ಬೆಂಗಳೂರು:ಇಷ್ಟು ವರ್ಷಗಳು ಸಹ ಕ್ರೀಡಾ ವಲಯಕ್ಕೆ ರಾಜ್ಯ ಬಜೆಟ್ನಲ್ಲಿ ಅತಿ ಕಡಿಮೆ ಮೊತ್ತ ಮೀಸಲಿಡಲಾಗುತ್ತಿತ್ತು. ಕನಿಷ್ಠಪಕ್ಷ ಈ ವರ್ಷವಾದರೂ ಹೆಚ್ಚು ಮೊತ್ತವನ್ನು ಕ್ರೀಡಾ ವಲಯಕ್ಕೆ ನೀಡಬೇಕು ಎಂದು ಪದ್ಮಶ್ರೀ ಪುರಸ್ಕೃತ ಅಂತಾರಾಷ್ಟ್ರೀಯ ಪ್ಯಾರಾ ಒಲಿಂಪಿಕ್ ಕ್ರೀಡಾಪಟು ಕೆ. ವೈ ವೆಂಕಟೇಶ್ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.
ಈ ವರ್ಷದಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟ, ಏಷ್ಯನ್ ಕ್ರೀಡಾಕೂಟದಲ್ಲಿ ವಿಕಲಚೇತನ ಕ್ರೀಡಾಪಟುಗಳು ಸಹ ಭಾಗವಹಿಸುತ್ತಾರೆ. ಎಲ್ಲಾ ಕ್ರೀಡಾಪಟುಗಳಿಗೆ ಒಲಿಂಪಿಕ್ಗೆ ಸಹ ಈ ವರ್ಷ ತಯಾರಿ ನಡೆಯುತ್ತದೆ. ಈ ಎಲ್ಲಾ ಕ್ರೀಡಾ ಸ್ಪರ್ಧೆಗಳಲ್ಲಿ ನಮ್ಮ ರಾಜ್ಯದಿಂದ ಬಹಳಷ್ಟು ಜನ ಆಯ್ಕೆಯಾಗಿದ್ದಾರೆ. ರಾಜ್ಯ, ಭಾರತವನ್ನು ಪ್ರತಿನಿಧಿಸುತ್ತಾರೆ. ಈ ಹಿನ್ನೆಲೆ ಕ್ರೀಡಾ ಇಲಾಖೆಗೆ ಮೂಲ ಸೌಕರ್ಯ ಕಲ್ಪಿಸಲು ಹೆಚ್ಚು ಹಣವನ್ನು ಮೀಸಲಿಟ್ಟರೆ ಅನುಕೂಲವಾಗುತ್ತದೆ. ಮೀಸಲಿಟ್ಟ ಹಣವನ್ನು ಹಂತ ಹಂತವಾಗಿ ಕ್ರೀಡಾ ಸಂಸ್ಥೆಗಳಿಗೆ ಕ್ರೀಡಾಪಟುಗಳಿಗೆ ಸಂದಾಯ ಮಾಡಬೇಕು ಎಂದು ಮನವಿ ಮಾಡಿದರು.
ಕೋವಿಡ್ ಕಾರಣ ಕ್ರೀಡಾಪಟುಗಳ ಜೀವನ ಹಾಳು..ಸುಮಾರು ಎರಡು ವರ್ಷಗಳಿಂದ ಬಂದಿರುವ ಕೋವಿಡ್ ಮಹಾಮಾರಿ ಕ್ರೀಡಾಪಟುಗಳ ಜೀವನವನ್ನು ಹಾಳುಮಾಡಿದೆ. ಪುನಃ ಕ್ರೀಡಾರಂಗಕ್ಕೆ ತೆರೆದುಕೊಳ್ಳಲು ರಾಜ್ಯ, ರಾಷ್ಟ್ರೀಯ ಮಟ್ಟದ ಕ್ರೀಡಾ ಕೂಟಗಳು, ತರಬೇತಿ ಶಿಬಿರಗಳನ್ನು ಯೋಜಿಸಬೇಕಾಗಿದೆ. ಹೀಗಾಗಿ, ತಕ್ಷಣ ಹಣ ಬಿಡುಗಡೆ ಮಾಡಿದರೆ ಎಲ್ಲದಕ್ಕೂ ಅನುಕೂಲವಾಗುತ್ತದೆ ಎಂದು ಹೇಳಿದರು.