ಕರ್ನಾಟಕ

karnataka

By

Published : Feb 3, 2021, 12:36 AM IST

ETV Bharat / state

ಶೌಚಗುಂಡಿಯಲ್ಲಿ ಉಸಿರುಗಟ್ಟಿ ಕಾರ್ಮಿಕರ ಸಾವು : ಸರ್ಕಾರಕ್ಕೆ ಹೈಕೋರ್ಟ್ ತರಾಟೆ

ರಾಜ್ಯದಲ್ಲಿ ಮನುಷ್ಯರಿಂದ ಶೌಚಗುಂಡಿ ಸ್ವಚ್ಛಗೊಳಿಸುವ ಪದ್ಧತಿಯನ್ನು ತಡೆಯಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಎಐಸಿಸಿಟಿಯು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.‌

ಶೌಚಗುಂಡಿಯಲ್ಲಿ ಉಸಿರುಗಟ್ಟಿ ಕಾರ್ಮಿಕರ ಸಾವು
ಶೌಚಗುಂಡಿಯಲ್ಲಿ ಉಸಿರುಗಟ್ಟಿ ಕಾರ್ಮಿಕರ ಸಾವು

ಬೆಂಗಳೂರು : ಕಲಬುರಗಿಯಲ್ಲಿ ಶೌಚಗುಂಡಿ (ಮ್ಯಾನ್‌ಹೋಲ್) ಸ್ವಚ್ಛಗೊಳಿಸುವಾಗ ಇಬ್ಬರು ಪೌರ ಕಾರ್ಮಿಕರು ಸಾವನ್ನಪ್ಪಿದ ಘಟನೆ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ರಾಜ್ಯದಲ್ಲಿ ಮನುಷ್ಯರಿಂದ ಶೌಚಗುಂಡಿ ಸ್ವಚ್ಛಗೊಳಿಸುವ ಪದ್ಧತಿಯನ್ನು ತಡೆಯಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಎಐಸಿಸಿಟಿಯು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.‌

ಈ ವೇಳೆ ಸರ್ಕಾರದ ಪರ ವಕೀಲರು ನ್ಯಾಯಾಲಯದ ನಿರ್ದೇಶನದಂತೆ ರಾಜ್ಯದಲ್ಲಿ ಮನುಷ್ಯರಿಂದ ಮಲಗುಂಡಿ ಸ್ವಚ್ಛಗೊಳಿಸುವ ಪದ್ಧತಿ ನಿಷೇಧ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡಬೇಕೆಂಬ ಆದೇಶದ ಅನುಪಾಲನಾ ವರದಿಯನ್ನು ಸಲ್ಲಿಸಿದರು.

ವರದಿಗೆ ಆಕ್ಷೇಪಿಸಿದ ಅರ್ಜಿದಾರರ ಪರ ವಕೀಲರು, ಸರ್ಕಾರವು ಹೈಕೋರ್ಟ್ ಆದೇಶವನ್ನು ಪಾಲನೆ ಮಾಡಿಲ್ಲ ಎಂಬುದು ವರದಿಯಿಂದ ತಿಳಿಯುತ್ತದೆ. ಅಲ್ಲದೆ, ಕಲಬುರಗಿಯಲ್ಲಿ ಜ.28ರಂದು ಮ್ಯಾನ್‌ಹೋಲ್ ಸ್ವಚ್ಛ ಮಾಡಲು ಗುಂಡಿಗೆ ಇಳಿದಿದ್ದ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದರು.

ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಪೀಠ, ಮನುಷ್ಯರಿಂದ ಮಲಗುಂಡಿ ಸ್ವಚ್ಛಗೊಳಿಸುವ ಪದ್ಧತಿ ನಿಷೇಧ ಮಾಡುವ ಕುರಿತು ಕೋರ್ಟ್ ನೀಡಿರುವ ಆದೇಶವನ್ನು ಸರ್ಕಾರ ಪಾಲಿಸುತ್ತಿಲ್ಲ. ರಾಜ್ಯದಲ್ಲಿ ಕಾಯ್ದೆ ಪಾಲನೆಯಾಗುತ್ತಿಲ್ಲ. ಸರ್ಕಾರ ಆದೇಶ ಪಾಲಿಸದಿದ್ದರೆ ನ್ಯಾಯಾಂಗ ನಿಂದನೆ ಅಡಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿತು.

ಅಲ್ಲದೆ, ಕಲಬುರಗಿಯಲ್ಲಿ ಇಬ್ಬರು ನೌಕರರ ಮಲಗುಂಡಿ ಸ್ವಚ್ಚಗೊಳಿಸುವಾಗ ಸಾವನ್ನಪ್ಪಿದ ಘಟನೆ ಸಂಬಂಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಮಾ.1ರೊಳಗೆ ವರದಿ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ಸೂಚಿಸಿ ವಿಚಾರಣೆ ಮುಂದೂಡಿತು.

ABOUT THE AUTHOR

...view details