ಕರ್ನಾಟಕ

karnataka

ETV Bharat / state

ಕುರುಬರಿಗೆ ಎಸ್​ಟಿ ಮೀಸಲಾತಿ ನೀಡಿದರೆ ಸದಾ ಮೋದಿ ಬೆನ್ನ ಹಿಂದೆ ಇರುತ್ತೇವೆ: ಕಾಗಿನೆಲೆ ಶ್ರೀ - ಎಸ್​ಟಿ ಮೀಸಲಾತಿಗಾಗಿ ಕುರುಬ ಸಮುದಾಯ ಪ್ರತಿಭಟನೆ

ಕುರುಬರ ಶಕ್ತಿ ಇಂದು ಬೆಂಗಳೂರಿನಲ್ಲಿ ಪ್ರದರ್ಶನವಾಯಿತು. ಲಕ್ಷಾಂತರ ಕುರುಬ ಸಮುದಾಯದವರು ಬೆಂಗಳೂರಿನ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು, ಎಸ್​ಟಿ ಮೀಸಲಾತಿಗೆ ಹಕ್ಕೊತ್ತಾಯ ಮಾಡಿದರು.ಈ ವೇಳೆ ಮಾತನಾಡಿದ ಕಾಗಿನೆಲೆ ನಿರಂಜನಾನಂದ ಪುರಿ ಸ್ವಾಮೀಜಿ, ಕುರುಬರನ್ನು ಎಸ್​ಟಿಗೆ ಸೇರಿಸಿದರೆ ಸದಾ ಮೋದಿ ಬೆನ್ನ ಹಿಂದೆ ಇರುತ್ತೇವೆ ಎಂದು ಹೇಳಿದ್ರು.

kaginele niranjanapuri swamiji reacts over kuruba community protest
ಬೆಂಗಳೂರು

By

Published : Feb 7, 2021, 7:53 PM IST

ಬೆಂಗಳೂರು:ಎಸ್​ಟಿ ಮೀಸಲಾತಿಗಾಗಿ ಕುರುಬ ಸಮುದಾಯ ಇಂದು ತನ್ನ ಶಕ್ತಿ ಪ್ರದರ್ಶನ ನಡೆಸಿತು. ತುಮಕೂರು‌ ರಸ್ತೆಯ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನದಲ್ಲಿ ಬೃಹತ್ ಸಮಾವೇಶದ ಮೂಲಕ ಎಸ್​ಟಿ ಮೀಸಲಾತಿಗೆ ಹಕ್ಕೊತ್ತಾಯ ಮಾಡಲಾಯಿತು. ಕಂದಾಯ ಸಚಿವ ಆರ್. ಅಶೋಕ್ ಕರ್ನಾಟಕ‌ ಸರ್ಕಾರದ ಪ್ರತಿನಿಧಿಯಾಗಿ ಆಗಮಿಸಿ ಎಸ್​ಟಿ ಮೀಸಲಾತಿ ಆಗ್ರಹದ ಮನವಿ ಪತ್ರವನ್ನು ಸ್ವೀಕರಿಸಿದರು.

ಬೆಂಗಳೂರು
ಲಕ್ಷಾಂತರ ಸಂಖ್ಯೆಯಲ್ಲಿ ಸೇರಿದ್ದ ಕುರುಬ ಸಮುದಾಯದವರು ಬೆಂಗಳೂರಿನ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು, ಎಸ್​ಟಿ ಮೀಸಲಾತಿಗೆ ಹಕ್ಕೊತ್ತಾಯ ಮಾಡಿದರು. ಈ ವೇಳೆ ಮಾತನಾಡಿದ ಕಾಗಿನೆಲೆ ನಿರಂಜನಾನಂದ ಪುರಿ ಸ್ವಾಮೀಜಿ, ಈ ಹೋರಾಟ ಯಾವ ವ್ಯಕ್ತಿಯ ವಿರುದ್ಧವೂ ಅಲ್ಲ, ಪರವೂ ಅಲ್ಲ. ಯಾವ ಪಕ್ಷದ ಪರವೂ ಅಲ್ಲ, ವಿರುದ್ಧವೂ ಅಲ್ಲ. ಇದು ಎಸ್​ಟಿ ಮೀಸಲಾತಿಗಾಗಿ ನಡೆದ ಹೋರಾಟ ಎಂದು ಸ್ಪಷ್ಟಪಡಿಸಿದರು. ನಮಗೆ ಎಸ್ಟಿ ಮೀಸಲಾತಿ ನೀಡಿದರೆ, ನಮ್ಮ ಸಮುದಾಯದವರು ಸದಾ ಮೋದಿಯವರ ಬೆನ್ನಿಗೆ ಇರುತ್ತಾರೆ ಎಂದರು.
ಈ ಪಾದಯಾತ್ರೆ ಕೇವಲ ಕುರುಬ ಸಮುದಾಯದ ಪಾದಯಾತ್ರೆ ಅಲ್ಲ. ಎಲ್ಲ ಸಮುದಾಯದವರು ಪಾದಯಾತ್ರೆಗೆ ಬೆಂಬಲ ನೀಡಿದ್ದಾರೆ. ಪ್ರಧಾನಿ ಹಾಗೂ ಸಿಎಂ ಸಮಾವೇಶವನ್ನು ನೋಡುತ್ತಿದ್ದಾರೆ. ಸಿಎಂ ಅವರೇ, ನೀವು ನಮ್ಮ ಸಮುದಾಯವನ್ನು ಬಹಳ ಪ್ರೀತಿ ಮಾಡುತ್ತೀರಿ. ಅದಕ್ಕಾಗಿ ಕುರುಬ ಸಮುದಾಯದ ನಾಯಕರು ರಾಜೀನಾಮೆ ನೀಡಿ ನಿಮ್ಮನ್ನು ಸಿಎಂ ಮಾಡಿದ್ದಾರೆ. ಕೊಡುವುದು ನಿಮ್ಮ ಧರ್ಮ, ಬೇಡುವುದು ನಮ್ಮ ಕರ್ತವ್ಯ. ನಾವು ಕೇಳಿದ್ದನ್ನು ನೀವು ಕೇಂದ್ರಕ್ಕೆ ಶಿಫಾರಸು ‌ಮಾಡುತ್ತೀರ ಎಂಬ ಆಶಾಭಾವನೆ ಇದೆ. ನೀವು ಕನಕ ಜಯಂತಿಯನ್ನು ಸರ್ಕಾರಿ ರಜೆಯನ್ನಾಗಿ ಘೋಷಿಸಿರುವುದು ಉಪ್ಪಿನಕಾಯಿಯಾಗಿದೆ. ಈಗ ಎಸ್​ಟಿ ಎಂಬ ಊಟ ಕೇಳುತ್ತಿದ್ದೇವೆ. ಅದನ್ನು ಕೊಡುತ್ತೀರಿ ಎಂಬ ಭರವಸೆ ಇದೆ. ಬೇರೆ ಸ್ವಾಮಿಗಳ ತರ ನಾವು ನಿಮ್ಮನ್ನು ಬ್ಲಾಕ್‌ಮೇಲ್ ಮಾಡಲ್ಲ. ನಾವು ಹಾಲು ಮತದ ಕುರುಬರು. ನಾವೇನಿದ್ದರೂ ಹಾಲು ಕೊಡುತ್ತೇವೆ. ನಮ್ಮ ಬೇಡಿಕೆಯನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಆರ್​ಎಸ್ಎಸ್‌ನ ದುಡ್ಡು ಕೊಟ್ಟಿದ್ದಾರೆ ಎಂಬ ಮಾತಿನಿಂದ ಕುರುಬರಿಗೆ ನೋವಾಗಿದೆ:

ಇದೇ ವೇಳೆ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ, ಆರ್​ಎಸ್​ಎಸ್​ನವರು ಈ ಸಮಾವೇಶಕ್ಕೆ ದುಡ್ಡು ಕೊಟ್ಟಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ. ಈ ಮಾತಿನಿಂದ ಕುರುಬರಿಗೆ ನೋವಾಗಿದೆ. ಈ ಮಾತು ಹೇಳಿದವರು ತಮ್ಮ ಮಾತನ್ನು ವಾಪಸ್​ ಪಡೆಯಬೇಕು ಎಂದು ಸಿದ್ದರಾಮಯ್ಯಗೆ ಪರೋಕ್ಷವಾಗಿ ಸಂದೇಶ ರವಾನಿಸಿದರು.

ನಮ್ಮ ಕೃಷ್ಣ ಕಾಗಿನೆಲೆ ಸ್ವಾಮಿಗಳು ಬಡ ಕುರುಬ ಕುಚೇಲರ ಬಳಿ ಬಂದು ಹಣ ಸಂಗ್ರಹ ಮಾಡಿದ್ದಾರೆ. 75 ವರ್ಷದಿಂದ ಎಸ್​ಟಿ ಮೀಸಲಾತಿ ಸಿಕ್ಕಿಲ್ಲ. ಸ್ವಾಮಿಗಳು ಮಲಗಿದ್ದ ಕುರುಬರನ್ನು ಎಬ್ಬಿಸಿದ್ದಾರೆ. ಸೀತೆಯನ್ನು ತರೋದು ಇನ್ನು ಕಷ್ಟ ಅಲ್ಲ. ಸೀತೆಯಲ್ಲಿ ಮೊದಲ ಅಕ್ಷರ ಎಸ್, ಎರಡನೇ ಅಕ್ಷರ ಟಿ. ಈ ಎಸ್​ಟಿ ಯನ್ನು ಕಾಗಿನೆಲೆ ಸ್ವಾಮಿಗಳು ಕರೆ ತರುತ್ತಾರೆ ಎಂದರು.

ಕುರುಬರಿಂದ‌ ಮೇಲಕ್ಕೆ ಬಂದವರು ಬರದಿರುವುದು ನೋವಾಗಿದೆ:
ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನಮ್ಮ ಕೂಗು ಕೇಳಬೇಕು. ಎರಡೂ ಸರ್ಕಾರಗಳು ಕಣ್ಣು ತೆರೆಯಬೇಕು. ಸ್ವಾತಂತ್ರ್ಯ ಪೂರ್ವದಲ್ಲೂ ಎಸ್​ಟಿ ಮೀಸಲಾತಿಗೆ ಸೇರುವ ಈ ಬೇಡಿಕೆ ಇದೆ. ಯಾವ ಕುಲಶಾಸ್ತ್ರ ಅಧ್ಯಯನವೂ ಬೇಕಾಗಿಲ್ಲ. ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಬೇಕು.‌ ಕೇಂದ್ರ ಸರ್ಕಾರ ಕುರುಬ ಸಮುದಾಯವನ್ನು ಎಸ್​ಟಿಗೆ ಸೇರಿಸಬೇಕು. ಇದು ನಮ್ಮ ಹಕ್ಕೊತ್ತಾಯ ಎಂದು ಎಚ್. ವಿಶ್ವನಾಥ್ ಒತ್ತಾಯಿಸಿದರು.

ಇದು ಯಾರ ವಿರುದ್ಧವೂ ಅಲ್ಲ. ಆದರೆ, ನಮ್ಮಲ್ಲಿ ನೋವು ಇದೆ. ಸಮುದಾಯದಿಂದ ಮೇಲಕ್ಕೆ ಬಂದವರು ಈ ಬೃಹತ್ ಸಮಾವೇಶಕ್ಕೆ ಬರದೇ ಇರೋದು ನೋವಿದೆ. ಸ್ವಾಮಿಗಳನ್ನು ಕಂಡು ಅವರ ಆರೋಗ್ಯ ವಿಚಾರಣೆ ಮಾಡಲೂ ಬಂದಿಲ್ಲ. ಕುರುಬ ಸಮುದಾಯದ ತನು ಮನ ಧನ ಅರ್ಪಣೆ ಮಾಡಿ ಮೇಲಕ್ಕೆ ಬಂದವರು ಕಣ್ಣು ತೆರೆಯಬೇಕು ಎಂದು ಸಿದ್ದರಾಮಯ್ಯ ಹೆಸರು ಉಲ್ಲೇಖಿಸದೇ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ಕಂದಾಯ ಸಚಿವ ಆರ್. ಅಶೋಕ್​ರಿಂದ ಮನವಿ ಪತ್ರ ಸ್ವೀಕಾರ:
ಕರ್ನಾಟಕ ಸರ್ಕಾರದ ಪ್ರತಿನಿಧಿಯಾಗಿ ಕಂದಾಯ ಸಚಿವ ಆರ್. ಅಶೋಕ್ ಸಮಾವೇಶಕ್ಕೆ ಆಗಮಿಸಿ, ಸ್ವಾಮೀಜಿಗಳಿಂದ ಮನವಿ ಪತ್ರ ಸ್ವೀಕರಿಸಿದರು‌.
ಇದೇ ವೇಳೆ ಮಾತನಾಡಿದ ಅವರು, ಯಡಿಯೂರಪ್ಪರ ಪ್ರತಿನಿಧಿಯಾಗಿ ಇಲ್ಲಿಗೆ ಬಂದಿದ್ದೇನೆ.‌ ಮನವಿ ಸ್ವೀಕರಿಸಿ ಬರಲು ಸಿಎಂ ಹೇಳಿದ್ದಾರೆ. ಈ ಹೋರಾಟವನ್ನು ನೋಡಿದ್ದೇನೆ, ನೀವು ನೀಡಿದ‌ ಮನವಿ ಪತ್ರವನ್ನು ಸಿಎಂಗೆ ಸಲ್ಲಿಸುತ್ತೇನೆ. ಸ್ವಾಮೀಜಿಗಳು ಹೇಳಿರುವ ಎಲ್ಲಾ ವಿಚಾರವನ್ನು ಸಿಎಂಗೆ ತಿಳಿಸುತ್ತೇನೆ ಎಂದರು.

ABOUT THE AUTHOR

...view details