ಬೆಂಗಳೂರು: ಹೊರಗಿನಿಂದ ಬಿಜೆಪಿಗೆ ಬಂದವರು ಜಾಮೂನು ತಿಂದಿದ್ದಾರೆಯೇ ಹೊರತು ಯಾರೂ ವಿಷ ಕುಡಿದಿಲ್ಲ. ಪಕ್ಷದಲ್ಲಿದ್ದುಕೊಂಡು ಈ ರೀತಿ ಆರೋಪ ಮಾಡುವುದು ಸರಿಯಲ್ಲ, ಬೇಕಾದರೆ ಪಕ್ಷ ಬಿಟ್ಟಮೇಲೆ ಟೀಕೆ ಮಾಡಿ, ಹಾಗಂತ ಪಕ್ಷ ಬಿಡಿ ಎಂದು ನಾನು ಹೇಳುತ್ತಿಲ್ಲ. ಪಕ್ಷದಲ್ಲಿ ನಿಷ್ಠೆ, ನಂಬಿಕೆ ಇದ್ದರೆ ನಮ್ಮ ಜೊತೆ ಇರಿ, ನಮ್ಮದು ಶಿಸ್ತಿನ ಪಕ್ಷ, ನಾವು ಎಲ್ಲವನ್ನೂ ಸರಿ ಮಾಡಿಕೊಳ್ಳುತ್ತೇವೆ. ಯಾರ್ಯಾರು ತಲೆಹರಟೆ ಮಾಡುತ್ತಾರೋ ಅವರನ್ನು ಯಾವಾಗ ತೆಗೆಯಬೇಕು ಅಂತಾ ಗೊತ್ತು. ತೆಗೆಯುತ್ತೇವೆ ಎಂದು ಯಶವಂತಪುರ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಅವರಿಗೆ ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು,
ಬಿಜೆಪಿಯವರು ವಿಷ ಕೊಡುತ್ತಾರೆ ಎಂದು ಯಶವಂತಪುರ ಶಾಸಕ ಎಸ್ ಟಿ ಸೋಮಶೇಖರ್ ಹೇಳಿದ್ದಕ್ಕೆ ಪ್ರತಿಕ್ರಿಯಿಸಲು ಇಷ್ಟಪಡಲ್ಲ. ಆದರೆ ಸೋಮಶೇಖರ್ ಪಕ್ಷದಿಂದ ಹೊರ ಹೋಗಲಿ ಎಂದು ನಾನು ಹೇಳಿಯೇ ಇಲ್ಲ. ಬಿಟ್ಟು ಹೋಗಲಿ ಅಂತಾ ಹೇಳಲು ನಾನ್ಯಾರು? ನಮ್ಮ ಪಕ್ಷಕ್ಕೆ ಬಂದ ಅನೇಕರು ಜಾಮೂನು ತಿಂದಿದ್ದಾರೆ. ವಿಷ ಕುಡಿದವರು ಒಬ್ಬರಾದರೂ ಇದ್ದಾರಾ ಎಂದು ಪ್ರಶ್ನಿಸಿದರು.
ಜಾಮೂನು ತಿಂದು ಮಂತ್ರಿಗಳಾದರು, ಅದರಿಂದ ನಾವೂ ಮಂತ್ರಿಗಳಾದೆವು. ಸರ್ಕಾರವೂ ಬಂತು ಈಗ ಯಾವ್ಯಾವುದೋ ಕಾರಣಕ್ಕೆ ನಮ್ಮ ಸರ್ಕಾರ ಬರಲಿಲ್ಲ, ಈಗ ನಮ್ಮ ಸರ್ಕಾರ ಅಧಿಕಾರದಲ್ಲಿದ್ದರೆ ಅವರು ಈ ಮಾತು ಹೇಳುತ್ತಿದ್ದರಾ? ಸೋಮಶೇಖರ್ ಅವರನ್ನು ಟೀಕಿಸುವುದು ನನ್ನ ಉದ್ದೇಶ ಅಲ್ಲ. ನೀವು ಇನ್ನೂ ಬಿಜೆಪಿಯಲ್ಲಿ ಇದ್ದೀರಿ, ನೀವು ಪಕ್ಷ ಬಿಟ್ಟು ಹೋಗಾಯ್ತಾ ಹಾಗಾದರೆ? ವಿಷ ಕುಡಿದಿದ್ದೀರಾ? ಬಿಜೆಪಿಯವರು ಕರೆದುಕೊಂಡು ಬಂದಾಗ ಹೇಗಿರುತ್ತಾರೆ, ಹೋಗುವಾಗ ಹೇಗಿರುತ್ತಾರೆ ಅಂತಾ ಜನ ನೋಡಿದ್ದಾರೆ.
ಪಕ್ಷದಲ್ಲಿದ್ದು ಟೀಕೆ ಮಾಡುವುದು ಸರಿಯಲ್ಲ: ಬಸವರಾಜ ಬೊಮ್ಮಾಯಿ ಬಂದಾಗ ಸಿಎಂ ಸ್ಥಾನ ಕೊಟ್ಟೆವು, ವಿಷ ಕೊಟ್ಟೆವಾ ಅವರಿಗೆ? 17 ಜನರಲ್ಲಿ ಅನೇಕ ಶಾಸಕರು ಬಿಜೆಪಿ ಜೊತೆ ಇದ್ದಾರೆ, ಅವರಲ್ಲಿ ಯಾರೂ ಕೂಡ ತಮಗೆ ವಿಷ ಕೊಟ್ಟಿದ್ದಾರೆ ಅಂತಾ ಹೇಳಲಿಲ್ಲ. ಪ್ರಾಣ ಹೋದರೂ ಬಿಜೆಪಿ ತೊರೆಯಲ್ಲ ಎಂದು ಮುನಿರತ್ನ ಹೇಳಿದ್ದಾರೆ. ಪಕ್ಷ ಬಿಟ್ಟು ಹೋಗಿ ಅಂತಾ ನಾನು ಸೋಮಶೇಖರ್ಗೆ ಹೇಳಿಲ್ಲ, ಪಕ್ಷದಲ್ಲಿ ನಿಷ್ಠೆ, ನಂಬಿಕೆ ಇದ್ದರೆ ನಮ್ಮ ಜೊತೆ ಇರಿ ಅಂತಾ ಅಷ್ಟೇ ಹೇಳಿದ್ದೇನೆ. ಅಧಿಕಾರ ಇದ್ದರೆ ಮಾತ್ರ ಬರುತ್ತೇನೆ, ಇಲ್ಲದಿದ್ದರೆ ಹೋಗುತ್ತೇನೆ ಅಂದರೆ ನಿಮ್ಮಿಷ್ಟ ಅನ್ನುತ್ತೇವೆ. ಅವರನ್ನು ಇಲ್ಲಿ ಇಟ್ಟುಕೊಳ್ಳಲು ನಾನ್ಯಾರು? ಅವರಿಗೆ ಅವರದ್ದೇ ಆದ ಸ್ವಾತಂತ್ರ್ಯ ಇದೆ. ಇದ್ದರೆ ಇರಬಹುದು, ಬಿಟ್ಟರೆ ಹೋಗಬಹುದು. ಹೋದ ಮೇಲೆ ಬೇಕಾದರೆ ಟೀಕೆ ಮಾಡಲಿ. ಇನ್ನೂ ಬಿಜೆಪಿಯಲ್ಲಿ ಇದ್ದು, ನೀವು ಈ ರೀತಿ ಮಾತಾಡಬೇಡಿ ಎಂದು ಈಶ್ವರಪ್ಪ ಮನವಿ ಮಾಡಿದರು.
ಪಕ್ಷದಲ್ಲಿ ಶಿಸ್ತು ಕ್ರಮದ ಅವಶ್ಯಕತೆ ಇದೆ, ಅನೇಕ ಪಕ್ಷಗಳಿಂದ ಬಿಜೆಪಿಗೆ ಬಂದಿದ್ದಾರೆ. ಯಾರನ್ನು ಇಟ್ಟುಕೊಳ್ಳಬೇಕು, ಯಾರನ್ನು ತೆಗೆಯಬೇಕು ಅಂತಾ ನಾವೂ ನೋಡುತ್ತಿದ್ದೇವೆ. ಒಂದೇ ಸಲ ಪಕ್ಷ ಖಾಲಿ ಮಾಡಿಕೊಳ್ಳಲು ನಮ್ಮದು ಕಾಂಗ್ರೆಸ್ ಅಲ್ಲ. ನಮ್ಮದು ಶಿಸ್ತಿನ ಪಕ್ಷ, ನಾವು ಸರಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.
ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಸೇರ್ಪಡೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಯಾವುದೇ ಒಬ್ಬ ವ್ಯಕ್ತಿಯಿಂದ ಬಿಜೆಪಿ ನಿಂತಿಲ್ಲ. ಜಯಪ್ರಕಾಶ್ ಹೆಗ್ಡೆ ಇನ್ನೂ ಬೇರೆ ಕಡೆ ಹೋಗಿಲ್ಲ, ಹೋಗುತ್ತಾರಾ ಅಂತಾ ಗೊತ್ತಿಲ್ಲ. ಇವತ್ತಿನವರೆಗೂ ಅವರು ಪಕ್ಷದ ವಿರುದ್ಧ ಒಂದೂ ಮಾತಾಡಿಲ್ಲ. ಅಂತವರ ಬಗ್ಗೆ ಅನಗತ್ಯವಾಗಿ ಮಾತನಾಡುವುದು ಸರಿಯಲ್ಲ ಎಂದರು.
ಇದನ್ನೂ ಓದಿ:ಪಕ್ಷಕ್ಕೆ ಬರುವಾಗ ಜಾಮೂನು, ಅಧಿಕಾರ ಮುಗಿದ ಮೇಲೆ ವಿಷ : ಬಿಜೆಪಿ ವಿರುದ್ಧ ಎಸ್ ಟಿ ಸೋಮಶೇಖರ್ ಅಸಮಾಧಾನ