ಬೆಂಗಳೂರು:ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಬೇಕು ಎನ್ನುವ ಬೇಡಿಕೆ ಕೆಲವರಿಂದ ಬಂದಿದೆ. ಈ ರೀತಿಯ ಚರ್ಚೆ ಕೆಲವರಿಂದ ನಡೆಯುತ್ತಿರುವುದು ನಿಜ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕೆಲವರು ಮುಖ್ಯಮಂತ್ರಿ ಬದಲಾವಣೆಯಾಗಬೇಕು ಅಂತಿದ್ದಾರೆ. ಅದೇ ರೀತಿ ಮತ್ತೆ ಕೆಲವರು ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಸ್ಥಾನದಲ್ಲಿ ಇರಬೇಕು ಅಂತಿದ್ದಾರೆ. ಇನ್ನು ಕೆಲವರು ದೆಹಲಿಗೂ ಹೋಗಿ ಬಂದಿದ್ದಾರೆ ಎಂದು ಪಕ್ಷದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಿದರು.
ನಾನು ಬಹಿರಂಗ ಹೇಳಿಕೆ ಕೊಡಬೇಡಿ ಎಂದು ಎಲ್ಲರಿಗೂ ಹೇಳಿದ್ದೇನೆ. ಮೂರು ಪಕ್ಷದ ಸರ್ಕಾರ ಎಂದಾಗ ಯೋಗೀಶ್ವರ್ಗೂ ಇರುವುದಿದ್ದರೆ ಇರಿ, ಇಲ್ಲ ರಾಜೀನಾಮೆ ಕೊಡಿ, ಆದ್ರೆ ಈ ರೀತಿಯ ಹೇಳಿಕೆ ನೀಡಬೇಡಿ ಎಂದಿದ್ದೆ. ರೇಣುಕಾಚಾರ್ಯ ಸಹಿ ಸಂಗ್ರಹ ಮಾಡಬಾರದು. ಇದನ್ನೇ ನಾನು ಅವರಿಗೂ ಹೇಳಿದ್ದೆ. ನಾಲ್ಕು ಗೋಡೆ ಮಧ್ಯೆ ಇದು ಚರ್ಚೆಯಾಗಬೇಕು. ಆದರೆ ಅದನ್ನು ಬಿಟ್ಟು ಹೊರಗಡೆ ಚರ್ಚೆಯಾಗುತ್ತಿದೆ.
ಈ ಗೊಂದಲ ಬಗೆಹರಿಸುವ ಸಲುವಾಗಿಯೇ ಇವತ್ತು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಬರುತ್ತಿದ್ದಾರೆ. ಇಂದು ಸಚಿವರ ಸಭೆ ನಡೆಸಲಿದ್ದು, ನಾಳೆ ಎಂಎಲ್ಎ, ಎಂಎಲ್ಸಿ ಸಭೆ ಕರೆದಿದ್ದಾರೆ. ನಾಡಿದ್ದು ನಮ್ಮ ಕೋರ್ ಕಮಿಟಿ ಸಭೆ ಇದೆ. ಅಲ್ಲಿ ಎಲ್ಲವೂ ಚರ್ಚೆಯಾಗಲಿದೆ. ಬಿಜೆಪಿಯಲ್ಲಿ ಸಣ್ಣ-ಪುಟ್ಟ ಗೊಂದಲಗಳಿವೆ. ಅರುಣ್ ಸಿಂಗ್ ಬಳಿ ಗೊಂದಲಗಳ ಬಗ್ಗೆ ನಾನು ಗಮನಕ್ಕೆ ತರುತ್ತೇನೆ ಎಂದರು.
ಇದನ್ನೂ ಓದಿ:ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಕಟೀಲ್ ಪುನರುಚ್ಚಾರ
ಕೇಂದ್ರ ನಾಯಕರ ಬಗ್ಗೆ ಗೌರವವಿದೆ. ಅವರು ಬರುತ್ತಿದ್ದು, ಸಮಸ್ಯೆ ಬಗೆಹರಿಸುತ್ತಾರೆ. ಸಮಸ್ಯೆ ಹೇಳಿಕೊಳ್ಳೋಕೆ ಎಲ್ಲರಿಗೂ ಅವಕಾಶವಿದೆ. ಇಲಾಖೆಯಲ್ಲಿ ಸಿಎಂ ಬಿಟ್ಟು ಬೇರೆಯವರು ಮೂಗು ತೂರಿಸ್ತಾರೆಂಬ ವಿಚಾರ ಇದೆ. ಯಾರ್ಯಾರು ಇಲಾಖೆಯಲ್ಲಿ ಮೂಗು ತೂರಿಸಿದ್ದಾರೆ ಎನ್ನುವುದನ್ನು ಅರುಣ್ ಸಿಂಗ್ ಮುಂದೆ ಹೇಳಿಕೊಳ್ಳಲಿ ಎಂದು ತಮ್ಮ ಶಾಸಕರಿಗೆ ಈಶ್ವರಪ್ಪ ಸಲಹೆ ನೀಡಿದರು.