ಆನೇಕಲ್ :ಸರ್ಕಾರಿ ಶಾಲಾ ಮಕ್ಕಳು ಹೆಚ್ಚು ಆಸಕ್ತಿಯಿಂದ ಕಲಿಯಿರಿ, ಜ್ಞಾನದ ರುವಾರಿಗಳು ನೀವೇ, ನಿಮಗೆ ಉತ್ತಮ ಭವಿಷ್ಯವಿದೆ ಸಾಧಕರೆಲ್ಲ ಸರ್ಕಾರಿ ಶಾಲೆಯಲ್ಲಿ ಓದಿದವರೇ ಎಂದು ಮುಖ್ಯಮಂತ್ರಿ ಪದಕ ವಿಜೇತ, ಜಿಗಣಿ ಸರ್ಕಲ್ ಇನ್ಸ್ಪೆಕ್ಟರ್ ಕೆ. ವಿಶ್ವನಾಥ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
’ವಿದ್ಯೆ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ’
ಮುಖ್ಯಮಂತ್ರಿ ಪದಕ ವಿಜೇತ ಜಿಗಣಿ ಸರ್ಕಲ್ ಇನ್ಸ್ಪೆಕ್ಟರ್ ಕೆ. ವಿಶ್ವನಾಥ್ ಜಿಗಣಿ ಹರಪನಹಳ್ಳಿ ಸರ್ಕಾರಿ ಶಾಲಾ ಮಕ್ಕಳೊಂದಿಗೆ ತಮ್ಮ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ.
ಜಿಗಣಿ ಹರಪನಹಳ್ಳಿ ಸರ್ಕಾರಿ ಶಾಲಾ ಮಕ್ಕಳೊಂದಿಗೆ ತಮ್ಮ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿಕೊಂಡು ಮಾತನಾಡಿದ ಅವರು ಸರ್ಕಾರಿ ಶಾಲೆಯಲ್ಲಿಯೇ ಕಲಿತ ನಮ್ಮ ಹೆಮ್ಮೆಯ ಸರ್ ಎಂ ವಿಶ್ವಶ್ವರಯ್ಯ, ವೈಜ್ಞಾನಿಕ ವಿಚಾರವಾದಿ ಹೆಚ್ ನರಸಿಂಹಯ್ಯ, ಅಬ್ದುಲ್ ಕಲಾಂ ಅವರಂತಹ ಸಾಧಕರ ಸಾಧನೆ ನಮ್ಮ ಕಣ್ಣ ಮುಂದಿದೆ. ಹೀಗಾಗಿ ವಿದ್ಯೆ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ ಎಂದು ಮಕ್ಕಳಿಗೆ ಸ್ಪೂರ್ತಿ ತುಂಬಿದರು.
ಇದೇ ವೇಳೆ ಶಾಲಾ ಶಿಕ್ಷಕರಿಗೆ ಸನ್ಮಾನಿಸಿ ಮಕ್ಕಳಿಗೆ ಕನ್ನಡ - ಇಂಗ್ಲಿಷ್ ನಿಘಂಟು, ನೋಟ್ ಪುಸ್ತಕ, ಜಾಮಿಟ್ರಿ ಬಾಕ್ಸ್ ನೀಡಿ ಮಕ್ಕಳಿಗೆ ಸಿಹಿ ಹಂಚಿ ಹುಟ್ಟುಹಬ್ಬ ಆಚರಿಸಿಕೊಂಡರು. ಅಪಾಯದ ಸಂದರ್ಭದಲ್ಲಿ ಪೊಲೀಸ್ 100, ಅಗ್ನಿಶಾಮಕದಳಕ್ಕೆ 102, ತುರ್ತು ವೈದ್ಯಕೀಯ ಸೇವೆಗಳಿಗೆ 108ನ್ನು ಡಯಲ್ ಮಾಡುವ ಮುಖಾಂತರ ಸಮಾಜಕ್ಕೆ ಅತ್ಯಗತ್ಯವಾಗಿ ಬೇಕಿರುವ ಸಾಮಾನ್ಯ ಬುನಾದಿಯ ಜ್ಞಾನವನ್ನುಗಳಿಸಿ ಎಂದರು. ಅದಲ್ಲದೇ ನಿಮ್ಮ ನಿಮ್ಮ ಮಾತೃ ಭಾಷೆಯಲ್ಲಿ ಕಲಿತರೆ ಸುಲಲಿತವಾಗಿ ಸರಳವಾಗಿ ಕಲಿಯಲು ಅವಕಾಶ ಇರುವುದರಿಂದ ಮೊದಲು ಕನ್ನಡವನ್ನು ಉತ್ಸಾಹದಿಂದ ಕಲಿಯಿರಿ ಅನಂತರ ಆಂಗ್ಲ ಭಾಷೆಯನ್ನು ಕಲಿತು ವಿಶ್ವದೊಂದಿಗೆ ವ್ಯವಹರಿಸಲು ಸಹಕಾರವಾಗುತ್ತದೆ ಎಂದರು.