ಬೆಂಗಳೂರು: ಕೆ.ಎಸ್ ಈಶ್ವರಪ್ಪ, ರಮೇಶ್ ಜಾರಕಿಹೊಳಿ ಸೂಚನೆ ನೀಡದೆ ಕಲಾಪಕ್ಕೆ ಗೈರಾಗಿದ್ದಾರೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅವರಿಬ್ಬರೂ ನನಗೆ ಸೂಚನೆ ನೀಡದೆ ಕಲಾಪಕ್ಕೆ ಗೈರಾಗಿದ್ದಾರೆ. ಉಳಿದ ಗೈರಾದ ಶಾಸಕರು ನನ್ನ ಅನುಮತಿ ಪಡೆದಿದ್ದಾರೆ. ಯಾವುದೇ ಸಚಿವರು ಗೈರಾದರೆ ಸದನದ ಸಂಪ್ರದಾಯದಂತೆ ನನಗೆ ತಿಳಿಸಬೇಕು. ಮುಂದಿನ ದಿನ ಈ ಸಂಪ್ರದಾಯವನ್ನು ಪಾಲಿಸಬೇಕು ಎಂಬುದು ಎಲ್ಲರ ಮನವಿಯಾಗಿದೆ. ಎಲ್ಲರೂ ಈ ಸದನದ ಘನತೆ ಗೌರವ ಹೆಚ್ಚಿಸಬೇಕು ಎಂದು ಅವರು ತಿಳಿಸಿದರು.
ವಿಧೇಯಕಗಳ ಚರ್ಚೆ: ಮಳೆಗಾಲದ ಅಧಿವೇಶನ ಯಶಸ್ವಿಯಾಗಿ ನಡೆದಿದೆ. 55 ಗಂಟೆ 14 ನಿಮಿಷ ಕಾರ್ಯ ಕಲಾಪ ನಡೆದಿದೆ. 16 ವಿಧೇಯಕಗಳನ್ನು ಮಂಡಿಸಿದ್ದೇವೆ. 14 ವಿಧೇಯಕ ಅಂಗೀಕಾರವಾಗಿದೆ. 1 ವಿಧೇಯಕ ಹಿಂಪಡೆದುಕೊಂಡಿದ್ದೇವೆ. 2 ವಿಧೇಯಕಗಳನ್ನು ಚರ್ಚೆಗೆ ತೆಗೆದುಕೊಳ್ಳಬೇಕಿದೆ. ನಿಯಮ 69 ಅಡಿಯಲ್ಲಿ 7 ಸೂಚನೆಗಳನ್ನು ಚರ್ಚೆ ಮಾಡಲಾಗಿದೆ. 150 ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಿಸಲಾಗಿದೆ. 1,632 ಪ್ರಶ್ನೆಗಳಿಗೆ ಲಿಖಿತ ಮೂಲಕ ಉತ್ತರಿಸಲಾಗಿದೆ. 85 ಗಮನ ಸೆಳೆಯುವ ಸೂಚನೆಯನ್ನು ಕಾರ್ಯಕಲಾಪ ಪಟ್ಟಿಗೆ ಸೇರಿಸಿ ಚರ್ಚೆ ಮಾಡಲಾಗಿದೆ ಎಂದು ತಿಳಿಸಿದರು.