ಬೆಂಗಳೂರು:ಶುದ್ಧ ಕುಡಿಯುವ ನೀರಿನ ಘಟಕಗಳ ಅವ್ಯವಹಾರ ಪ್ರಕರಣ ಸಂಬಂಧ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಅಗತ್ಯ ಬಿದ್ದರೆ ಸದನ ಸಮಿತಿ ರಚಿಸಲೂ ಸಿದ್ಧವಿರುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಸದನಕ್ಕೆ ಭರವಸೆ ನೀಡಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ರಘುನಾಥ್ ಮಲ್ಕಾಪುರೆ, ಸಾವಿರಾರು ಕೋಟಿ ರೂ. ಖರ್ಚು ಮಾಡಿ ಆರಂಭಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಸರಿಯಾಗಿ ಕಾರ್ಯ ನಿರ್ವಹಿಸದೇ ಹಾಳಾಗಿವೆ. ಸರ್ಕಾರ ಈ ಬಗ್ಗೆ ಕೈಗೊಂಡ ಕ್ರಮಗಳೇನು ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ಕೆ.ಎಸ್.ಈಶ್ವರಪ್ಪ, ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಅನುಷ್ಠಾನಗೊಳಿಸಿರುವ 17,154 ನೀರು ಶುದ್ಧೀಕರಣ ಘಟಕಗಳ ಪೈಕಿ 12,602 ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, 4552 ನೀರು ಶುದ್ಧೀಕರಣ ಘಟಕಗಳು ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕೆ.ಆರ್.ಐ.ಡಿ.ಎಲ್ ಸಂಸ್ಥೆರವರು ಅನುಷ್ಠಾನಗೊಳಿಸಿರುವ ನೀರು ಶುದ್ಧೀಕರಣ ಘಟಕಗಳ ನಿರ್ವಹಣೆಗಾಗಿ ನೀಡಿದ ವಾರ್ಷಿಕ ನಿರ್ವಹಣೆ ಗುತ್ತಿಗೆಯು 2019 ಆಗಸ್ಟ್ 31ಕ್ಕೆ ಕೊನೆಗೊಂಡಿದ್ದು, ಆ ಘಟಕಗಳ ನಿರ್ವಹಣೆಗಾಗಿ ನಿಯಮಾನುಸಾರದಂತೆ ಜಿಲ್ಲಾ ಮಟ್ಟದಲ್ಲಿ ಟೆಂಡರ್ ಕರೆಯಲಾಗಿದೆ. ಟೆಂಡರ್ನಲ್ಲಿ ಗುತ್ತಿಗೆದಾರರಿಗೆ ಸದರಿ ಘಟಕಗಳನ್ನು ಮುಂದಿನ 5 ವರ್ಷಗಳ ನಿರ್ವಹಣೆಗಾಗಿ ಹಸ್ತಾಂತರ ಮಾಡಲು ಕ್ರಮ ವಹಿಸಲಾಗಿದೆ ಎಂದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಟೆಂಡರ್ ಮೂಲಕ ಕೆಆರ್ಐಡಿಎಲ್ ಸಂಸ್ಥೆ ಮೂಲಕ ಸಹಕಾರ ಸಂಘ ಸಂಸ್ಥೆ ಮುಖೇನ ಮತ್ತು ಗ್ರಾಮ ಪಂಚಾಯತಿ ಮಟ್ಟದಲ್ಲಿ ಇತರೆ ಅನುದಾನದಲ್ಲಿ ಅನುಷ್ಠಾನಗೊಳಿಸಿರುವ ಘಟಕಗಳ ಪೈಕಿ ನಿರ್ವಹಣೆ ಅವಧಿ ಮುಗಿದಿರುವ ಇಲ್ಲವೇ ಸಮಸ್ಯೆ ಇರುವ 8142 ಘಟಕಗಳನ್ನು 134 ಪ್ಯಾಕೇಜ್ ಮಾಡಿ ಜಿಲ್ಲಾಮಟ್ಟದಲ್ಲಿ ನಿಯಮಾನುಸಾರ 2020ರ ಫೆಬ್ರವರಿ 28ರ ಮಾಹಿತಿ ಪ್ರಕಾರ 7312 ನೀರು ಶುದ್ಧೀಕರಣ ಘಟಕಗಳನ್ನು ಅನುಮೋದನೆಯಾದ ಟೆಂಡರ್ನಲ್ಲಿ ಮುಂದಿನ 5 ವರ್ಷಗಳ ನಿರ್ವಹಣೆಗಾಗಿ ಹಸ್ತಾಂತರ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಇದಕ್ಕೆ ತೃಪ್ತರಾಗದ ಕಾಂಗ್ರೆಸ್, ಜೆಡಿಎಸ್ ಸದಸ್ಯರು, ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಘಟಕಗಳ ಸ್ಥಾಪನೆ ಮತ್ತು ನಿರ್ವಹಣೆ ಗುತ್ತಿಗೆಯನ್ನು ಯಾವುದೋ ಕಂಪನಿಗೆ ನೀಡುವ ಬದಲು ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ನೀಡುವಂತೆ ಹಾಗೂ ಘಟಕ ಸ್ಥಾಪನೆಗೆ ಶಾಸಕರ ಅನುದಾನ ಬಳಸಿಕೊಳ್ಳಲು ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದರು.
ಪಕ್ಷಾತೀತವಾಗಿ ಸದಸ್ಯರಿಂದ ಬಂದ ಬೇಡಿಕೆಯನ್ನು ಪರಿಗಣಿಸಿದ ಸಚಿವ ಕೆ.ಎಸ್.ಈಶ್ವರಪ್ಪ, ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ಅನುದಾನ ಬಳಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಘಟಕ ನಿರ್ವಹಣೆ ಅವ್ಯವಹಾರ ಆರೋಪ ಕುರಿತ ಘಟಕಕ್ಕೆ ಸಂಬಂಧಿಸಿದ ವರದಿ ಬರುತ್ತಿದ್ದಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಅಗತ್ಯ ಬಿದ್ದರೆ ಸದನ ಸಮಿತಿ ಮಾಡಲೂ ನಾವು ಸಿದ್ಧ ಇದ್ದೇವೆ ಎಂದು ಸದನಕ್ಕೆ ಭರವಸೆ ನೀಡಿದರು.