ಬೆಂಗಳೂರು:ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳದ ಬಗ್ಗೆ ಸಚಿವ ಸಂಪುಟ ತೆಗೆದುಕೊಂಡ ಮಹತ್ವದ ತೀರ್ಮಾನವನ್ನು ಸರಕಾರಿ ಆದೇಶದ ಮೂಲಕ ತಕ್ಷಣವೇ ಜಾರಿಗೊಳಿಸಲು ಯಾವುದೇ ಕಾನೂನು ತೊಡಕುಗಳು ಅಡ್ಡಿಬರುವುದಿಲ್ಲ ಎಂದು ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳಾದ ಎಸ್ಸಿ - ಎಸ್ಟಿ ಮೀಸಲು ಹೆಚ್ಚಳ ವಿಚಾರಣೆ ಆಯೋಗದ ಅಧ್ಯಕ್ಷರಾಗಿದ್ದ ನ್ಯಾ. ಹೆಚ್ ಎನ್ ನಾಗಮೋಹನದಾಸ್ ಅವರು ತಿಳಿಸಿದ್ದಾರೆ.
ರಾಜ್ಯ ಸರಕಾರವು ತಮ್ಮ ನೇತೃತ್ವದ ವಿಚಾರಣೆ ಆಯೋಗದ ಶಿಫಾರಸುಗಳನ್ನು ಜಾರಿಗೆ ತರುವ ಬಗ್ಗೆ ತೆಗೆದುಕೊಂಡ ನಿರ್ಣಯದ ಬಗ್ಗೆ ನ್ಯಾಯಮೂರ್ತಿ ನಾಗಮೋಹನದಾಸ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಆದೇಶ ಜಾರಿಗೆ ತರುವ ಕುರಿತು ''ಈ ಟಿವಿ ಭಾರತ'' ಕ್ಕೆ ನೀಡಿದ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ರಾಜ್ಯ ಸರಕಾರವು ತಕ್ಷಣವೇ ಕ್ಯಾಬಿನೆಟ್ ನಲ್ಲಿ ಕೈಗೊಂಡ ತೀರ್ಮಾನದ ಬಗ್ಗೆ ಸರಕಾರಿ ಆದೇಶ ಮೂಲಕ ಅನುಷ್ಟಾನಕ್ಕೆ ತರಬೇಕೆಂದು ಸಲಹೆ ನೀಡಿದ್ದಾರೆ.