ಬೆಂಗಳೂರು :ಕನ್ನಡಿಗರ ನೆಚ್ಚಿನ ಧಾರಾವಾಹಿ ಆಗಿರುವ 'ಕಮಲಿ' ನಿರ್ದೇಶಕ ಅರವಿಂದ್ ಕೌಶಿಕ್ ಅವರನ್ನು ವಂಚನೆ ಆರೋಪದಡಿ ಬೆಂಗಳೂರಿನ ವೈಯ್ಯಾಲಿಕಾವಲ್ ಪೊಲೀಸರು ಬಂಧಿಸಿದ್ದಾರೆ. ನಿರ್ಮಾಪಕ ರೋಹಿತ್ ನೀಡಿದ್ದ ದೂರಿನನ್ವಯ ನಿರ್ದೇಶಕನ ಬಂಧನವಾಗಿದೆ.
ಅರವಿಂದ್ ಕೌಶಿಕ್ ಕಮಲಿ ಧಾರವಾಹಿ ಮಾತ್ರವಲ್ಲದೆ ಹಲವು ಕನ್ನಡ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. 'ನಮ್ಮ ಏರಿಯಾದಲ್ಲಿ ಒಂದು ದಿನ', 'ಹುಲಿರಾಯ' ಹಾಗೂ 'ಶಾರ್ದುಲಾ' ಸೇರಿ ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ಆದರೆ, ಅರವಿಂದ್ ಕೌಶಿಕ್ ವಿರುದ್ಧ 'ಕಮಲಿ' ಧಾರವಾಹಿ ನಿರ್ಮಾಣಕ್ಕೆ ₹73 ಲಕ್ಷ ಹಣ ಹೂಡಿಕೆ ಮಾಡಿದ್ದ ರೋಹಿತ್ ಸತತ ಮೂರು ವರ್ಷಗಳಿಂದ ಕಾನೂನು ಹೋರಾಟ ಮಾಡಿದ್ದರು.
ಏನಿದು ಪ್ರಕರಣ? :2018ರಲ್ಲಿ 'ಕಮಲಿ' ಧಾರವಾಹಿ ನಿರ್ಮಾಣಕ್ಕೆ ರೋಹಿತ್ ಹಣ ಹೂಡಿಕೆ ಮಾಡಿದ್ದರು. ಧಾರವಾಹಿ ತೆರೆಕಂಡ ನಂತರ ಹಣ ಹಿಂತಿರುಗಿಸದೇ ಮತ್ತು ಲಾಭಾಂಶ ನೀಡದೇ ವಂಚಸಿರುವ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಕೌಶಿಕ್ ವಿರುದ್ಧ ನಿರ್ಮಾಪಕ ರೋಹಿತ್ ವೈಯ್ಯಾಲಿಕಾವಲ್ ಠಾಣೆಗೆ ದೂರು ನೀಡಿದ್ದರು. ಅಂತೆಯೇ ಅರವಿಂದ್ ಕೌಶಿಕ್ ವಿರುದ್ದ 506 ಹಾಗೂ 420ರಡಿ ಪ್ರಕರಣ ದಾಖಲಾಗಿತ್ತು. ಅಲ್ಲದೇ, ಈ ಸಂಬಂಧ ಪ್ರಧಾನಮಂತ್ರಿ ಕಚೇರಿ ಮತ್ತು ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೂ ನಿರ್ಮಾಪಕ ಪತ್ರ ಬರೆದಿದ್ದರು.