ಬೆಂಗಳೂರು: ನಾಳೆಯಿಂದ 10 ದಿನಗಳ ಕಾಲ ಕೊರೊನಾ ಕರ್ಫ್ಯೂ ವಿಧಿಸಿರುವ ಸಂಬಂಧ ಸುಖಾಸುಮ್ಮನೆ ಯಾರಾದರೂ ವಾಹನದಲ್ಲಿ ಸಂಚರಿಸಿದರೆ ವಾಹನ ಸೀಜ್ ಮಾಡುತ್ತೇವೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ.
ಕರ್ಫ್ಯೂ ವೇಳೆ ಸುಖಾಸುಮ್ಮನೆ ವಾಹನದಲ್ಲಿ ಸುತ್ತಾಡಿದ್ರೆ ಸೀಜ್: ಕಮಲ್ ಪಂತ್ - ಕೊರೊನಾ ಕರ್ಫ್ಯೂ
ಕೊರೊನಾ ಕರ್ಫ್ಯೂ ನಡುವೆ ಅನಾವಶ್ಯಕವಾಗಿ ವಾಹನದಲ್ಲಿ ಸುತ್ತಾಡಿದ್ರೆ ವಾಹನ ಸೀಜ್ ಮಾಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ 144 ಸೆಕ್ಷನ್ ನಗರದಲ್ಲಿ ಜಾರಿಯಲ್ಲಿದೆ. ರಾಜ್ಯ ಸರ್ಕಾರ ನಾಳೆಯಿಂದ ಹತ್ತು ದಿನಗಳ ಕಾಲ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆವರೆಗೂ ಕರ್ಫ್ಯೂ ವಿಧಿಸಿದೆ. ಇದರಂತೆ 10 ಗಂಟೆ ಮೇಲೆ ಯಾರಾದರೂ ಸುಖಾಸುಮ್ಮನೆ ಓಡಾಡುವುದು ಕಂಡು ಬಂದರೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಬಂಧಿಸಲಾಗುವುದು. ವಾಹನಗಳಲ್ಲಿ ಓಡಾಡುವುದು ಕಂಡು ಬಂದರೆ ವಾಹನ ಜಪ್ತಿ ಮಾಡಲಾಗುವುದು. ವೈದ್ಯಕೀಯ ಹಾಗೂ ಅಗತ್ಯ ಸೇವೆಗಳಿಗೆ ವಾಹನಗಳ ಓಡಾಟಕ್ಕೆ ವಿನಾಯಿತಿ ನೀಡಲಾಗಿದೆ. ತಪಾಸಣೆ ವೇಳೆ ಸಂಬಂಧಪಟ್ಟ ದಾಖಲೆ ತೋರಿಸಬೇಕಿದೆ. ರಾತ್ರಿ ಪಾಳಿ ಕೆಲಸ ಮಾಡುವವವರು ರಾತ್ರಿ 10ರೊಳಗೆ ಕೆಲಸ ಮಾಡುವ ಸ್ಥಳದಲ್ಲಿ ಇರಬೇಕು. ತಡವಾಗಿ ರಸ್ತೆಗಿಳಿದರೆ ಅವರಿಗೂ ಅವಕಾಶ ಇಲ್ಲ. ತುರ್ತು ಸೇವೆಗೆ ಓಡಾಟಕ್ಕೆ ಅವಕಾಶ ಇದೆ.
ಹೊಂ ಡೆಲಿವರಿ, ಗೂಡ್ಸ್ ವೆಹಿಕಲ್ಗೆ ಅವಕಾಶ ಇದೆ. ರಾತ್ರಿ ಬೆಂಗಳೂರಿಗೆ ಬರುವ ಹಾಗೂ ಹೊಗುವವರು ರೈಲು, ಬಸ್, ವಿಮಾನದ ಟಿಕೆಟ್ ಹಿಡಿದು ಸಂಚಾರ ಮಾಡಬಹುದು. ಆದರೆ, ಟಿಕೆಟ್ ತೋರಿಸುವುದು ಕಡ್ಡಾಯವಾಗಿದೆ. ರಾತ್ರಿ ಅಂಗಡಿ ಮುಂಗಟ್ಟು ತೆರೆದಿದ್ದರೆ ಮಾಲೀಕರ ವಿರುದ್ದ ಎನ್ಡಿಎಂಎ ಅಡಿ ಕೇಸ್ ದಾಖಲಿಸಲಾಗುವುದು. ಪ್ರಯಾಣಿಕರಿದ್ದಾಗ ಮಾತ್ರ ಒಲಾ ಊಬರ್ ಓಡಾಟ ನಡೆಸಬಹುದು. ತುರ್ತು ಸಂದರ್ಭದಲ್ಲಿ ಓಡಾಡುವವರಿಗೆ ಯಾವುದೇ ಪಾಸ್ ನೀಡುವ ಪ್ರಶ್ನೆ ಉದ್ಭವಿಸಲ್ಲ. ಸಂಬಂದಪಟ್ಟ ದಾಖಲಾತಿ ಅಥವಾ ಗುರುತಿನ ಚೀಟಿ ಹೊಂದಿರುವುದೇ ಪಾಸ್ ಆಗಿರಲಿದೆ. ಮಾಸ್ಕ್, ಪೇಸ್ ಶೀಲ್ಡ್, ಸ್ಯಾನಿಟೈಜರ್ ಜೊತೆಗೆ ಪೊಲೀಸ್ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ನಾಳೆಯಿಂದ ಅಗತ್ಯ ಚೆಕ್ ಪಾಯಿಂಟ್ ಮಾಡಿಕೊಳ್ಳುತ್ತೇವೆ. ಇವತ್ತು ಬ್ಯಾರಿಕೇಡ್ ಹಾಕಲ್ಲ. ಚೆಕ್ ಪಾಯಿಂಟ್ ಹಾಕಲ್ಲ. ಈ ಬಗ್ಗೆ ನಾಳೆ ತಯಾರಿ ಮಾಡಿಕೊಳ್ಳುತ್ತೇವೆ. ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ಗೆ ಉಸ್ತುವಾರಿ ವಹಿಸಲಾಗಿದೆ ಎಂದರು.