ಬೆಂಗಳೂರು: ದುಬಾರಿ ಮೌಲ್ಯದ ಬೈಕ್ ಕದ್ದು ನಕಲಿ ದಾಖಲಾತಿ ಸೃಷ್ಟಿಸಿ ರಾಜಸ್ಥಾನಕ್ಕೆ ಸಾಗಿಸಿ ಮಾರಾಟ ಮಾಡುತ್ತಿದ್ದ ಮೂವರು ಅಂತಾರಾಜ್ಯ ಬೈಕ್ ಖದೀಮರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ರಾಜಸ್ಥಾನ ಮೂಲದ ವಿಕಾಸ್ ಕುಮಾರ್, ದವಲ್ ದಾಸ್, ದಶರತ್ ಬಂಧಿತ ಅರೋಪಿಗಳು. ಖದೀಮರಿಂದ ವಿವಿಧ ಕಂಪನಿಯ 33 ಲಕ್ಷ ಬೆಲೆಬಾಳುವ ಸುಮಾರು 26 ಬೈಕ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳು ಮೆಕ್ಯಾನಿಕ್ ಹಾಗೂ ಹಾರ್ಡ್ವೇರ್ ಶಾಪ್ಗಳಲ್ಲಿ ಕೆಲಸ ಮಾಡುತ್ತಿದ್ದು, ಸುಲಭವಾಗಿ ಹಣ ಸಂಪಾದನೆ ಮಾಡಲೆಂದು ಬೈಕ್ ಕಳ್ಳತನಕ್ಕೆ ಇಳಿದಿದ್ದರು. ಬೆಳಗ್ಗೆ ಮನೆ ಮುಂದೆ ಆಥವಾ ಸಾರ್ವಜನಿಕ ಪ್ರದೇಶಗಳಲ್ಲಿ ನಿಲ್ಲಿಸುತ್ತಿದ್ದ ಬೈಕ್ಗಳ ಹ್ಯಾಂಡಲ್ ಮುರಿದು ಕದಿಯುತ್ತಿದ್ದ ಆರೋಪಿಗಳು ಕದ್ದ ವಾಹನಗಳನ್ನು ಆಂಧ್ರಹಳ್ಳಿಯ ಖಾಲಿ ನಿವೇಶನಗಳಲ್ಲಿ ನಿಲ್ಲಿಸುತ್ತಿದ್ದರು. ಕೆಲ ದಿನಗಳ ಬಳಿಕ ಬೇರೆಯವರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಿ ರಾಜಸ್ಥಾನಕ್ಕೆ ತೆರಳುತ್ತಿದ್ದರು.
ರಾಜಸ್ಥಾನದಿಂದ ನಗರಕ್ಕೆ ಫ್ಲೈಟ್ನಲ್ಲಿ ಬರುತ್ತಿದ್ದ ಖದೀಮರು:
ಬೈಕ್ ಮಾರಾಟದಿಂದ ಬಂದ ಹಣ ಖರ್ಚಾದ ಬಳಿಕ ಮತ್ತೆ ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗಲು ರಾಜಸ್ಥಾನದಿಂದ ಬೆಂಗಳೂರಿಗೆ ವಿಮಾನ ಮಾರ್ಗವಾಗಿ ಬರುತ್ತಿದ್ದರು. ಚಂದ್ರಲೇಔಟ್, ಜ್ಞಾನಭಾರತಿ, ಅನ್ನಪೂರ್ಣೇಶ್ವರಿ ನಗರ, ಕಾಮಾಕ್ಷಿಪಾಳ್ಯ ಸೇರಿದಂತೆ ವಿವಿಧ ಕಡೆಗಳಲ್ಲಿದ್ದ ಬೈಕ್ಗಳನ್ನು ಕಳ್ಳತನ ಮಾಡುತ್ತಿದ್ದರು ಎನ್ನಲಾಗುತ್ತಿದೆ.