ಬೆಂಗಳೂರು:ಕಳಸಾ ಬಂಡೂರಿ ಯೋಜನೆ ವಿಚಾರವಾಗಿ ಉಂಟಾಗಿದ್ದ ಗೊಂದಲಕ್ಕೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತೆರೆ ಎಳೆದಿದ್ದಾರೆ.
ಯೋಜನೆ ಸಂಬಂಧ ಕೇಂದ್ರ ಪರಿಸರ ಇಲಾಖೆ ಅನುಮತಿಯನ್ನು ತಡೆ ಹಿಡಿದು ಪತ್ರ ಬರೆದಿತ್ತು. ಈ ಸಂಬಂಧ ರೈತರು ಆಕ್ರೋಶಗೊಂಡಿದ್ದರು. ಜೊತೆಗೆ ಪ್ರತಿಪಕ್ಷಗಳು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದವು. ಇದೀಗ ಕೇಂದ್ರ ಅರಣ್ಯ ಹಾಗೂ ಪರಿಸರ ಇಲಾಖೆ ಸಚಿವ ಪ್ರಕಾಶ್ ಜಾವಡೇಕರ್, ಬಸವರಾಜ್ ಬೊಮ್ಮಾಯಿಗೆ ಪತ್ರ ಬರೆದು ಸ್ಪಷ್ಟೀಕರಣ ನೀಡಿದ್ದಾರೆ.
ಕಳಸಾ ಬಂಡೂರಿ ಯೋಜನೆ ಸಂಬಂಧ ಯಾವುದೇ ಅನುಮತಿಯನ್ನು ತಡೆ ಹಿಡಿದಿಲ್ಲ. ನ್ಯಾಯಾಧಿಕರಣ ಆದೇಶದ ಅಧಿಸೂಚನೆ ಹೊರ ಬಿದ್ದ ಬಳಿಕ ಹಾಗೂ ಅರಣ್ಯ ಮತ್ತು ವನ್ಯಜೀವಿ ಇಲಾಖೆಯ ಎಲ್ಲ ಅಗತ್ಯ ಅನುಮತಿಗಳನ್ನು ಪಡೆದ ಬಳಿಕ ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಕೈಗೆತ್ತಿಕೊಳ್ಳಬಹುದು ಎಂದು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಪರಿಸರ ಇಲಾಖೆ ಅನುಮತಿ ತಡೆ ಹಿಡಿದಿದ್ದ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್ ಮತ್ತು ಜಲಶಕ್ತಿ ಮಂತ್ರಿ ಜತೆ ಮಾತುಕತೆ ನಡೆಸಿದ್ದರು. ಇತ್ತ ಸಚಿವ ಬಸವರಾಜ್ ಬೊಮ್ಮಾಯಿ ಕೇಂದ್ರ ಜಲಮಂತ್ರಿ ಹಾಗೂ ಅರಣ್ಯ ಹಾಗೂ ಪರಿಸರ ಇಲಾಖೆ ಸಚಿವ ಪ್ರಕಾಶ್ ಜಾವಡೇಕರ್ ಅವರನ್ನು ಖುದ್ದು ಭೇಟಿಯಾಗಿ ಮನವರಿಕೆ ಮಾಡಿದ್ದರು.