ಬೆಂಗಳೂರು: ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎನ್ ಕೆ ಸುಧೀಂದ್ರ ರಾವ್ ಅವರನ್ನು ರಾಜ್ಯ ಪೊಲೀಸ್ ದೂರು ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಸೋಮವಾರ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಪೊಲೀಸ್ ದೂರು ಪ್ರಾಧಿಕಾರದ ಅಧ್ಯಕ್ಷರಾಗಿದ್ದ ನ್ಯಾಯಮೂರ್ತಿ ಸಿ ಆರ್ ಕುಮಾರಸ್ವಾಮಿ ಅವರ ಮೂರು ವರ್ಷಗಳ ಅವಧಿಯು 2022ರ ಜುಲೈ 18ರಂದು ಪೂರ್ಣಗೊಂಡಿದ್ದರಿಂದ ಅವರನ್ನು ಸೇವೆಯಿಂದ ಬಿಡುಗಡೆ ಮಾಡಲಾಗಿತ್ತು. ಈ ಸ್ಥಾನಕ್ಕೆ ನ್ಯಾ. ಸುಧೀಂದ್ರ ರಾವ್ ಅವರನ್ನು ನೇಮಕ ಮಾಡಲಾಗಿದೆ.
ʼಭ್ರಷ್ಟಾಚಾರ ವಿರೋಧಿ ನ್ಯಾಯಮೂರ್ತಿʼ ಎಂದೇ ಪ್ರಸಿದ್ಧರಾಗಿದ್ದ ಸುಧೀಂದ್ರ ರಾವ್ ಅವರು, ಅಕ್ರಮ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಅಂದಿನ ಲೋಕಾಯುಕ್ತ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾಗಿದ್ದಾಗ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಕೃಷ್ಣಯ್ಯ ಶೆಟ್ಟಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸೇರಿದಂತೆ ಹಲವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದ್ದರು.