಅವುಗಳನ್ನು ಓಡಿಸುವ ಜಾಕಿಗಳ ತಯಾರಿ ವಿಭಿನ್ನವಾಗಿದೆ. ಯಾವ ಮಾಡರ್ನ್ ಕ್ರೀಡೆಗಳಿಗೂ ಕಮ್ಮಿಯಿಲ್ಲ ಎಂಬಂತೆ ಕಂಬಳಕ್ಕಾಗಿ ಯಾವಾಗ ಹೇಗೆ ಸಿದ್ಧತೆ ಇರುತ್ತದೆ ? ಎಂಬುದರ ಕುರಿತು ಒಂದು ಸಂಕ್ಷಿಪ್ತ ವರದಿ ಇಲ್ಲಿದೆ.
ಕಂಬಳ ಕರಾವಳಿ ಸಂಸ್ಕೃತಿ ಪ್ರತಿಬಿಂಬ:ಕಂಬಳ ಇಂದು ಕರಾವಳಿ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಿದೆ. ಪ್ರತಿಷ್ಠೆಯ ಸಂಕೇತದ ಕ್ರೀಡೆಯೂ ಆಗಿದೆ.ಇದರಲ್ಲಿ ಪಾಲ್ಗೊಳ್ಳುವ ಕೋಣಗಳಿಗಂತೂ ಭರ್ಜರಿ ಡಿಮ್ಯಾಂಡ್ ಇದೆ. ನವೆಂಬರ್ನಿಂದ ಮಾರ್ಚ್ ತಿಂಗಳ ವರೆಗಿನ ಕಾಲ ಕಂಬಳದ ಋತುವೆಂದೇ ಫೇಮಸ್ ಆಗಿದೆ. ಕೋಣಗಳ ತಯಾರಿ ಆರಂಭ ಆಗುವುದೇ ಈ ಅವಧಿಯ ಎರಡು ತಿಂಗಳ ಮುನ್ನ. ಕಂಬಳಕ್ಕೂ ಮುನ್ನ ಮರಿಕೋಣಗಳನ್ನು ತಂದು ಜೋಡಿಗಳನ್ನು ಮಾಡಿ, ಪೂರ್ವಭಾವಿಯಾಗಿ ಕುದಿಗಂಬಳ ಮಾಡುವ ಮೂಲಕ ಕೋಣಗಳನ್ನು ಅಣಿಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ.
ಕೋಣಗಳಿಗೆ ದಿನನಿತ್ಯ ಆಹಾರ: ನಂತರ ಕಂಬಳದಲ್ಲಿ ಪಾಲ್ಗೊಳ್ಳುವ ಕೋಣಗಳಿಗೆ ಎರಡು ತಿಂಗಳಿಗೆ ಮುನ್ನವೇ ಬೈಹುಲ್ಲು (ಒಣಹುಲ್ಲು) ಜೊತೆಗೆ ಹುರುಳಿ ಕಾಳು, ಕ್ಯಾರೆಟ್ ಸೇರಿದಂತೆ ವಿವಿಧ ತರಕಾರಿ, ಬಾದಾಮಿ ಸೇರಿ ಅದರ ಆಹಾರದೊಂದಿಗೆ ನೀಡಲಾಗುತ್ತದೆ. ಕುಂಬಳಕಾಯಿ ಮತ್ತಿತರ ಪದಾರ್ಥಗಳನ್ನು ನೀಡುವ ಮೂಲಕ ಕೋಣಗಳ ದೇಹ ತಂಪಾಗಿರುವಂತೆ ನೋಡಿಕೊಳ್ಳಲಾಗುತ್ತದೆ. ಇದಲ್ಲದೇ ವಾರಕ್ಕೆ ಎರಡರಿಂದ ಮೂರು ಬಾರಿ ವಾಕಿಂಗ್ ಮಾಡಿಸುವ ಜೊತೆಗೆ ಓಡುವ ತರಬೇತಿ ನೀಡಲಾಗುತ್ತದೆ. ಅಲ್ಲದೇ ಎಣ್ಣೆಯಲ್ಲಿ ಮಸಾಜ್ ಮಾಡುವುದು ನಿತ್ಯ ಕಡ್ಡಾಯ. ಕೋಣಗಳನ್ನು ಸಣ್ಣ ಸಣ್ಣ ನೀರಿರುವ ಪ್ರದೇಶ, ಕೆರೆಯಂತಹ ಜಾಗದಲ್ಲಿ ಈಜಲು ಬಿಡಲಾಗುತ್ತದೆ.
ಕೋಣಗಳ ಹಲ್ಲುಗಳ ಆಧಾರದ ಮೇಲೆ ಸ್ಪರ್ಧೆ: ಸ್ಪರ್ಧೆಯಲ್ಲಿ ಸಹ ಬೇರೆ ಬೇರೆ ವಿಭಾಗಗಳಿದ್ದು, ಕೋಣಗಳ ಹಲ್ಲುಗಳ ಆಧಾರದಲ್ಲಿ ಯಾವ ವಿಭಾಗದಲ್ಲಿ ಯಾವ ಕೋಣಗಳು ಸ್ಪರ್ಧಿಸಬೇಕು ಎಂಬುದನ್ನು ನಿರ್ಧಾರ ಮಾಡಲಾಗುತ್ತದೆ. ಎರಡರಿಂದ ಆರು ಹಲ್ಲುಗಳಿದ್ದರೆ ಕಿರಿಯ ವಿಭಾಗದಲ್ಲಿ, ಆರಕ್ಕಿಂತ ಹೆಚ್ಚು ಹಲ್ಲುಗಳಿದ್ದರೆ ಹಿರಿಯ ವಿಭಾಗದಲ್ಲಿ ಕೋಣಗಳಳನ್ನು ಸ್ಪರ್ಧೆಗಿಳಿಸಲಾಗುತ್ತದೆ.