ಕರ್ನಾಟಕ

karnataka

By ETV Bharat Karnataka Team

Published : Aug 24, 2023, 9:01 AM IST

ETV Bharat / state

ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪ : ಕೆ.ಆರ್.ಪುರ ತಾಲೂಕು ಕಚೇರಿ ಸೂಪರ್‌ವೈಸರ್ 5 ದಿನ ಪೊಲೀಸ್​ ವಶಕ್ಕೆ

ಆದಾಯ ಮೀರಿ ಆಸ್ತಿ ಗಳಿಕೆ ಆರೋಪದಡಿ ಕೆ ಆರ್ ಪುರಂ ತಾಲೂಕು ಕಚೇರಿ ಸರ್ವೆ ಸೂಪರ್​​ವೈಸರ್ ಕೆ ಟಿ ಶ್ರೀನಿವಾಸ್ ಮೂರ್ತಿ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಐದು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿದೆ.

Lokayukta office
ಲೋಕಾಯುಕ್ತ

ಬೆಂಗಳೂರು: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಕೆ.ಆರ್.ಪುರ ತಾಲೂಕು ಕಚೇರಿ ಸೂಪರ್‌ವೈಸರ್ ಕೆ.ಟಿ.ಶ್ರೀನಿವಾಸಮೂರ್ತಿ ಅವರನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯವು ಐದು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿದೆ.

ಅಕ್ರಮ ಆಸ್ತಿ ಬಗ್ಗೆ ಸಮರ್ಪಕವಾದ ಮಾಹಿತಿ ನೀಡಿದ ಕಾರಣ ಲೋಕಾಯುಕ್ತ ಪೊಲೀಸರು ಶ್ರೀನಿವಾಸಮೂರ್ತಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿತ್ತು. ಈ ವೇಳೆ ಹೆಚ್ಚಿನ ವಿಚಾರಣೆ ನಡೆಸಲು ಆರೋಪಿಯನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದರು. ಪೊಲೀಸರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು ಆರೋಪಿಯನ್ನು ಐದು ದಿನಗಳ ಲೋಕಾಯುಕ್ತ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.

ಲೋಕಾಯುಕ್ತ ಪೊಲೀಸರು ಮಂಗಳವಾರ ಶ್ರೀನಿವಾಸ್‌ಮೂರ್ತಿಗೆ ಸೇರಿದ್ದ 14 ಕಡೆ ಏಕಕಾಲಕ್ಕೆ ದಾಳಿ ನಡೆಸಿದ್ದರು. ಈ ವೇಳೆ ತಪಾಸಣೆ ನಡೆಸಿದಾಗ ಹಲವು ಮಹತ್ವದ ಮಾಹಿತಿಗಳು ಲೋಕಾಯುಕ್ತರಿಗೆ ಸಿಕ್ಕಿದ್ದವು. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿತ್ತು. ಮಹತ್ವದ ದಾಖಲೆಗಳು ಸಿಕ್ಕಿರುವ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆ ನಡೆಸಲು ಲೋಕಾಯುಕ್ತ ಪೊಲೀಸರು, ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದರು. ಅವರ ಮನವಿಯನ್ನು ಕೋರ್ಟ್​ ಪುರಸ್ಕರಿಸಿದೆ.

9 ಜಿಲ್ಲೆಯ 14 ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ: ಆಗಸ್ಟ್​ 17 ರಂದು ರಾಜ್ಯದ ಒಂಭತ್ತು ಜಿಲ್ಲೆಯ 14 ಸರ್ಕಾರಿ ಅಧಿಕಾರಿಗಳ ಮನೆ ಮತ್ತು ಕಚೇರಿ ಸೇರಿದಂತೆ 45 ಕ್ಕೂ ಹೆಚ್ಚು ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಅಧಿಕ ಪ್ರಮಾಣದ ನಗದು ಮತ್ತು ಆಸ್ತಿ ಪಾಸ್ತಿಯನ್ನು ಪತ್ತೆ ಹಚ್ಚಿದ್ದರು. ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ರಾಜ್ಯದ ವಿವಿಧೆಡೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದರು.

ಇದನ್ನೂ ಓದಿ :Lokayukta raid : ಸರ್ವೆ ಸೂಪರ್​​ವೈಸರ್ ಮನೆ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

ದಾಳಿ ವೇಳೆ ಶ್ರೀನಿವಾಸ್ ಅವರ ಅಂಧ್ರಳ್ಳಿಯಲ್ಲಿ ನಿವೇಶನ, ಹಾಗೂ ಪತ್ನಿ ರಾಯಪುರದಲ್ಲಿ ಭೋಗ್ಯಕ್ಕೆ ಪಡೆದಿರುವ ಜಮೀನು, ಪತ್ನಿ ಮತ್ತು ಸಹೋದರಿಯ ಸಹಭಾಗಿತ್ವದಲ್ಲಿ ಹೊಂದಿರುವ ಹೋಟೆಲ್ ಮತ್ತು ಬೋರ್ಡಿಂಗ್ಸ್, ಐದಕ್ಕೂ ಹೆಚ್ಚು ಅಬಕಾರಿ ಲೈಸೆನ್ಸ್, ಹೆಣ್ಣೂರು ಗ್ರಾಮದಲ್ಲಿ 2 ಸಾವಿರ ಚದರ್​ ಮೀಟರ್​ ವಿಸ್ತೀರ್ಣದ ಒಂದು ನಿವೇಶನ ಹಾಗೂ ನಿರ್ಮಾಣ ಹಂತದ ಕಟ್ಟಡ, ಕೊತ್ತನೂರು ಗ್ರಾಮದಲ್ಲಿ ನಿವೇಶನ, ಲಕ್ಕೇನಹಳ್ಳಿಯಲ್ಲಿ ಒಂದು ಮನೆ, 5ಕ್ಕೂ ಅಧಿಕ ಅಬಕಾರಿ ಲೈಸೆನ್ಸ್ ಹೊಂದಿರುವುದು ತಿಳಿದುಬಂದಿತ್ತು.

ಇದನ್ನೂ ಓದಿ :Lokayukta Raids: ರಾಜ್ಯದ 9 ಜಿಲ್ಲೆಯ 14 ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ: ಯಾರ ಮನೆಯಲ್ಲಿ ಎಷ್ಟು ಆಸ್ತಿ ಪತ್ತೆ?

ABOUT THE AUTHOR

...view details