ಬೆಂಗಳೂರು: ಕನ್ನಡ ನಾಡಿನ ಅಸ್ಮಿತೆಗೆ ಹೆಸರಾದ ಸರ್ಕಾರಿ ಉದ್ದಿಮೆಗಳು ತಯಾರಿಸುವ ಉತ್ಪನ್ನಗಳ ಎರಡು ಮಾರಾಟ ಮಳಿಗೆಗಳು 'ಕಲಾಲೋಕ' ಎಂಬ ಹೆಸರಿನಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏಪ್ರಿಲ್ ಸುಮಾರಿಗೆ ಆರಂಭವಾಗಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದರು. ವಿಮಾನ ನಿಲ್ದಾಣದ ಅಧಿಕಾರಿಗಳ (ಬಿಐಎಎಲ್) ಉಪಸ್ಥಿತಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಈ ಬಗ್ಗೆ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್‌ಡಿಎಲ್), ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, ಕೆಎಸ್ಐಸಿ (ಕರ್ನಾಟಕ ರೇಷ್ಮೆ ಉದ್ಯಮ ನಿಗಮ), ಕಾಫಿ ಬೋರ್ಡ್ ಮತ್ತು ಲಿಡ್ಕರ್ ಸಂಸ್ಥೆಗಳು ತಯಾರಿಸುವ ಉತ್ಪನ್ನಗಳನ್ನು ಈ ಮಳಿಗೆಗಳಲ್ಲಿ ಮಾರಾಟ ಮಾಡಲಾಗುವುದು. ಇವುಗಳೊಟ್ಟಿಗೆ ನಾಡಿನಲ್ಲಿ ತಯಾರಾಗುವ ಪಾರಂಪರಿಕ ಆಟಿಕೆಗಳಾದ ಚನ್ನಪಟ್ಟಣ ಆಟಿಕೆ, ಇಳಕಲ್ ಸೀರೆ, ಲಂಬಾಣಿ ಕುಸೂತಿ ಇತ್ಯಾದಿ ಉತ್ಪನ್ನಗಳೂ ಕೂಡ ಮಳಿಗೆಗಳಲ್ಲಿ ಮಾರಾಟಕ್ಕೆ ಲಭ್ಯವಿರಲಿವೆ ಎಂದು ಸಚಿವರು ವಿವರಿಸಿದರು. ಇದಕ್ಕಾಗಿ, ಹೊಸದಾಗಿ ನಿರ್ಮಿಸಿರುವ ಟರ್ಮಿನಲ್-2ರ ದೇಶೀಯ ಮತ್ತು ಅಂತಾರಾಷ್ಟ್ರೀಯ ನಿರ್ಗಮನ ವಲಯದಲ್ಲಿ ತಲಾ 180 ಚದುರ ಮೀಟರ್ಗಳ ಜಾಗ ಗುರುತಿಸಲಾಗಿದೆ. ಅಲ್ಲಿ ವಿಭಿನ್ನ ಶೈಲಿಯಲ್ಲಿ ವಿನ್ಯಾಸಗೊಳಿಸಿದ ಆಕರ್ಷಕ ಮಳಿಗೆಗಳಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುವುದು ಎಂದರು.